ADVERTISEMENT

ವ್ಯಕ್ತಿಗಳನ್ನು ಮನುಷ್ಯರನ್ನಾಗಿಸುವ ಸಂಗೀತ: ಅಪ್ಪಗೆರೆ ತಿಮ್ಮರಾಜು

ಮುಂಗಾರು ಸಂಗೀತ ರಸಗ್ರಹಣ ಸಪ್ತಾಹದಲ್ಲಿ ಅಪ್ಪಗೆರೆ ತಿಮ್ಮರಾಜು ಅಭಿಮತ

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 15:37 IST
Last Updated 1 ಜೂನ್ 2024, 15:37 IST
‘ಮುಂಗಾರು ಸಂಗೀತ ರಸಗ್ರಹಣ ಸಪ್ತಾಹ’ ಸಮಾರಂಭವನ್ನು ಅಪ್ಪಗೆರೆ ತಿಮ್ಮರಾಜು ಉದ್ಘಾಟಿಸಿದರು. ರಾಧಾಕೃಷ್ಣ, ಎಲ್. ವೆಂಕಟಪ್ಪ, ಹರೀಶ ನರಸಿಂಹ ಹಾಗೂ ಶ್ರೀರಾಮೇಗೌಡ ಪಾಲ್ಗೊಂಡಿದ್ದರು. 
‘ಮುಂಗಾರು ಸಂಗೀತ ರಸಗ್ರಹಣ ಸಪ್ತಾಹ’ ಸಮಾರಂಭವನ್ನು ಅಪ್ಪಗೆರೆ ತಿಮ್ಮರಾಜು ಉದ್ಘಾಟಿಸಿದರು. ರಾಧಾಕೃಷ್ಣ, ಎಲ್. ವೆಂಕಟಪ್ಪ, ಹರೀಶ ನರಸಿಂಹ ಹಾಗೂ ಶ್ರೀರಾಮೇಗೌಡ ಪಾಲ್ಗೊಂಡಿದ್ದರು.    

ಬೆಂಗಳೂರು: ‘ಸಂಗೀತವು ವ್ಯಕ್ತಿಗಳನ್ನು ಹೆಚ್ಚು ಮನುಷ್ಯರನ್ನಾಗಿಸುತ್ತದೆ. ಮಾನವೀಯ ಸಂವೇದನೆಗಳ ಜಾಗೃತಿಗೆ ಸಂಗೀತ ಸಹಾಯಕ’ ಎಂದು ಜಾನಪದ ತಜ್ಞ ಅಪ್ಪಗೆರೆ ತಿಮ್ಮರಾಜು ತಿಳಿಸಿದರು. 

ಉದಯಭಾನು ಕಲಾಸಂಘ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮುಂಗಾರು ಸಂಗೀತ ರಸಗ್ರಹಣ ಸಪ್ತಾಹ’ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.

‘ಆದಿಮ ಕಾಲದಿಂದ ಬಂದ ಜನಪದೀಯ ಪರಂಪರೆಯಲ್ಲಿ 650ಕ್ಕೂ ಹೆಚ್ಚು ಕಲೆಗಳು ಸಂಪ್ರದಾಯ ಪರಂಪರೆಗಳಾಗಿ  ವಿಕಸಿಸಿವೆ. ವರ್ತಮಾನದಲ್ಲಿ ಅವುಗಳೇ ಜನಪದ ಪ್ರದರ್ಶನ ಕಲೆಗಳಾಗಿ ಹೊಸ ತಲೆಮಾರಿನ ಕಲಾಭಿವ್ಯಕ್ತಿಗೆ ಮಾಧ್ಯಮಗಳಾಗಿವೆ’ ಎಂದರು.

ADVERTISEMENT

ಸಂಘದ ಗೌರವ ಕಾರ್ಯದರ್ಶಿ ಕೆ.ರಾಧಾಕೃಷ್ಣ, ‘ಸಂಘದ ವಜ್ರ ಮಹೋತ್ಸವದ ಸಂದರ್ಭದಲ್ಲಿ ಸಂಘವು ಹಿಂದೆಂದಿಗಿಂತಲೂ ಹೆಚ್ಚು ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಮುನ್ನಡೆಯುತ್ತಿದೆ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಆರೋಗ್ಯ, ವೃತ್ತಿಕೌಶಲ, ಕಲಾಕೌಶಲ ತರಬೇತಿಗಳಲ್ಲಿ ಹೆಚ್ಚಿನ ಜನರಿಗೆ ನೆರವಾಗುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಶ್ರೀರಾಮೇಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕ ಎಲ್.ವೆಂಕಟಪ್ಪ ಉಪಸ್ಥಿತರಿದ್ದರು. ಶಿಬಿರದ ಸಂಯೋಜಕ, ಸಂಗೀತ ಕಲಾವಿದ ಹರೀಶ ನರಸಿಂಹ ಅವರು ಶಿಬಿರಾರ್ಥಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.

‌ಮೊದಲ ದಿನದ ಶಿಬಿರವನ್ನು ಅಪ್ಪಗೆರೆ ತಿಮ್ಮರಾಜು ನಡೆಸಿಕೊಟ್ಟರು. ಸ್ವರ-ಲಯ-ಧ್ವನಿ ಸಂಸ್ಕಾರ ಶಿಬಿರಕ್ಕೆ ಒಟ್ಟು 98 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.