ಬೆಂಗಳೂರು: ಚಿನ್ನಾಭರಣ ಕಳವು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲಿನಿಂದ ಬಿಡುಗಡೆಯಾಗಿದ್ದ ಚಿನ್ನಾಭರಣ ಅಂಗಡಿ ಮಾಲೀಕರೊಬ್ಬರು ಜೂಜಾಟದ ಅಡ್ಡೆ ನಡೆಸುತ್ತಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಈ ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ರಾಜ್ ಜೈನ್ ತಲೆಮರೆಸಿಕೊಂಡಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದರು.
ಜಗಜೀವನ್‌ರಾಮ್ ನಗರ ಠಾಣೆ ವ್ಯಾಪ್ತಿಯ ಸಿರ್ಸಿ ವೃತ್ತದ ಪಾರ್ಕ್ ವೆಸ್ಟ್ ಅಪಾರ್ಟ್‌ಮೆಂಟ್‌ನಲ್ಲಿ ಜೂಜಾಟ ನಡೆಸುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳಿಂದ ಅಂದು ₹1.43 ಲಕ್ಷ ನಗದು ಜಪ್ತಿ ಮಾಡಲಾಗಿತ್ತು. ಬಳಿಕ ಮನೆಯನ್ನು ಶೋಧಿಸಿದಾಗ 2 ಬ್ಯಾಗ್‌ಗಳಲ್ಲಿ ದಾಖಲೆಗಳಿಲ್ಲದ ₹ 85.39 ಲಕ್ಷ ನಗದು ಪತ್ತೆಯಾಗಿದೆ. ಜೆ.ಜೆ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.
‘ಆರೋಪಿ ರಾಜ್‌ಜೈನ್ ನಗರ್ತ್ ಪೇಟೆಯಲ್ಲಿ ಚಿನ್ನಾಭರಣ ಶಾಪ್ ಹೊಂದಿದ್ದು ತನ್ನ ಕೆಲಸಗಾರರ ಮೂಲಕ ಕಳುಹಿಸಿದ್ದ 3.5 ಕೆ.ಜಿ. ಚಿನ್ನಾಭರಣ ಕಳವು ನಡೆದಿದೆ ಎಂದು ಕಾಟನ್‌ಪೇಟೆ ಠಾಣೆಯಲ್ಲಿ ದೂರು ನೀಡಿದ್ದ. ಬಳಿಕ ತನಿಖೆಯಲ್ಲಿ ಈತನೇ ಕಳವು ಮಾಡಿರುವುದು ಪತ್ತೆಯಾಗಿ, ಬಂಧಿಸಲಾಗಿತ್ತು’ ಎಂದು ಕಮಿಷನರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.