ADVERTISEMENT

ಇದೇ 15ಕ್ಕೆ ‘ಮರೆಯಲಾಗದ ಮಹನೀಯರು‘ ನುಡಿ ನಮನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 12:37 IST
Last Updated 13 ನವೆಂಬರ್ 2024, 12:37 IST

ಬೆಂಗಳೂರು: "ಮಾನವನೆತ್ತರ ಆಗಸದೇರಿಗೆ ಏರುವವರೆಗೂ ಏರೇವು" ಎಂಬ ಆಶಾವಾದದ ಸಾಲುಗಳನ್ನು ನಮಗೆ ನೀಡಿದ ಹಿರಿಯ ಸಾಹಿತಿಗಳು, ಡಾ.ವಿ.ಸೀತಾರಾಮಯ್ಯನವರು( ಜನನ: 2 ಅಕ್ಟೋಬರ್ 1899). ಅವರು ಮುಖ್ಯವಾಗಿ 1950 ಮತ್ತು 1960ರ ದಶಕದಲ್ಲಿ ಕನ್ನಡ ಸಾಹಿತ್ಯದ ನವೋದಯ ಚಳುವಳಿಯನ್ನು ಸಾಕಾರಗೊಳಿಸಿದವರಲ್ಲಿ ಪ್ರಮುಖರು. ಅವರ ಕಾಲದಲ್ಲಿ ಪ್ರಚಲಿತವಾಗಿದ್ದ ಪ್ರತಿಯೊಂದು ಕಲ್ಪಿತ ಪ್ರಕಾರ ಮತ್ತು ಬರವಣಿಗೆಯ ಶೈಲಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು. " ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು "ಎಂಬ ಗೀತೆಯು ಮನೆ ಮಾತಾಗಿತ್ತು ಮತ್ತು ಎಂದೆಂದಿಗು ಪ್ರಸ್ತುತ.

ಡಾ. ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ (ಜನನ:29 ಅಕ್ಟೋಬರ್ 1936) ಅವರು ತಮ್ಮ ಭಾವಗೀತೆಗಳ ಮೂಲಕ ಮಹತ್ತರವಾದ ಸೇವೆಯನ್ನು ಸಲ್ಲಿಸಿ, ಸುಗಮ ಸಂಗೀತ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದ ಹಿರಿಯ ಕವಿಗಳು. ಅವರ ಭಾವಗೀತೆಗಳಷ್ಟೇ ಅಲ್ಲದೆ,ಸಂತ ಶಿಶುನಾಳ ಶರೀಫರ ಕವನಗಳನ್ನು ಸಂಗ್ರಹಿಸಿ, ಅದನ್ನು ಪುಸ್ತಕ ಮತ್ತು ಧ್ವನಿಮುದ್ಧಕೆಯ ಮೂಲಕ ಮನೆಮನೆ ಮಾತಾಗಿಸುವಂತೆ ಮಾಡಿದವರು. ಸುಗಮ ಸಂಗೀತದ ಬಹುತೇಕ ಎಲ್ಲಾ ಪ್ರಮುಖ ಸಂಯೋಜಕರಿಗೆ ಮತ್ತು ಗಾಯಕರಿಗೆ ಇವರು ನಿರಂತರ ಮಾರ್ಗದರ್ಶನವನ್ನು ನೀಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಸಹೃದಯರು.

ಮೈಸೂರು ಅನಂತಸ್ವಾಮಿ (ಜನನ: 25 ಅಕ್ಟೋಬರ್ 1936) ಅವರು ಕನ್ನಡ ಸುಗಮ ಸಂಗೀತ ಲೋಕದ ದೊರೆ ಎಂಬ ಕೀರ್ತಿಗೆ ಭಾಜನರಾದವರು ಮತ್ತು ಇವರನ್ನು ಡಾ. ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರು ತಮ್ಮ ಒಂದು ಕವನದಲ್ಲಿ "ಸುಗಮ ಗೀತಾಚಾರ್ಯರು "ಎಂದೆ ಹಾಡಿ ಹೊಗಳಿದ್ದರು.

ADVERTISEMENT

‘ಓ ನನ್ನ ಚೇತನ, ಆಗು ನೀ ಅನಿಕೇತನ’ ಎಂಬ ಅನಂತತೆಯ ಅನಿಕೇತನದಲ್ಲಿ ನಮ್ಮನ್ನು ಒಂದಾಗಿಸುವ ಪರಿ, ‘ಎದೆ ತುಂಬಿ ಹಾಡಿದೆನು ಅಂದು ನಾನು’ ಎಂಬುದನ್ನು ಕೇಳಿದಾಗಲೆಲ್ಲಾ ಆ ಗೀತೆ ಅಮರವಾಗಿರುವ ಪರಿ, ‘ಕುರಿಗಳು ಸಾರ್ ಕುರಿಗಳು’ ಎಂದಾಗ ನಮ್ಮನ್ನೇ ನಾವು ಕುರಿಮಂದೆಯಲ್ಲಿ ಕಂಡುಕೊಳ್ಳುವ ಆತ್ಮ ವಿಡಂಬನಾತ್ಮಕ ಭಾವ, ‘ನಾನು ಕೊಳೀಕೆ ರಂಗ’ ಹಾಡಿನಲ್ಲಿ ಬೆಪ್ ನನ್ಮಗ ಎಂದಾಗ ಬೆಚ್ಚುವ ತನ, ‘ಜೋಗದ ಸಿರಿ ಬೆಳಕಿನಲ್ಲಿ’ ಹಾಡಿದಾಗ ನಾಡಿನ ಬಗ್ಗೆ ಪ್ರೀತಿ ಹುಟ್ಟಿಸಿಕೊಳ್ಳುವ ಪರಿ, ‘ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ' ಎಂದಾಗ ತಾನೇ ತಾನಾಗಿ ಹುಟ್ಟುವ ವಿರಕ್ತಭಾವ ,ಇಂತಹ ಅನಂತಸ್ವಾಮಿಯವರು ನೀಡಿರುವ ಸಹಸ್ರಾರು ಭಾವಗಳಿಗೆ ನಾವು ಮಾತು ಕೊಡುವುದಾದರೂ ಹೇಗೆ ಸಾಧ್ಯ. ಅದು, ಆಳದ ಅನುಭಾವಗಳಾಗಿ ನಿಲ್ಲುವಂತಹವು.

ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ವತಿಯಿಂದ, ಇದೇ 15 ರಂದು ಸಂಜೆ 5 ಗಂಟೆಗೆ ,ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ "ಮರೆಯಲಾಗದ ಮಹನೀಯರು" ಎಂಬ ಶೀರ್ಷಿಕೆಯಡಿಯಲ್ಲಿ ನುಡಿ ನಮನ ಮತ್ತು ಗೀತ ಗೌರವವನ್ನು ಆಯೋಜಿಸಲಾಗಿದೆ.

ಇದೇ ಸಂದರ್ಭದಲ್ಲಿ ,"ಚಹಾದ ಜೋಡಿ ಚೂಡದಾಂಗ" ಖ್ಯಾತಿಯ ಹಿರಿಯ ಕವಿ ಮತ್ತು ಬರಹಗಾರರಾದ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಅವರಿಗೆ 85ನೇ ಹುಟ್ಟು ಹಬ್ಬದ ಅಭಿನಂದನಾ ಸಮಾರಂಭವನ್ನು ಮತ್ತು ಗೀತ ಗೌರವವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ, ಡಾ||ವಿ.ಸೀ ಅವರಿಗೆ ಸಾಹಿತಿ ಮತ್ತು ವಿಮರ್ಶಕರಾದ ಶ್ರೀ ಎಸ್ ದಿವಾಕರ್ , ಜನಪ್ರಿಯ ಕವಿಗಳಾದ ಶ್ರೀ ಬಿ ಆರ್ ಲಕ್ಷ್ಮಣ್ ರಾವ್ ರವರು ಡಾ||ಎನ್. ಎಸ್ ಲಕ್ಷ್ಮೀನಾರಾಯಣ ಭಟ್ಟ ಅವರಿಗೆ ಮತ್ತು ಸುಪ್ರಸಿದ್ಧ ಗಾಯಕರಾದ ನಗರ ಶ್ರೀನಿವಾಸ ಉಡುಪ ಅವರು ಮೈಸೂರು ಅನಂತ ಸ್ವಾಮಿ ಅವರಿಗೆ ನುಡಿ ನಮನವನ್ನು, ಸಲ್ಲಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷರು ಮತ್ತು ಗಾಯಕರಾದ ಶ್ರೀ ವೈ.ಕೆ ಮುದ್ದುಕೃಷ್ಣ ಅವರು ವಹಿಸಿದ್ದಾರೆ .

ಇವರೊಂದಿಗೆ ,ಉಪಸ್ಥಿತಿಯಲ್ಲಿ ಶ್ರೀಮತಿ ಶಾಂತ ಅನಂತಸ್ವಾಮಿ ,ಶ್ರೀಮತಿ ಜ್ಯೋತಿ ಲಕ್ಷ್ಮೀನಾರಾಯಣ ಭಟ್ಟ, ಸಾಹಿತಿಗಳಾದ ಡಾ ಹೇಮಾ ಪಟ್ಟಣಶೆಟ್ಟಿ ಮತ್ತು ಕ.ಸು.ಸಂ.ಪ.ದ ಅನಿವಾಸಿ ಭಾರತೀಯರ ಪ್ರತಿನಿಧಿಗಳಾದ ಶ್ರೀಮತಿಪೂರ್ಣಿಮಾ ಕೃಷ್ಣಮೂರ್ತಿಯವರು ಭಾಗವಹಿಸಲಿದ್ದಾರೆ

ಗಾಯನದಲ್ಲಿ, ವೈ.ಕೆ. ಮುದ್ದುಕೃಷ್ಣ, ನಗರ ಶ್ರೀನಿವಾಸ ಉಡುಪ, ಡಾ.ಮುದ್ದುಮೋಹನ್, ಡಾ.ಕಿಕ್ಕೇರಿ ಕೃಷ್ಣಮೂರ್ತಿ , ಮಂಗಳ ರವಿ, ಸುನಿತಾ ಎಸ್ ಪ್ರವೀಣ್-ಪ್ರದೀಪ್ ,ರಾಘವೇಂದ್ರ ಬೀಜಾಡಿ, ಸೀಮಾ ರಾಯ್ಕರ್, ನಿತಿನ್ ರಾಜಾರಾಮ್ ಶಾಸ್ತ್ರಿ ಎಲ್ಲ ಮಹನೀಯರಿಗೆ ಗೀತ ಗೌರವವನ್ನು ಅರ್ಪಿಸಲಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.