ಬೆಂಗಳೂರು: ‘ಪದವಿ ಪೂರೈಸಿದವರಿಗೆ ಉದ್ಯೋಗ ಗ್ಯಾರಂಟಿ ನೀತಿ ರೂಪಿಸುವ ಅಗತ್ಯವಿದೆ. ಅದಕ್ಕಾಗಿ ಶಾಸನ ಸಭೆಯ ಭಾಗವಾಗಲು ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಮಾಡಿದ್ದೇನೆ’ ಎಂದು ಆರ್.ಎಸ್.ಉದಯ್ ಸಿಂಗ್ ಹೇಳಿದರು.
‘ದೇಶದ ಕಾನೂನು ಎಲ್ಲ ಅವಕಾಶ ಕೊಟ್ಟರೂ, ರಾಜಕೀಯ ವ್ಯವಸ್ಥೆ ಅದನ್ನು ವಂಚಿಸುತ್ತಿದೆ. ಕಾಲಕಾಲಕ್ಕೆ ನೇಮಕಾತಿ ನಡೆಯದೇ 2.50 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ವಿದ್ಯಾರ್ಹತೆ, ಸಮಯ, ವಯಸ್ಸಿಗೆ ಅನುಗುಣವಾಗಿ ಸರಿಯಾದ ಕೆಲಸ ಸಿಗುತ್ತಿಲ್ಲ. ಇಂತಹ ನ್ಯೂನತೆಗಳ ವಿರುದ್ಧ ವಕೀಲನಾಗಿ ಇಷ್ಟು ದಿನ ನೊಂದ ಅಭ್ಯರ್ಥಿಗಳ ಪರ ಕಾನೂನು ಹೋರಾಟ ಮಾಡಿದ್ದೇನೆ’ ಎಂದರು.
ನೇಮಕಾತಿ ಹಗರಣ, ವಿಳಂಬದಿಂದಾಗಿ ಬಹುತೇಕ ಪದವೀಧರರು ಉದ್ಯೋಗದ ಭರವಸೆಯನ್ನೇ ಕಳೆದುಕೊಂಡಿದ್ದಾರೆ. ಪದವೀಧರರ ಕ್ಷೇತ್ರದ ಪ್ರತಿನಿಧಿಗಳು ಧ್ವನಿ ಕಳೆದುಕೊಂಡಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಬೋಧಕೇತರ ಹುದ್ದೆಗಳನ್ನು ತುಂಬದ ಕಾರಣ ಎಲ್ಲ ಕೆಲಸವನ್ನು ಬೋಧಕರೇ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ದೂರಿದರು.
ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಟಿ.ಎಚ್. ಆಂಜನಪ್ಪ, ಚಿಂತಕ ಹುಲಿಕಲ್ ನಟರಾಜ್, ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ರಮೇಶ್ ಕುಮಾರ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವೆಂಕಟಗಿರಿ, ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ನಿರ್ದೇಶಕ ಜಗದೀಶ್ವರ್, ಕರ್ನಾಟಕ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಗೌಡ, ಉಜ್ವಲ ಸ್ಪರ್ಧಾತ್ಮಕ ಪರೀಕ್ಷಾ ಅಕಾಡೆಮಿ ನಿರ್ದೇಶಕ ಕೆ.ಯು. ಮಂಜುನಾಥ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.