ADVERTISEMENT

ಭೂಗತರ ನಡುವಿನ ಕೊಂಡಿ ಈ ಗುಲಾಂ!

ಬಂಧನದಲ್ಲಿರುವ ಪಾತಕಿ ರವಿ ಪೂಜಾರಿಯ ಬಂಟ * ಪೊಲೀಸರಿಗೂ ಮಾಹಿತಿದಾರ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 22:26 IST
Last Updated 3 ಜೂನ್ 2020, 22:26 IST
ಗುಲಾಂ
ಗುಲಾಂ   

ಬೆಂಗಳೂರು: ಮಂಗಳೂರಿನಲ್ಲಿ ಕೇಂದ್ರ ಅಪರಾಧ ದಳದ ಪೊಲೀಸರು ಬಂಧಿಸಿರುವ ಭೂಗತಪಾತಕಿ ರವಿ ಪೂಜಾರಿಯ ಸಹಚರ ಮಹಮದ್ ಗುಲಾಂ, ವಿದೇಶಗಳಲ್ಲಿ ತಲೆಮರೆಸಿಕೊಂಡಿರುವವರ ಪಾತಕಿಗಳ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದ ಸಂಗತಿ ಪೊಲೀಸರ ವಿಚಾರಣೆಯಿಂದ ಬಯಲಾಗಿದೆ.

ಭೂಗತ ಪಾತಕಿಗಳ ಜೊತೆ ಸಂಪರ್ಕದಲ್ಲಿರುತ್ತಿದ್ದ ಗುಲಾಂ, ಪೊಲೀಸ್ ಅಧಿಕಾರಿಗಳಿಗೂ ಮಾಹಿತಿದಾರನಾಗಿದ್ದ. ಪೊಲೀಸ್ ಅಧಿಕಾರಿಗಳ ಬಗ್ಗೆಯೂ ಭೂಗತರಿಗೆ ಮಾಹಿತಿ ರವಾನಿಸುತ್ತಿದ್ದ. ರವಿ ಪೂಜಾರಿಯನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದು, ಈ ವೇಳೆ ಪೂಜಾರಿಗೆ ಉದ್ಯಮಿಗಳು ಮತ್ತು ರಾಜಕಾರಣಿಗಳ ಹೆಸರು, ಮೊಬೈಲ್‌ ಸಂಖ್ಯೆ, ಹಣಕಾಸು ವ್ಯವಹಾರಗಳ ವಿವರಗಳನ್ನು ಗುಲಾಂ ನೀಡುತ್ತಿದ್ದಿದ್ದು ಗೊತ್ತಾಗಿದೆ. ಗುಲಾಂನ ಪಾಸ್‌ಪೋರ್ಟ್ ಮತ್ತು ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ

ರವಿ ಪೂಜಾರಿಯಿಂದ ಬೆದರಿಕೆ ಕರೆ ಬಂದವರು ಗುಲಾಂ ಮೂಲಕ ಆತನನ್ನು ಸಂಪರ್ಕಿಸುತ್ತಿದ್ದರು. ಬಳಿಕ ಅವರ ಬಳಿ ಪೂಜಾರಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಆ ಹಣವನ್ನೂ ಗುಲಾಂ ಮೂಲಕವೇ ಉದ್ಯಮಿಗಳು ರವಿ ಪೂಜಾರಿಗೆ ಕಳುಹಿಸುತ್ತಿದ್ದರು. ಆ ಹಣದಲ್ಲಿ ಗುಲಾಂಗೂ ಪಾಲು ಸಿಗುತ್ತಿತ್ತು ಎಂದು ಗೊತ್ತಾಗಿದೆ.

ADVERTISEMENT

ರವಿ ಪೂಜಾರಿ ನೀಡಿದ ಹೇಳಿಕೆ ಆಧರಿಸಿ, ಸಿಸಿಬಿ ಇನ್‌ಸ್ಪೆಕ್ಟರ್ ಬೋಳೆತ್ತಿನ್ ಮತ್ತು ತಂಡ ಗುಲಾಂನನ್ನು ಬಂಧಿಸಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಅವಧಿಗೆ ಪೊಲೀಸ್ ವಶಕ್ಕೆ ನೀಡಲಾಗಿದೆ.

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪಾತಕಿಗಳು, ಮಂಗಳೂರು ಮತ್ತು ಬೆಂಗಳೂರಿನ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸುವಾಗ ಗುಲಾಂನನ್ನು ಮಧ್ಯವರ್ತಿಯಾಗಿ ಕಳುಹಿಸುತ್ತಿದ್ದರು. ಈ ಪಾತಕಿಗಳ ಬಗ್ಗೆ ಮಾಹಿತಿ ಪಡೆಯಲು ಅಪರಾಧ ವಿಭಾಗದ ಪೊಲೀಸರು ಗುಲಾಂನನ್ನೇ ಅವಲಂಬಿಸಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದರು.

ಬನ್ನಂಜೆ ಬಂಧನಕ್ಕೂ ನೆರವು: ಭೂಗತ ಪಾತಕಿ ಬನ್ನಂಜೆ ರಾಜನನ್ನು ಬಂಧಿಸಲು ಪೊಲೀಸ್ ಅಧಿಕಾರಿಗಳಿಗೆ ಗುಲಾಂ ನೆರವಾಗಿದ್ದ. ಬನ್ನಂಜೆ ರಾಜನ ವಿಳಾಸ ಪತ್ತೆ ಹಚ್ಚಲು ವಿದೇಶಕ್ಕೂ ಹೋಗಿದ್ದ. ಈತನ ಜತೆಗೆ ಒಬ್ಬ ಪೊಲೀಸ್ ಅಧಿಕಾರಿಯೂ ವಿದೇಶಕ್ಕೆ ತೆರಳಿದ್ದರು.

ರವಿ ಪೂಜಾರಿ ಸಹಚರನ ಬಂಧನ
ಮಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಸಹಚರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಗುಲಾಂ, ರವಿ ಪೂಜಾರಿ ಮಾಡುವ ಕೃತ್ಯಕ್ಕೆ ಸಹಾಯ ಮಾಡುತ್ತಿದ್ದ.

ಈತನನ್ನು ಬಂಧಿಸಿರುವ ಸಿಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸದ್ಯ ಗುಲಾಂನನ್ನು 10 ದಿನ ಪೊಲೀಸ್‌ ಕಸ್ಟಡಿಗೆ ತೆಗೆದುಕೊಂಡಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿ ಗುಲಾಂ, ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದು, ಇತ್ತೀಚೆಗೆ ರಿಯಲ್ ಎಸ್ಟೇಟ್ ವ್ಯವಹಾರ ಕೂಡ ಮಾಡುತ್ತಿದ್ದ ಎನ್ನುವ ಮಾಹಿತಿ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ರಾಜ್ಯ ಪೊಲೀಸರ ತಂಡ ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಸೆನೆಗಲ್‌ನಲ್ಲಿ ವಶಕ್ಕೆ ಪಡೆದಿತ್ತು. ರವಿ ಪೂಜಾರಿ ವಿರುದ್ಧ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.