ಬೆಂಗಳೂರು: ಜನ್ಮದಿನದಂದು ಬಿಎಂಡಬ್ಲ್ಯು ಬೈಕ್‌ನಲ್ಲಿ ಜಾಲಿರೈಡ್ ಹೊರಟಿದ್ದ ವೇಳೆ ಅಪಘಾತ ಸಂಭವಿಸಿದ್ದು, ಖಾಸಗಿ ವಿಶ್ವವಿದ್ಯಾಲಯವೊಂದರ ಉಪ ಕುಲಪತಿಯ ಮಗ ಸೇರಿ ಇಬ್ಬರು ಮೃತಪಟ್ಟಿದ್ದಾರೆ.
‘ಆರ್‌ಎಂಸಿ ಯಾರ್ಡ್ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಉರುಳಿಬಿದ್ದು ಶುಕ್ರವಾರ ನಸುಕಿನ 3.20ರ ಸುಮಾರಿಗೆ ಅಪಘಾತ ಸಂಭವಿಸಿದೆ. ಬೈಕ್ ಚಲಾಯಿಸುತ್ತಿದ್ದ ನಿಖಿಲ್ (25) ಹಾಗೂ ಹಿಂಬದಿ ಸವಾರ ಮನಮೋಹನ್ (31) ಮೃತಪಟ್ಟಿದ್ದಾರೆ’ ಎಂದು ಯಶವಂತಪುರ ಸಂಚಾರ ಠಾಣೆ ಪೊಲೀಸರು ಹೇಳಿದರು.
‘ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಅವಘಡ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸವಾರ ನಿಖಿಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.
ತಂದೆ–ತಾಯಿ ಜೊತೆ ಕೇಕ್ ಕತ್ತರಿಸಿದ್ದ: ‘ಆರ್‌ಎಂವಿ ಎಕ್ಸ್‌ಟೆನ್ಶನ್ ನಿವಾಸಿ ನಿಖಿಲ್, ಖಾಸಗಿ ವಿಶ್ವವಿದ್ಯಾಲಯವೊಂದರ ಉಪ ಕುಲಪತಿಯ ಮಗ. ಸೆ. 22ರಂದು ನಿಖಿಲ್ ಅವರ ಜನ್ಮದಿನವಿತ್ತು. ತಡರಾತ್ರಿ 12 ಗಂಟೆಗೆ ತಂದೆ–ತಾಯಿ ಜೊತೆ ನಿಖಿಲ್ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.
‘ಬಸ್ ಚಾಲಕರೊಬ್ಬರ ಮಗ ಮನಮೋಹನ್, ನಿಖಿಲ್ ಅವರನ್ನು ತಡರಾತ್ರಿ ಭೇಟಿಯಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಎಂ.ಜಿ. ರಸ್ತೆ ಹಾಗೂ ಸುತ್ತಮುತ್ತ ಹೋಗಿ ಬರುತ್ತೇನೆ’ ಎಂದು ತಂದೆ–ತಾಯಿಗೆ ಹೇಳಿದ್ದ ನಿಖಿಲ್, ಸ್ನೇಹಿತ ಮನಮೋಹನ್ ಜೊತೆ ಬಿಎಂಡಬ್ಲ್ಯು ಬೈಕ್‌ನಲ್ಲಿ ಮನೆಯಿಂದ ಹೊರಟಿದ್ದರು’ ಎಂದು ತಿಳಿಸಿದರು.
‘ನಿಖಿಲ್ ಅವರು ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿದ್ದರು. ಆರ್.ಎಂ.ಸಿ ಯಾರ್ಡ್ ಬಳಿ ನಿಯಂತ್ರಣ ತಪ್ಪಿದ್ದ ಬೈಕ್, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಉರುಳಿಬಿದ್ದಿತ್ತು. ತೀವ್ರ ಗಾಯಗೊಂಡು ಇಬ್ಬರೂ ಮೃತಪಟ್ಟಿದ್ದಾರೆ’ ಎಂದು ಹೇಳಿದರು.
‘ಮದ್ಯ ಕುಡಿದು ಬೈಕ್ ಚಲಾಯಿಸಿದ್ದರಿಂದ ಅಪಘಡ ಸಂಭವಿಸಿರುವ ಅನುಮಾನವಿದೆ. ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅದರ ವರದಿ ಬರಬೇಕಿದೆ. ಜೊತೆಗೆ, ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲವೆಂಬುದು ಗೊತ್ತಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.