ಬೆಂಗಳೂರು: ‘ಸರ್ವಾಧಿಕಾರ ಎಂಬುದು ಕೊನೆಯಿಲ್ಲದ ಅಧಿಕಾರವಲ್ಲ. ಅದಕ್ಕೂ ವಾಯಿದೆ ಇದ್ದೇ ಇರುತ್ತದೆ. ಇರುಳು ಸುದೀರ್ಘ ಎನಿಸಿದರೂ ಕತ್ತಲು ಸರಿದು ಬೆಳಕು ಹರಿಯಲೇಬೇಕು’ ಎಂದು ಹಿರಿಯ ಪತ್ರಕರ್ತ ಡಿ. ಉಮಾಪತಿ ಅಭಿಪ್ರಾಯಪಟ್ಟರು.
‘ಬಯಲು ಬಳಗ’ ಶನಿವಾರ ಹಮ್ಮಿಕೊಂಡಿದ್ದ ‘ಭಾರತದ ವರ್ತಮಾನದ ತಲ್ಲಣಗಳು’ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ‘ಕುರ್ಚಿಯನ್ನು ಕೈವಶ ಮಾಡಿಕೊಳ್ಳಲು ಮೇಲುಕೀಳಿನ ಸಂಕೋಲೆಗಳನ್ನು ಹೊಸ ಲೋಕದಿಂದ ಗಟ್ಟಿಗೊಳಿಸುವುದು. ಹೊಸ ಲೋಕವನ್ನು ತಯಾರು ಮಾಡುವ ಯತ್ನ 1925ರಿಂದಲೂ ನಡೆದಿದೆ. ಆ ಯತ್ನ ಯಶಸ್ವಿಯೂ ಆಗಿದೆ’ ಎಂದು ಹೇಳಿದರು.
‘ಇದಕ್ಕಾಗಿ, ಜನ ಸಮುದಾಯಗಳ ಪ್ರಜ್ಞೆಯ ಆಳದಲ್ಲಿ ಮಲಗಿದ್ದ ಸರ್ಪವನ್ನು ಹಿಂದೆಂದೂ ಇಲ್ಲದಂತೆ ತಿವಿದು, ಕೆರಳಿಸಿ, ಕ್ರುದ್ಧಗೊಳಿಸಲಾಗಿದೆ. ತಾವು ಹಾಕಿದ ಗೆರೆಯನ್ನು ದಾಟುವ ಆದಿವಾಸಿಗಳು, ಅಲ್ಪಸಂಖ್ಯಾತರು, ದಲಿತರು ಹಾಗೂ ಮಾನವಹಕ್ಕುಗಳ ಹೋರಾಟಗಾರರನ್ನು ಸರ್ಪಕ್ಕೆ ಬಲಿ ನೀಡಲಾಗುತ್ತಿದೆ. ಹೂತ್ಕರಿಸಿರುವ ಉರಗ ಸದ್ಯಕ್ಕೆ ಸುಮ್ಮನಾಗುವ ಸೂಚನೆಗಳು ಕಾಣಿಸುತ್ತಿಲ್ಲ. ಜನಸಮುದಾಯದ ಮೈ ಮನಸ್ಸಿಗೆ ತಗುಲಿದ ವ್ಯಾಧಿ ಅಷ್ಟೇ ತ್ವರಿತವಾಗಿ ಗುಣವಾಗುವುದು ಕಷ್ಟ’ ಎಂದು ಅವರು ಹೇಳಿದರು.
‘ಈ ಕಾಲದಲ್ಲಿ ತಮ್ಮ ಧ್ವನಿಯನ್ನು ನೆಚ್ಚಿನ ನಾಯಕ ಅಪಹರಿಸಿದ್ದಾನೆ ಎಂಬ ಅರಿವಿಲ್ಲದಷ್ಟು ಜನ ಮೈಮರೆತಿದ್ದಾರೆ. ನಿತ್ಯ ಬದುಕುಗಳು ತಲೆಕೆಳಗಾದರೂ ಅದರ ಪರಿವೆ ಇರುವುದಿಲ್ಲ. ಕಷ್ಟ ನಷ್ಟಗಳು ಬೆನ್ನು ಹತ್ತಿದರೂ ಅವರಿಗೆ ಗೊತ್ತಾಗುವುದಿಲ್ಲ. ನೀತಿ ನಿರ್ಧಾರಗಳಿಂದ ಗಾಯಗೊಂಡವರು ತಮ್ಮ ಮೇಲಾದ ಹಸಿ ಕ್ರೌರ್ಯವನ್ನೇ ಕೊಂಡಾಡುತ್ತಾರೆ. ನೋಟು ರದ್ದತಿಯಿಂದ ಒಳ್ಳೆಯದಾಯಿತು ಎಂದು ಹೇಳುತ್ತಿರುವುದು ಇದಕ್ಕೊಂದು ನಿದರ್ಶನ’ ಎಂದರು.
‘ಕಿಂದರ ಜೋಗಿಯ ಹಿಂದೆ ಓಡುವ ಮೂಷಿಕ ಸಮೂಹವನ್ನು ಈ ದೇಶ ಕಂಡಿದೆ. ಗರೀಬಿ ಹಠಾವೋ ಎಂಬ ‘ಪವಾಡ’ವನ್ನೂ ನೋಡಿದ್ದೇವೆ. ಈಗಲೂ ಅಂತಹದೇ ನಡೆಯುತ್ತಿದೆ. ಇಂತಹ ಹೊತ್ತಿನೊಳಗೆಇನ್ನು ನಮ್ಮ ಜವಾಬ್ದಾರಿ ತೀರಿತೆಂದು, ಪವಾಡ ನಡೆಯುತ್ತದೆ ಎಂದು ಜನರು ಸುಮ್ಮನೆ ಕೂರುತ್ತಾರೆ. ಇದು ವ್ಯಾಧಿಗ್ರಸ್ತ ಜನತಂತ್ರದ ಲಕ್ಷಣ’ ಎಂದು ಉಮಾಪತಿ ವಿಶ್ಲೇಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.