ADVERTISEMENT

ಏಕರೂಪ ನಾಗರಿಕ ಸಂಹಿತೆ ರಾಜಕೀಯ ಗಿಮಿಕ್‌: ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ 

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2023, 16:09 IST
Last Updated 7 ಅಕ್ಟೋಬರ್ 2023, 16:09 IST
<div class="paragraphs"><p>ಎಫ್‌ಡಿಸಿಎ–ಕೆ ಪ್ರಧಾನ ಕಾರ್ಯದರ್ಶಿ ಎಂ.ಎಫ್. ಪಾಶಾ, ಅಂಕಣಕಾರ ಶಿವಸುಂದರ್, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್, ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲ ಗೌಡ, ವಕೀಲ ರವಿವರ್ಮ ಕುಮಾರ್ ಮತ್ತು ಜಮಾತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಬೆಳಗಾಮಿ ಮೊಹಮ್ಮದ್ ಸಾದ್ ಇದ್ದಾರೆ –ಪ್ರಜಾವಾಣಿ ಚಿತ್ರ</p></div>

ಎಫ್‌ಡಿಸಿಎ–ಕೆ ಪ್ರಧಾನ ಕಾರ್ಯದರ್ಶಿ ಎಂ.ಎಫ್. ಪಾಶಾ, ಅಂಕಣಕಾರ ಶಿವಸುಂದರ್, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್, ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲ ಗೌಡ, ವಕೀಲ ರವಿವರ್ಮ ಕುಮಾರ್ ಮತ್ತು ಜಮಾತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಬೆಳಗಾಮಿ ಮೊಹಮ್ಮದ್ ಸಾದ್ ಇದ್ದಾರೆ –ಪ್ರಜಾವಾಣಿ ಚಿತ್ರ

   

ಬೆಂಗಳೂರು: ‘ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಲು ಸಾಧ್ಯವಿಲ್ಲ. ಆದರೆ, ಮುಂದಿನ ವರ್ಷದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಮಕ್ಮಲ್‌ ಟೋಪಿ ಹಾಕಲು ಯೋಜಿಸಿರುವ ರಾಜಕೀಯ ಗಿಮಿಕ್‌ ಇದು’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲ ಗೌಡ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ಏಕರೂಪ ನಾಗರಿಕ ಸಂಹಿತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ನಾಗರಿಕ ಸಂಹಿತೆ ಜಾರಿ ಮಾಡಲು ಮುಂದಾದರೆ ಜನರು ದಂಗೆ ಏಳುತ್ತಾರೆ. ಬೇರೆ ಬೇರೆ ಧರ್ಮಗಳ ರೀತಿ ರಿವಾಜು ಮಾತ್ರ ಭಿನ್ನವಾಗಿರುವುದಲ್ಲ. ಪ್ರತಿ ಜಾತಿ, ಉಪಜಾತಿಗಳು ತಮ್ಮದೇ ಆದ ಆಚರಣೆಗಳನ್ನು, ಪದ್ಧತಿಗಳನ್ನು ಹೊಂದಿವೆ. ಪ್ರದೇಶಗಳಿಂದ ಪ್ರದೇಶಗಳಿಗೆ ಆಚರಣೆಯಲ್ಲಿ ಭಿನ್ನತೆ ಇದೆ. ಎಲ್ಲರೂ ಏಕರೂಪವಾಗಿ ಇರಲು ಸಾಧ್ಯವಿಲ್ಲ’ ಎಂದು ವಿಶ್ಲೇಷಿಸಿದರು.

‘ಜಾತ್ಯತೀತ ತತ್ವದ ಆಧಾರದಲ್ಲಿ ನಿಂತಿರುವ ಸಂವಿಧಾನವು ಎಲ್ಲರಿಗೂ ಅವರ ನಂಬಿಕೆಗಳನ್ನು ಆಚರಿಸುವ ಹಕ್ಕನ್ನು ನೀಡಿದೆ. ಏಕರೂಪ ಸಂಹಿತೆ ಜಾರಿಗೆ ತರುವುದು ಎಂದರೆ ಈ ಹಕ್ಕನ್ನು ಮೊಟಕುಗೊಳಿಸುವುದು, ಸಮಾನತೆಯ ಹಕ್ಕನ್ನು ಕಿತ್ತುಹಾಕುವುದೇ ಆಗಿದೆ’ ಎಂದರು.

ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್ ಮಾತನಾಡಿ, ‘ಧರ್ಮ ಧರ್ಮಗಳ ನಡುವೆ ಏಕರೂಪ ಇರಲು ಸಾಧ್ಯವಿಲ್ಲ. ಆಯ ಧರ್ಮಗಳ ಒಳಗೆ ಏಕರೂಪ ಇದೆಯೇ ಎಂಬುದನ್ನು ಮೊದಲು ನೋಡಬೇಕು. ಎಲ್ಲ ಧರ್ಮಗಳು ಸಾವಿರಾರು ವರ್ಷಗಳ ಹಿಂದಿನವು. ಈಗಿನ ಕಾಲಕ್ಕೆ ತಕ್ಕಂತೆ ಉನ್ನತೀಕರಣಗೊಳ್ಳಬೇಕು. ಕೆಲವೊಂದು ಸಂಪ್ರದಾಯಗಳನ್ನು ಬಿಡಬೇಕು. ಕೆಲವನ್ನು ಸರಳಗೊಳಿಸಬೇಕು. ಕೆಲವನ್ನು ಬದಲಾಯಿಸಬೇಕು. ಧರ್ಮಗಳ ಒಳಗೆ ಪ್ರಜಾಪ್ರಭುತ್ವ ಬರಬೇಕು’ ಎಂದು ಸಲಹೆ ನೀಡಿದರು.

ಮಹಿಳೆಯರಿಗೆ ಮದುವೆ, ಆಸ್ತಿ ಹಕ್ಕು, ಉತ್ತರಾಧಿಕಾರಿ, ದತ್ತು ಸ್ವೀಕಾರ ಮುಂತಾದವುಗಳಲ್ಲಿ ಸಮಾನತೆ ಮತ್ತು ಸಮಾನ ಹಕ್ಕು ನೀಡುವ ಹಿಂದೂ ಕೋಡ್‌ ಬಿಲ್‌ ಅನ್ನು ಡಾ.ಬಿ.ಆರ್. ಅಂಬೇಡ್ಕರ್‌ ಮಂಡಿಸಿದ್ದರು. ಆಗ ವಿರೋಧಿಸಿದ ಮನಸ್ಥಿತಿಯವರೇ ಇಂದು ಏಕರೂಪ ನಾಗರಿಕ ಸಂಹಿತೆಯನ್ನು ತರಲು ಪ್ರಯತ್ನಿಸುತ್ತಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಬರಬೇಕಿದ್ದರೆ ಜಾತಿ ಪದ್ಧತಿ, ಜಾತಿಯೊಳಗಿನ ಮದುವೆ ಪದ್ಧತಿಗಳನ್ನೆಲ್ಲ ನಿಷೇಧಿಸಬೇಕು ಎಂದು ವಕೀಲ ರವಿವರ್ಮ ಕುಮಾರ್‌ ತಿಳಿಸಿದರು.

ಏಕರೂಪ ನಾಗರಿಕ ಹಕ್ಕು ಜಾರಿಗೆ ತರುವ ಉದ್ದೇಶ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಇಲ್ಲ. ಆದರೆ, ಏಕರೂಪ ನಾಗರಿಕ ಹಕ್ಕು ಜಾರಿ ಮಾಡುವುದಾಗಿ ಹೇಳುತ್ತಾ, ಅದಕ್ಕೆ ಮುಸ್ಲಿಮರು, ಕ್ರಿಶ್ಚಿಯನ್ನರಿಂದ ಪ್ರತಿಕ್ರಿಯೆಯನ್ನು ಪಡೆಯುವ ಕೆಲಸ ಮಾಡುತ್ತಾರೆ. ಆಮೇಲೆ ನೋಡಿ ಅವರು ಹಾಗೆ ಹೇಳಿದರು ಎಂದು ವಿಲನ್‌ಗಳನ್ನಾಗಿ ಬಿಂಬಿಸುವುದು, ಆ ಮೂಲಕ ಹಿಂದೂ ರಾಷ್ಟ್ರ ಕಲ್ಪನೆಗೆ ನೀರೆರೆಯುವುದು ಅವರ ಉದ್ದೇಶ ಎಂದು ಅಂಕಣಕಾರ ಶಿವಸುಂದರ್‌ ವಿವರಿಸಿದರು.

ಜಮಾತ್‌ ಇ ಇಸ್ಲಾಮಿ ಹಿಂದ್‌ ರಾಜ್ಯಾಧ್ಯಕ್ಷ ಬೆಳಗಾಮಿ ಮೊಹಮ್ಮದ್‌ ಸಾದ್‌, ಹೋರಾಟಗಾರ್ತಿ ಸಿಂಥಿಯಾ ಸ್ಟೀಫನ್‌, ಅಕ್ಯೂರ ಆಸ್ಪತ್ರೆಯ ನಿರ್ದೇಶಕ ಡಾ. ಮೊಹಮ್ಮದ್‌ ತಹಾ ಮತೀನ್‌, ಫೋರಂ ಫಾರ್‌ ಡೆಮಾಕ್ರಸಿ ಆ್ಯಂಡ್‌ ಕಮ್ಯುನಲ್‌ ಅಮಿಟಿ–ಕರ್ನಾಟಕ (ಎಫ್‌ಡಿಸಿಎ–ಕೆ) ಪ್ರಧಾನ ಕಾರ್ಯದರ್ಶಿ ಎಂ.ಎಫ್. ಪಾಷ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.