ADVERTISEMENT

ಓಲಾ, ಉಬರ್‌ ಸೇರಿದಂತೆ ಟ್ಯಾಕ್ಸಿಗಳಿಗೆ ಇನ್ನು ಏಕರೂಪದ ಪ್ರಯಾಣ ದರ

ಆ್ಯಪ್ ಆಧಾರಿತ ಟ್ಯಾಕ್ಸಿ, ಸಿಟಿ ಟ್ಯಾಕ್ಸಿಗಳ ಪ್ರಯಾಣ ದರ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2024, 16:06 IST
Last Updated 4 ಫೆಬ್ರುವರಿ 2024, 16:06 IST
ಓಲಾ
ಓಲಾ   

ಬೆಂಗಳೂರು: ಸಿಟಿ ಟ್ಯಾಕ್ಸಿಗಳು ಮತ್ತು ಆ್ಯಪ್‌ ಆಧಾರಿತ ಟ್ಯಾಕ್ಸಿಗಳು ಹವಮಾನದ ವ್ಯತ್ಯಾಸ ಮತ್ತು ಜನದಟ್ಟಣೆಗೆ ಅನುಗುಣವಾಗಿ ಪ್ರಯಾಣ ದರ ಏರಿಕೆ, ಇಳಿಕೆ ಮಾಡುತ್ತಿರುವುದನ್ನು ತಪ್ಪಿಸಲು ಏಕರೂಪದ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಓಲಾ, ಉಬರ್‌ ಸಹಿತ ಎಲ್ಲ ಟ್ಯಾಕ್ಸಿಗಳಿಗೆ ಈ ನಿಯಮ ಅನ್ವಯ ಆಗಲಿದೆ.

ಮಳೆ ಬಂದಾಗ ದರ ಹೆಚ್ಚಳ ಮಾಡುವುದು, ಜನರು ಕಚೇರಿಗೆ, ಕೆಲಸಕ್ಕೆ ತೆರಳುವ ಸಮಯದಲ್ಲಿ ದರ ಹೆಚ್ಚಿಸುವುದು, ಜನದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಟ್ಯಾಕ್ಸಿ ಪ್ರಯಾಣ ದರ ಇಳಿಕೆ ಮಾಡಲಾಗುತ್ತಿತ್ತು. ಈ ಬಗ್ಗೆ ಅನೇಕ ದೂರುಗಳು ಬಂದಿದ್ದವು. ಅದನ್ನು ತಪ್ಪಿಸುವುದಕ್ಕಾಗಿ ಏಕರೂಪ ದರ ನಿಗದಿ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇಲ್ಲಿವರೆಗೆ ಸಿಟಿ ಟ್ಯಾಕ್ಸಿಗಳ ಪ್ರಯಾಣ ದರ ಮತ್ತು ಅಗ್ರಿಗೇಟರ್‌ ಟ್ಯಾಕ್ಸಿಗಳ ದರ ಬೇರೆ ಬೇರೆಯಾಗಿದ್ದವು. ಶನಿವಾರ (ಫೆ.3) ಹೊರಡಿಸಿರುವ ಅಧಿಸೂಚನೆ ಪ್ರಕಾರ ದರಗಳನ್ನು ಒಂದೇ ಮಾದರಿಯಲ್ಲಿ ನಿಗದಿಪಡಿಸಲಾಗಿದೆ. ಏಕರೂಪ ಮತ್ತು ಪರಿಷ್ಕೃತ ದರಗಳು ತಕ್ಷಣದಿಂದಲೇ ರಾಜ್ಯದಲ್ಲಿ (ಬೆಂಗಳೂರು ನಗರ ಒಳಗೊಂಡಂತೆ) ಅನ್ವಯವಾಗಲಿದೆ.

ADVERTISEMENT

ಅಧಿಸೂಚನೆಯಲ್ಲಿ ಏನಿದೆ?: ವಾಹನಗಳ ಮೌಲ್ಯಗಳನ್ನು ಆಧರಿಸಿ ಮೂರು ವಿಭಾಗಗಳನ್ನಾಗಿ ಮಾಡಲಾಗಿದೆ. ಈ ವಿಭಾಗಗಳಿಗೆ ನಿಗದಿತ ದರ ನಿಗದಿ ಮಾಡಲಾಗಿದೆ. ವೈಯಕ್ತಿಕ ಲಗೇಜ್‌ ದರವು 120 ಕೆ.ಜಿ. ವರೆಗೆ ಉಚಿತವಾಗಿದೆ. ನಂತರದ ಪ್ರತಿ 30 ಕಿಲೋ ಗ್ರಾಂ ವರೆಗೆ ₹ 7 ನಿಗದಿ ಮಾಡಲಾಗಿದೆ.

ಕಾಯುವಿಕೆ ದರವು ಮೊದಲ 5 ನಿಮಿಷಗಳವರೆಗೆ ಉಚಿತವಾಗಿದ್ದು, ಬಳಿಕದ ಪ್ರತಿ ನಿಮಿಷಕ್ಕೆ ₹ 1 ನೀಡಬೇಕಾಗುತ್ತದೆ. ರಾತ್ರಿ 12ರಿಂದ ಬೆಳಿಗ್ಗೆ 6ರವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ ಶೇ 10ರಷ್ಟು ಹೆಚ್ಚುವರಿ ದರ ನಿಗದಿ ಮಾಡಲಾಗಿದೆ. 

ನಗರ ಟ್ಯಾಕ್ಸಿಯವರು, ಅಗ್ರಿಗೇಟರ್‌ಗಳು ಜಿಎಸ್‌ಟಿ ಮತ್ತು ಟೋಲ್‌ ಶುಲ್ಕವನ್ನು ಪ್ರಯಾಣಿಕರಿಂದ ವಸೂಲಿ ಮಾಡಬಹುದು. ಸಮಯಕ್ಕೆ ಅನುಗುಣವಾಗಿ ಏರಿಕೆ ಮಾಡದೆ, ಕಿಲೋ ಮೀಟರ್‌ ಆಧಾರದಲ್ಲಿ ನಿಗದಿಪಡಿಸಿರುವ ದರಗಳನ್ನು ಮಾತ್ರ ವಸೂಲಿ ಮಾಡಬೇಕು. ಅನಧಿಕೃತವಾಗಿ ಯಾವುದೇ ದರಗಳನ್ನು ಪ್ರಯಾಣಿಕರಿಂದ ಪಡೆಯಬಾರದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.