ADVERTISEMENT

ತೆರೆಯದ ಮೆಟ್ರೊ ರೈಲು ಬಾಗಿಲು: ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 16:45 IST
Last Updated 13 ಜೂನ್ 2024, 16:45 IST
ಮೆಟ್ರೊ ನೇರಳೆ ಮಾರ್ಗ
ಮೆಟ್ರೊ ನೇರಳೆ ಮಾರ್ಗ   

ಬೆಂಗಳೂರು: ‘ನಮ್ಮ ಮೆಟ್ರೊ’ ನೇರಳೆ ಮಾರ್ಗದ ಟ್ರಿನಿಟಿ ನಿಲ್ದಾಣದಲ್ಲಿ ಗುರುವಾರ ಮೆಟ್ರೊ ರೈಲಿನ ಬಾಗಿಲುಗಳು ತೆರೆದುಕೊಳ್ಳದ ಕಾರಣ ಪ್ರಯಾಣಿಕರು ಆತಂಕಕ್ಕೀಡಾದರು. 

ವೈಟ್‌ಫೀಲ್ಡ್ ಕಡೆಯಿಂದ ಮೆಜೆಸ್ಟಿಕ್‌ ಕಡೆಗೆ ಸಂಚರಿಸುತ್ತಿದ್ದ ರೈಲು ಬೆಳಿಗ್ಗೆ 9.58ಕ್ಕೆ ಟ್ರಿನಿಟಿ ನಿಲ್ದಾಣ ತಲುಪಿದಾಗ ತಾಂತ್ರಿಕ ತೊಂದರೆಯಿಂದಾಗಿ ಬಾಗಿಲು ತೆರೆದುಕೊಳ್ಳಲಿಲ್ಲ. ಟ್ರಿನಿಟಿಯಲ್ಲಿ ಇಳಿಯುವ– ಹತ್ತುವ ಪ್ರಯಾಣಿಕರು ತೊಂದರೆ ಅನುಭವಿಸಿದರು. ಬಾಗಿಲು ತೆರೆಯುತ್ತಿಲ್ಲ ಎಂದು ಗೊತ್ತಾಗುತ್ತಿದ್ದಂತೆ ರೈಲಿನ ಒಳಗಿದ್ದ ಎಲ್ಲ ಪ್ರಯಾಣಿಕರು ಗಾಬರಿಗೊಂಡರು. ಮೆಜೆಸ್ಟಿಕ್‌ನಿಂದ ಟ್ರಿನಿಟಿ ಕಡೆಗೆ ಮೆಟ್ರೊ ಸಂಚಾರ ಸ್ಥಗಿತಗೊಳಿಸಲಾಯಿತು.

ತಂತ್ರಜ್ಞರು ಬಂದು ಬಾಗಿಲು ತೆರೆದು ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿದರು. ಮೆಟ್ರೊ ಒಳಗೆ 15 ನಿಮಿಷಕ್ಕೂ ಹೆಚ್ಚು ಸಮಯ ಉಸಿರು ಬಿಗಿ ಹಿಡಿದು ಕುಳಿತಿದ್ದ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಟ್ರಿನಿಟಿಯಲ್ಲಿ ಎಲ್ಲ ಪ್ರಯಾಣಿಕರು ಇಳಿದ ಕಾರಣ ರಸ್ತೆಯಲ್ಲಿ ಒಮ್ಮೆಲೇ ಜನದಟ್ಟಣೆ ಉಂಟಾಯಿತು. ಕೆಲಸಕ್ಕೆ ತೆರಳುವವರು ಬಸ್‌, ಕ್ಯಾಬ್‌ಗಳಿಗೆ ಕಾಯುವಂತಾಯಿತು. ಕೆಲಸಕ್ಕೆ ತೆರಳುವ ಉದ್ಯೋಗಿಗಳು ಸಮಯಕ್ಕೆ ಸರಿಯಾಗಿ ತಲುಪಲಾರದೇ ಪರದಾಡಿದರು.

ADVERTISEMENT

ಆನಂತರ ದೋಷಪೂರಿತ ಮೆಟ್ರೊವನ್ನು ಮೆಜೆಸ್ಟಿಕ್‌ನಲ್ಲಿರುವ ನಾಡಪ್ರಭು ಕೆಂಪೇಗೌಡ ನಿಲ್ದಾಣದ ಲೂಪ್‌ ಮಾರ್ಗಕ್ಕೆ ತರಲಾಯಿತು. ಬೆಳಿಗ್ಗೆ 11.30ಕ್ಕೆ ಮೆಟ್ರೊ ಸಂಚಾರ ಪುನರಾರಂಭಗೊಂಡಿತು. ತಾಂತ್ರಿಕ ತೊಂದರೆಯಿಂದ ಪ್ರಯಾಣಿಕರಿಗೆ ಅನನುಕೂಲ ಉಂಟಾಗಿದ್ದಕ್ಕೆ ಬಿಎಂಆರ್‌ಸಿಎಲ್‌ ಅಧಿಕಾರಿಗಳು ವಿಷಾದ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.