ADVERTISEMENT

ಅನಧಿಕೃತ ನೀರು ಸಂಪರ್ಕ: ಪಿಜಿಗಳ ವಿರುದ್ದ ಕ್ರಮ

ವಾರದಲ್ಲಿ ವರದಿ ನೀಡಲು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 15:09 IST
Last Updated 5 ಏಪ್ರಿಲ್ 2024, 15:09 IST
ತುಂಗಾಭದ್ರಾ ಬಡಾವಣೆಯಲ್ಲಿ ಕೊಳವೆಬಾವಿಯನ್ನು ಮತ್ತಷ್ಟು ಆಳಕ್ಕೆ ಕೊರೆದು, ಜಲಮಂಡಳಿ ಸಿಬ್ಬಂದಿ ಹೆಚ್ಚಿನ ಪೈಪ್‌ಲೈನ್‌ ಅಳವಡಿಸಿದರು.
ತುಂಗಾಭದ್ರಾ ಬಡಾವಣೆಯಲ್ಲಿ ಕೊಳವೆಬಾವಿಯನ್ನು ಮತ್ತಷ್ಟು ಆಳಕ್ಕೆ ಕೊರೆದು, ಜಲಮಂಡಳಿ ಸಿಬ್ಬಂದಿ ಹೆಚ್ಚಿನ ಪೈಪ್‌ಲೈನ್‌ ಅಳವಡಿಸಿದರು.   

ಬೆಂಗಳೂರು: ಕಾವೇರಿ ನೀರಿನ ಸಂಪರ್ಕವನ್ನು ಅನಧಿಕೃತವಾಗಿ ಹೊಂದಿರುವ ಪೇಯಿಂಗ್‌ ಗೆಸ್ಟ್‌  (ಪಿಜಿ) ಕಟ್ಟಡಗಳ ವಿರುದ್ದ ಕ್ರಮ ಕೈಗೊಂಡು, ವಾರದೊಳಗೆ ವರದಿ ಸಲ್ಲಿಸುವಂತೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರ ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಕಾಡುಗೋಡಿ ನಿವಾಸಿಯೊಬ್ಬರು ಪಿಜಿಗಳು ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದಿರುವುದಾಗಿ ತಿಳಿಸಿದರು. ಅಂಬೇಡ್ಕರ್ ನಗರದಲ್ಲಿ ಕಾವೇರಿ ನೀರಿನ ಸಂಪರ್ಕ, ಒಳಚರಂಡಿ ಸಂಪರ್ಕವನ್ನು ಅನಧಿಕೃತವಾಗಿ ಪಡೆದಿರುವ 43 ಮಂದಿ, ಪಿಜಿಗಳನ್ನು ನಡೆಸುತ್ತಿದ್ದಾರೆ ಎಂದು ದೂರಿದರು.

ಇದಕ್ಕೆ ಸ್ಪಂದಿಸಿದ ಜಲಮಂಡಳಿ ಅಧ್ಯಕ್ಷರು, ‘ನಗರದ ಹಲವು ಭಾಗಗಳಿಂದ ಇಂತಹ ದೂರುಗಳು ಬರುತ್ತಿವೆ. ವಾಣಿಜ್ಯ ಉದ್ದೇಶದ ಸಂಪರ್ಕ ಪಡೆದುಕೊಂಡು ಪಿಜಿಗಳನ್ನು ನಡೆಸುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಅನಧಿಕೃತವಾಗಿ ಸಂಪರ್ಕ ಪಡೆದುಕೊಳ್ಳುವುದು, ಆ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವುದು ಸರಿಯಲ್ಲ. ಈ ಬಗ್ಗೆ ಅಧಿಕಾರಿಗಳು ಕೂಡಲೇ ಕಾರ್ಯಾಚರಣೆ ನಡೆಸಿ, ಕ್ರಮ ಕೈಗೊಂಡ ವರದಿಯನ್ನು ಒಂದು ವಾರದಲ್ಲಿ ನೀಡಬೇಕು’ ಎಂದು ಸೂಚಿಸಿದರು.

ADVERTISEMENT

ಫೋನ್‌ ಇನ್ ಕಾರ್ಯಕ್ರಮದಲ್ಲಿ ದಾಖಲಾದ ದೂರುಗಳ ಸಮಸ್ಯೆಗಳನ್ನು ಈಡೇರಿಸಲು ಅಧಿಕಾರಿಗಳು ಕೂಡಲೇ ಕ್ರಮ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸಂಪರ್ಕಾಧಿಕಾರಿ ದೂರುಗಳನ್ನು ಲಿಖಿತ ರೂಪದಲ್ಲಿ ಸಂಬಂಧಪಟ್ಟ ಮುಖ್ಯ ಎಂಜಿನಿಯರ್‌ಗೆ ರವಾನಿಸಬೇಕು. ಕ್ರಮ ಕೈಗೊಂಡ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ವಾರದೊಳಗೆ ವರದಿಯನ್ನು ಸಲ್ಲಿಸಬೇಕು ಎಂದರು.

ಮಾಗಡಿ ರಸ್ತೆ ಹಾರೋಹಳ್ಳಿ ಬಳಿಯ ತುಂಗಾಭದ್ರಾ ಬಡಾವಣೆ ನಿವಾಸಿ ವಿದ್ಯಾ, ‘ಜಲಮಂಡಳಿಯ ಕೊಳವೆ ಬಾವಿಯಲ್ಲಿ ನೀರು ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಇನ್ನಷ್ಟು ಆಳಕ್ಕೆ ಕೊರೆಯಿಸಿದಲ್ಲಿ ನೀರಿನ ಪ್ರಮಾಣ ಹೆಚ್ಚಿಗೆಯಾಗುತ್ತದೆ’ ಎಂದು ಹೇಳಿದರು. ಇದರ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಸಂಜೆ ವೇಳೆಗೆ ಅಧಿಕಾರಿಗಳು ಕ್ರಮ ಕೈಗೊಂಡರು.

ವಿಲ್ಸನ್ ಗಾರ್ಡ್ ಬಳಿಯ ಬಿಟಿಎಸ್ ರಸ್ತೆಯ ಬಳಿ ಜಲಮಂಡಳಿ ಪೈಪ್‌ನಿಂದ ನೀರು ಸೋರಿಕೆಯಾಗುತ್ತಿದೆ ಎಂದು ವೀಣಾ ಅವರು ದೂರು ನೀಡಿದರು.

ಕಾವೇರಿ 5ನೇ ಹಂತ: ಪೊಲೀಸರೊಂದಿಗೆ ಚರ್ಚೆ
‘ಕಾವೇರಿ 5ನೇ ಹಂತದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಜಲಮಂಡಳಿಗೆ ಅಗತ್ಯ ಸಹಕಾರ ನೀಡುವುದಾಗಿ ಬೆಂಗಳೂರು ಸಂಚಾರ ಪೊಲೀಸರು ಭರವಸೆ ನೀಡಿದ್ದಾರೆ’ ಎಂದು ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದರು. ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್‌ ಕಮಿಷನರ್‌ ಎಂ.ಎನ್‌. ಅನುಚೇತ್‌ ಅವರೊಂದಿಗೆ ಸಭೆ ನಡೆಸಿದ್ದು ನಗರದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸಂಚಾರ ಪೊಲೀಸರು ನೆರವು ನೀಡಲಿದ್ದಾರೆ. ರಸ್ತೆಗಳಲ್ಲಿ ಕಾಮಗಾರಿಗಳಿಗೆ ತಡೆಯಾಗದಂತೆ ಕ್ರಮ ಕೈಗೊಳ್ಳಲಿದ್ದಾರೆ ಎಂದರು. ಏಪ್ರಿಲ್‌ ಅಂತ್ಯಕ್ಕೆ ಪೈಪ್‌ಲೈನ್‌ ಅಳವಡಿಕೆ ಕಾರ್ಯವನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.