ಬೆಂಗಳೂರು: 'ಯುಬಿಡಿಟಿ ಕಾಲೇಜಿನಲ್ಲಿ ಸೀಟು ಮಾರಾಟ ಮಾಡಲಾಗುತ್ತಿದೆ’ ಎಂದು ಆರೋಪಿಸಿರುವ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಷನ್(ಎಐಡಿಎಸ್‌ಒ), ಸೆ.24ರಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ವಿದ್ಯಾರ್ಥಿಗಳ ಸಮಾವೇಶ ಹಮ್ಮಿಕೊಂಡಿದೆ.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಎಐಡಿಎಸ್‌ಒ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ ಬಿಳೂರ್ ಅವರು ಮಾತನಾಡಿ, ‘ಅಂದು ಬೆಳಿಗ್ಗೆ 10ಕ್ಕೆ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು, ಹಂಪಿ ಕನ್ನಡ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಎ.ಮುರಿಗೆಪ್ಪ, ಡಿಆರ್‌ಎಂ ವಿಜ್ಞಾನ ಪದವಿ ಕಾಲೇಜು ನಿವೃತ್ತ ಪ್ರಾಂಶುಪಾಲ ಕೆ.ಎಸ್.ಈಶ್ವರಪ್ಪ, ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜು ನಿವೃತ್ತ ಪ್ರಾಂಶುಪಾಲ ಜಿ.ಪಿ.ಪ್ರಭುಕುಮಾರ್, ಎಐಡಿಎಸ್ಒ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಯುಬಿಡಿಟಿ ರಾಜ್ಯದ ಮೊದಲ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು. ಇದು ದೇಶದ ಹಳೇ ಕಾಲೇಜು ಸಹ ಹೌದು. ಯುಬಿಡಿಟಿಯು ಈಗ ಅಳಿವಿನ ಅಂಚಿನಲ್ಲಿದೆ. ಸರ್ಕಾರಿ ಕಾಲೇಜಿನಲ್ಲಿ ಸೀಟುಗಳನ್ನು ಮಾರಾಟ ಮಾಡುವ ಹುನ್ನಾರ ನಡೆದಿದೆ. ಇದರಿಂದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿದರು.
ತಕ್ಷಣವೇ ಪೇಮೆಂಟ್ ಕೋಟಾ ರದ್ದುಗೊಳಿಸಬೇಕು. ಹೆಚ್ಚುವರಿಯಾಗಿ ಪಡೆದಿರುವ ಶುಲ್ಕವನ್ನು ವಿದ್ಯಾರ್ಥಿಗಳಿಗೆ ವಾಪಸ್ ನೀಡಬೇಕು. ಯುಬಿಡಿಟಿ ಕಾಲೇಜು ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸಬೇಕು. ಕಾಲೇಜಿನ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರವೇ ವಹಿಸಬೇಕು. ಎಲ್ಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೂ ಶುಲ್ಕ ಏರಿಕೆ ಕೈಬಿಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪೂಜಾ ನಂದಿಹಳ್ಳಿ, ಟಿ.ಎಸ್.ಸುಮನ್, ಅಭಿಷೇಕ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.