ಬೆಂಗಳೂರು: ಗರುಡಾಚಾರ ಪಾಳ್ಯ ಮೆಟ್ರೊ ನಿಲ್ದಾಣ ಬಳಿ ಸಂಚಾರ ನಿಯಮ ಉಲ್ಲಂಘಿಸಿ ಯು–ಟರ್ನ್ ಪಡೆದು ಅಪಾಯಕಾರಿ ರೀತಿಯಲ್ಲಿ ಶಾಲಾ ವಾಹನ ಚಲಾಯಿಸಿದ್ದ ಚಾಲಕನಿಗೆ ಪೊಲೀಸರು ದಂಡ ವಿಧಿಸಿದ್ದಾರೆ.
ಜುಲೈ 19ರಂದು ನಿಯಮ ಉಲ್ಲಂಘಿಸಿದ್ದ ಚಾಲಕನ ಕೃತ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ಸಾರ್ವಜನಿಕರೊಬ್ಬರು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದರು. ವಿಡಿಯೊ ಆಧರಿಸಿ ಕ್ರಮ ಜರುಗಿಸಿರುವ ಮಹದೇವಪುರ ಸಂಚಾರ ಠಾಣೆ ಪೊಲೀಸರು, ಚಾಲಕನನ್ನು ಪತ್ತೆ ಮಾಡಿ ದಂಡ ವಿಧಿಸಿದ್ದಾರೆ.
‘ವಾಹನ ದಟ್ಟಣೆ ಹೆಚ್ಚಿರುವ ರಸ್ತೆಯಲ್ಲಿ ಹೊರಟಿದ್ದ ಚಾಲಕ, ಶಾಲಾ ವಾಹನವನ್ನು (ಕೆಎ 53 ಎಎ6189) ಅಪಾಯಕಾರಿ ರೀತಿಯಲ್ಲಿ ಚಲಾಯಿಸಿ ಯೂ– ಟರ್ನ್ ತೆಗೆದುಕೊಂಡಿದ್ದ. ಆದರೆ, ಈ ರಸ್ತೆಯಲ್ಲಿ ಯೂ–ಟರ್ನ್ ಪಡೆಯುವುದನ್ನು ನಿರ್ಬಂಧಿಸಲಾಗಿದೆ’ ಎಂದು ಸಂಚಾರ ಪೊಲೀಸರು ಹೇಳಿದರು.
‘ವಿಡಿಯೊ ಗಮನಕ್ಕೆ ಬರುತ್ತಿದ್ದಂತೆ ವಾಹನವನ್ನು ಪತ್ತೆ ಮಾಡಿ ದಂಡ ವಿಧಿಸಿ, ಎಚ್ಚರಿಕೆ ನೀಡಲಾಗಿದೆ’ ಎಂದು ತಿಳಿಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೊ ಗಮನಿಸಿ ಚಾಲಕನನ್ನು ಪತ್ತೆ ಮಾಡಿ ದಂಡ ವಿಧಿಸಿರುವ ಪೊಲೀಸರ ಕೆಲಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.