ಬೆಂಗಳೂರು: ಅಪರಿಚಿತ ಬ್ಯಾಗ್ ಕಂಡು ಗಾಬರಿಗೊಂಡ ಚಾಲಕರೊಬ್ಬರು, ಆಟೊ ಸಮೇತ ಶನಿವಾರ ಬೆಳಿಗ್ಗೆ ಜಯನಗರದ ಠಾಣೆಗೆ ಬಂದು, ‘ಯಾರೋ ಬಾಂಬ್ ಇಟ್ಟಿದ್ದಾರೆ’ ಎಂದು ಹೇಳಿ ಪೊಲೀಸರ ಎದುರು ಅಳಲು ತೋಡಿಕೊಂಡಿದ್ದರು.
ಇದರಿಂದ ಕ್ಷಣಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಜಯನಗರ ನಿವಾಸಿ, ಆಟೊ ಚಾಲಕ ಬೆಳಿಗ್ಗೆ 11 ಗಂಟೆ ಸುಮಾರಿಗೆ ಆಟೊ ಹಿಂದಿನ ಸೀಟ್‌ನಲ್ಲಿ ಎರಡು ಅಪರಿಚಿತ ಬ್ಯಾಗ್ ಕಂಡು ಗಾಬರಿಗೊಂಡಿದ್ದರು. ‘ಯಾರೊ ಆಟೊದಲ್ಲಿ ಬಾಂಬ್ ಇಟ್ಟಿದ್ದಾರೆ’ ಎಂದು ಭಾವಿಸಿ ಕೂಡಲೇ ಜಯನಗರ ಪೊಲೀಸ್ ಠಾಣೆಗೆ ಆಟೊ ಸಮೇತ ತೆರಳಿದ್ದರು. ನಂತರ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಬಾಂಬ್ ಪತ್ತೆದಳದ ಸಿಬ್ಬಂದಿಯನ್ನು ಕರೆಸಿ ಬ್ಯಾಗ್‌ಗಳ ಪರಿಶೀಲಿಸಿದರು.
‘ಪರಿಶೀಲನೆ ವೇಳೆ ಬ್ಯಾಗ್‌ನಲ್ಲಿ ಮೋಟರ್ ವಸ್ತುಗಳು ಪತ್ತೆಯಾಗಿವೆ. ಯಾವುದೇ ಸ್ಫೋಟಕ ವಸ್ತುಗಳು ಪತ್ತೆ ಆಗಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದರು.
‘ಚಾಲಕನಿಂದ ದೂರು ಸ್ವೀಕರಿಸಿ ಕಳುಹಿಸಲಾಗಿದೆ. ಬ್ಯಾಗ್‌ಗಳನ್ನು ಆಟೊಗೆ ತಂದು ಯಾರು ಇಟ್ಟುಹೋಗಿದ್ದಾರೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.