ADVERTISEMENT

ನಿಗದಿಯಾಗದ ದಿನಾಂಕ: ಆರಂಭವಾಗದ ಮೆಟ್ರೊ

ನಾಗಸಂದ್ರ–ಮಾದಾವರ ನಡುವೆ ರೈಲು ಓಡಿಸಲು ಸರ್ಕಾರದ ಒಪ್ಪಿಗೆಗೆ ಕಾಯುತ್ತಿರುವ ಬಿಎಂಆರ್‌ಸಿಎಲ್‌

ಬಾಲಕೃಷ್ಣ ಪಿ.ಎಚ್‌
Published 31 ಅಕ್ಟೋಬರ್ 2024, 19:51 IST
Last Updated 31 ಅಕ್ಟೋಬರ್ 2024, 19:51 IST
ವಿಸ್ತರಿತ ಹಸಿರು ಮಾರ್ಗ
ವಿಸ್ತರಿತ ಹಸಿರು ಮಾರ್ಗ   

ಬೆಂಗಳೂರು: ನಾಗಸಂದ್ರ–ಮಾದಾವರ ನಮ್ಮ ಮೆಟ್ರೊ ವಿಸ್ತರಿತ ಪ್ರದೇಶದಲ್ಲಿ ರೈಲು ಸಂಚಾರ ಆರಂಭಿಸಬಹುದು ಎಂದು ರೈಲ್ವೆ ಸುರಕ್ಷತಾ ಆಯುಕ್ತರು ಅನುಮತಿ ನೀಡಿ 25 ದಿನಗಳು ಕಳೆದರೂ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಗಳ ಒಪ್ಪಿಗೆ ಸಿಗದ ಕಾರಣ ರೈಲು ಸಂಚಾರ ಇನ್ನೂ ಆರಂಭವಾಗಿಲ್ಲ. ಸರ್ಕಾರಗಳ ನಿರ್ದೇಶನಕ್ಕಾಗಿ ಬಿಎಂಆರ್‌ಸಿಎಲ್‌ ಕಾದು ಕುಳಿತಿದೆ.

ಹಸಿರು ಮಾರ್ಗದಲ್ಲಿ 3.7 ಕಿ.ಮೀ. ಉದ್ದದಲ್ಲಿ ಮೂರು ನಿಲ್ದಾಣಗಳನ್ನಷ್ಟೇ ಹೊಂದಿರುವ ಈ ಕಾಮಗಾರಿಗೆ 2017ರ ಮೇ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು. ವಿವಿಧ ಕಾರಣಗಳಿಂದ ಏಳು ವರ್ಷ ಕುಂಟುತ್ತಾ ಸಾಗಿ, 2024ರಲ್ಲಿ ಪೂರ್ಣಗೊಂಡಿತ್ತು. 27 ತಿಂಗಳಲ್ಲಿ ಮುಗಿಯಬೇಕಿದ್ದ ಕಾಮಗಾರಿ 91 ತಿಂಗಳು ಪೂರ್ಣಗೊಂಡಿತು. ಆನಂತರ ಸಿಗ್ನಲಿಂಗ್‌ ಸೇರಿದಂತೆ ವಿವಿಧ ಪರೀಕ್ಷೆಗಳು ನಡೆದಿದ್ದವು. ರೈಲ್ವೆ ಸುರಕ್ಷತೆ ದಕ್ಷಿಣ ವೃತ್ತದ ಆಯುಕ್ತ ಅನಂತ್‌ ಮಧುಕರ್‌ ಚೌಧರಿ, ಉಪ ಆಯುಕ್ತ ನಿತೀಶ್‌ ಕುಮಾರ್‌ ರಂಜನ್‌ ಮತ್ತು ತಾಂತ್ರಿಕ ತಂಡ ಅ.3ರಂದು ಗುಣಮಟ್ಟ ಪರೀಕ್ಷೆಯನ್ನು ನಡೆಸಿದ್ದರು. ರೈಲು ಸಂಚಾರ ಆರಂಭಿಸಬಹುದು ಎಂದು ಅ.4ರಂದೇ ಅನುಮತಿ ಕೂಡಾ ನೀಡಿದ್ದರು.

ರೈಲ್ವೆ ಸುರಕ್ಷತಾ ಆಯುಕ್ತರಿಂದ ಒಪ್ಪಿಗೆ ಸಿಕ್ಕಿದ ಕೂಡಲೇ ಬಿಎಂಆರ್‌ಸಿಎಲ್ ಅಧಿಕಾರಿಗಳು ಉದ್ಘಾಟನೆಗೆ ದಿನಾಂಕ ನಿಗದಿಗಾಗಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯಿಂದ (ಯುಡಿಡಿ) ಕೇಂದ್ರ ಸರ್ಕಾರದ ನಗರ ವ್ಯವಹಾರ ಮತ್ತು ವಸತಿ ಸಚಿವಾಲಯಕ್ಕೆ (ಎಂಒಎಚ್‌ಯುಎ) ಪತ್ರ ಬರೆದಿದೆ. ಅಲ್ಲಿಂದ ಮುಂದಕ್ಕೆ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. 

ADVERTISEMENT

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿ ಬಿಎಂಆರ್‌ಸಿಎಲ್‌ ಇರುವುದರಿಂದ ಎರಡೂ ಸರ್ಕಾರಗಳ ಒಪ್ಪಿಗೆ ಇಲ್ಲದೇ ನಾವು ಸಂಚಾರ ಆರಂಭಿಸುವಂತಿಲ್ಲ. ಹಿಂದೆ ನೇರಳೆ ಮಾರ್ಗದಲ್ಲಿ ಬೈಯಪ್ಪನಹಳ್ಳಿ–ಕೆ.ಆರ್‌.ಪುರ ನಡುವೆ ಸಂಚಾರ ಆರಂಭಿಸಲು ಒಪ್ಪಿಗೆ ಕೋರಿದ್ದಾಗ, ‘ಯಾವುದೇ ಉದ್ಘಾಟನೆಗೆ ಕಾಯಬೇಡಿ. ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಆರಂಭಿಸಿ’ ಎಂದು ನಿರ್ದೇಶನ ನೀಡಿದ್ದರು. ಈ ಮಾರ್ಗದಲ್ಲಿಯೂ ಒಂದೋ ಉದ್ಘಾಟನೆಗೆ ದಿನ ನಿಗದಿ ಮಾಡಬೇಕು. ಇಲ್ಲವೇ ಸಾರ್ವಜನಿಕರ ಅನುಕೂಲಕ್ಕಾಗಿ ಕೂಡಲೇ ಆರಂಭಿಸಿ ಎಂದು ನಿರ್ದೇಶನ ಬರಬೇಕು. ಆದರೆ, ಸರ್ಕಾರಗಳಿಂದ ಯಾವುದೇ ಸೂಚನೆ ಬಂದಿಲ್ಲ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಅಲವತ್ತುಕೊಂಡಿದ್ದಾರೆ.

‘ವಾಣಿಜ್ಯ ಸಂಚಾರ ಬೇಗ ಆರಂಭವಾದಷ್ಟು ಜನರಿಗೂ ಒಳ್ಳೆಯದು, ಬಿಎಂಆರ್‌ಸಿಎಲ್‌ಗೂ ಆದಾಯ ಬರುತ್ತದೆ. ಅನುಮತಿಗಾಗಿ ನಾವು ಕಾಯುತ್ತಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

‘ನಮ್ಮ ಮೆಟ್ರೊ’ ಹಸಿರು ಮಾರ್ಗದ ವಿಸ್ತರಿತ ಪ್ರದೇಶ ನಾಗಸಂದ್ರ–ಮಾದಾವರ ನಿಲ್ದಾಣಗಳ ನಡುವೆ ರೈಲ್ವೆ ಸುರಕ್ಷತಾ ಆಯುಕ್ತರ ನೇತೃತ್ವದಲ್ಲಿ ಗುರುವಾರ ಸುರಕ್ಷತಾ ತಪಾಸಣೆ ನಡೆಯಿತು

ರಾಜಕೀಯ ಮಾಡದೇ ಬೇಗ ಶುರು ಮಾಡಿ

’ ಮಂಜುನಾಥನಗರ ಚಿಕ್ಕಬಿದರಕಲ್ಲು (ಜಿಂದಾಲ್‌) ಮಾದಾವರ ಮೆಟ್ರೊ ನಿಲ್ದಾಣಗಳಿರುವ ಈ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಆರಂಭಿಸಲು ಯಾವುದೇ ರಾಜಕೀಯ ಮಾಡಬಾರದು ಎಂದು ಮೆಟ್ರೊ ಪ್ರಯಾಣಿಕ ಯೋಗೀಶ್‌ ಆಗ್ರಹಿಸಿದ್ದಾರೆ. ‘ಜನಪ್ರತಿನಿಧಿಗಳು ಉಪ ಚುನಾವಣೆಯಲ್ಲಿ ಮುಳುಗಿರುವುದರಿಂದ ಮೆಟ್ರೊ ಬಗ್ಗೆ ಯೋಚಿಸಲು ಸಮಯ ಇಲ್ಲ ಅನಿಸುತ್ತದೆ. ಅವರು ಯಾವಾಗ ಬೇಕಿದ್ದರೂ ಉದ್ಘಾಟನೆ ಮಾಡಿಕೊಳ್ಳಲಿ ಮೊದಲು ರೈಲು ಸಂಚಾರ ಆರಂಭಿಸಲಿ. ಇದರಿಂದ ಮಂಜುನಾಥನಗರ ಚಿಕ್ಕಬಿದರಕಲ್ಲು ಮಾಕಳಿ ಮಾದಾವರ ನೆಲಮಂಗಲ ಸಹಿತ ಸುತ್ತಮುತ್ತಲಿನವರಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.