ಬೆಂಗಳೂರು: ನಗರದಲ್ಲಿ ಮಳೆ ನಿಂತ ಮೇಲೆ ರಸ್ತೆಗಳಲ್ಲಿ ಬೃಹತ್ ಗುಂಡಿಗಳು ಅನಾವರಣಗೊಳ್ಳುತ್ತಿವೆ. ಬಿಬಿಎಂಪಿ ಸಿಬ್ಬಂದಿ ಮಳೆ ಅವಾಂತರದಿಂದಲೇ ಹೊರಬಂದಿಲ್ಲ. ಆದರೆ, ಸುಗಮ ಸಂಚಾರಕ್ಕಾಗಿ ಕೆಲವು ರಸ್ತೆಗಳಲ್ಲಿ ಸಂಚಾರ ಪೊಲೀಸರೇ ಗುಂಡಿ ಮುಚ್ಚುತ್ತಿದ್ದಾರೆ.
ಹೊರ ವರ್ತುಲ ರಸ್ತೆಯ ಇಬ್ಲೂರುನಿಂದ ಸರ್ಜಾಪುರ ರಸ್ತೆಯಲ್ಲಿ ಗುಂಡಿಗಳು ಅತಿಹೆಚ್ಚಾಗಿ ಉದ್ಭವಿಸಿದ್ದವು. ಇವುಗಳಿಂದ ಸಂಚಾರ ದಟ್ಟಣೆ ಅಧಿಕವಾಗಿತ್ತು. ಇದನ್ನು ಅರಿತ ಬೆಳ್ಳಂದೂರು ಸಂಚಾರ ಪೊಲೀಸರು ರಸ್ತೆಗುಂಡಿಗಳನ್ನು ತಾವೇ ಸಲಿಕೆ ಬಳಸಿ ಮುಚ್ಚಿದರು. ಬಿಬಿಎಂಪಿ ಸಹಾಯದಲ್ಲಿ ಗುಂಡಿ ಮುಚ್ಚಲಾಗಿದೆ ಎಂದು ವಿಡಿಯೊ ಹಾಗೂ ಚಿತ್ರವನ್ನು ಬೆಳ್ಳಂದೂರು ಸಂಚಾರ ಪೊಲೀಸರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಶುಕ್ರವಾರ ಹಂಚಿಕೊಂಡಿದ್ದಾರೆ.
ನಗರದ ಹಲವು ರಸ್ತೆಗಳಲ್ಲಿ ಗುಂಡಿಗಳಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ನಿಧಾನಗತಿಯಲ್ಲಿ ವಾಹನಗಳು ಸಂಚರಿಸಿರುವುದನ್ನು ಗಮನಿಸಿ, ಸಂಚಾರ ಪೊಲೀಸರು ಗುಂಡಿ ಮುಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ, ಬಿಬಿಎಂಪಿ ಸಿಬ್ಬಂದಿ ನಿರಂತರ ಮಳೆಯ ಗುಂಗಿನಿಂದ ಹೊರಬಂದಿಲ್ಲ. ಕೆಲವು ರಸ್ತೆಗಳಲ್ಲಿ ಮಾತ್ರ ಡಾಂಬರು ಹಾಕಲಾಗುತ್ತಿದೆ.
‘ಮಳೆ ಅಲ್ಪ ಬಿಡುವು ನೀಡಿದರೂ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುತ್ತೇವೆ. ಅದಕ್ಕಾಗಿ ಮೂರು ಘಟಕಗಳಲ್ಲಿ ‘ಕೋಲ್ಡ್ ಮಿಕ್ಸ್’ಅನ್ನೇ ತಯಾರಿಸಲಾಗುತ್ತಿದೆ. ಅದನ್ನು ಬಳಸಿಕೊಂಡು ಗುಂಡಿಗಳನ್ನು ಮುಚ್ಚುತ್ತೇವೆ’ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆಗಾಗ್ಗೆ ಹೇಳುತ್ತಲೇ ಇದ್ದಾರೆ. ಆದರೆ, ಅಂತಹ ಕೆಲಸಗಳಾಗುತ್ತಿಲ್ಲ ಎಂಬುದಕ್ಕೆ ನಗರದಲ್ಲಿ ಹೆಚ್ಚಾಗಿರುವ ರಸ್ತೆ ಗುಂಡಿಗಳೇ ಸಾಕ್ಷಿಯಾಗಿವೆ.
ಎರಡೂವರೆ ಸಾವಿರ ಗುಂಡಿಗಳಿವೆ ಎಂದು ಹೇಳಿದ್ದರೂ, 16 ಸಾವಿರ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಹೇಳಲಾಗಿತ್ತು. ವಲಯವಾರು ವಿವರವನ್ನು ಬಿಡುಗಡೆ ಮಾಡಲೇ ಇಲ್ಲ. ರಾಜರಾಜೇಶ್ವರಿನಗರ ವಲಯದಲ್ಲಿ ಹತ್ತು ಜನರ ಕೆಲಸವನ್ನು ಮಾಡುವ ‘ಜೆಟ್ ಪ್ಯಾಚರ್’ ಯಂತ್ರ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚುವುದಾಗಿ ಹೇಳಲಾಗಿತ್ತು. ಆದರೆ, ಆ ವಲಯದ ಕೇಂದ್ರ ಕಚೇರಿಯಿರುವ ಅಕ್ಕಪಕ್ಕದ ರಸ್ತೆಗಳಲ್ಲಿ ನೂರಾರು ಗುಂಡಿಗಳಿವೆ.
‘ಮಳೆ ನೀರಿನ ಸಮಸ್ಯೆ ನಿವಾರಿಸುವ ಕಾರ್ಯ ನಡೆಯುತ್ತಿದೆ. ಮುಂದಿನ ವಾರದಿಂದ ರಸ್ತೆ ಗುಂಡಿಗಳ ದುರಸ್ತಿ ಮಾಡಲಾಗುವುದು’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 15 ದಿನದಲ್ಲಿ ಗುಂಡಿ ಮುಚ್ಚಬೇಕು ಎಂದು ಸೆಪ್ಟೆಂಬರ್‌ನಲ್ಲಿ ಗಡುವು ನೀಡಿದ್ದರು. ಮುಖ್ಯ ಆಯುಕ್ತ ಪ್ರಧಾನ ಎಂಜಿನಿಯರ್ ವಲಯ ಆಯುಕ್ತರು ಜಂಟಿ ಆಯುಕ್ತರು ಮುಖ್ಯ ಎಂಜಿನಿಯರ್‌ಗಳು ರಾತ್ರಿಯೆಲ್ಲ ರಸ್ತೆಗಿಳಿದು ಡಾಂಬರು ಹಾಕುವತ್ತ ನಿಂತು ಚಿತ್ರ ತೆಗೆಸಿಕೊಂಡರು.
‘16 ಸಾವಿರ ಗುಂಡಿಗಳನ್ನು ಮುಚ್ಚಿ ಬಿಬಿಎಂಪಿ ಸಿಬ್ಬಂದಿ ದಾಖಲೆ ಸೃಷ್ಟಿಸಿದ್ದಾರೆ. ಆದರೂ ಅವರ ಮಾತನ್ನು ನಂಬುವುದಿಲ್ಲ’ ಎಂದು ಶಿವಕುಮಾರ್ ರಾತ್ರಿ ಸಂಚಾರದಲ್ಲಿ ಪ್ರಮುಖ ರಸ್ತೆಗಳಲ್ಲಷ್ಟೇ ಗುಂಡಿ ದುರಸ್ತಿ ಪರಿಶೀಲಿಸಿ ಮಾತನಾಡಿದ್ದರು.
‘ಹಳೇ ಬೈಕ್ ಸರಿಪಡಿಸಿದ್ದೇನೆ ಎಲ್ಲ ರಸ್ತೆಗಳಲ್ಲೂ ಹೋಗುತ್ತೇನೆ’ ಎಂದೂ ಹೇಳಿ ಒಂದು ತಿಂಗಳಾಯಿತು. ಡಿಸಿಎಂ ಪರಿಶೀಲನೆಗೆ ಮುನ್ನ ರಸ್ತೆ ಗುಂಡಿಗಳನ್ನು ಮುಚ್ಚಿದ ಬಗ್ಗೆ ವಲಯ ಆಯುಕ್ತರು ಜಂಟಿ ಆಯುಕ್ತರ ಅವರಾಗಿಯೇ ಮಾಹಿತಿ ನೀಡಿದರು.
‘ಆ ಬಗ್ಗೆ ಮಾಹಿತಿ ಇಲ್ಲ. ಕೇಂದ್ರ ಕಚೇರಿಯಲ್ಲಿ ಕೇಳಿ’ ಎಂದು ಸಬೂಬು ಹೇಳಿದರು. ಅಕ್ಟೋಬರ್ ಎರಡನೇ ವಾರದಿಂದ ನಗರದಲ್ಲಿ ಮಳೆ ಹೆಚ್ಚಾಯಿತು. ರಸ್ತೆ ಗುಂಡಿಗಳನ್ನು ಎಷ್ಟು ‘ಹೈಟೆಕ್ ತಂತ್ರಜ್ಞಾನ’ದಿಂದ ಮುಚ್ಚಿದ್ದರೂ ಅಲ್ಲೆಲ್ಲ ಅದಕ್ಕಿಂತ ದೊಡ್ಡ ಗುಂಡಿಗಳಾಗಿವೆ.
‘ನಿತ್ಯವೂ ಸಾವಿರಾರು ಗುಂಡಿಗಳು ಹೊಸದಾಗಿ ಉದ್ಭವಿಸುತ್ತವೆ’ ಎಂದು ಬಿಬಿಎಂಪಿ ಮುಖ್ಯ ಅಯುಕ್ತರೇ ಹೇಳುತ್ತಿರುವುದರಿಂದ ವಲಯ ಆಯುಕ್ತರು ಜಂಟಿ ಆಯುಕ್ತರೂ ಕ್ಷಿಪ್ರ ಕ್ರಮ ಕೈಗೊಳ್ಳುತ್ತಿಲ್ಲ. ಪ್ರಮುಖ ರಸ್ತೆಗಳಿಗೆ ಮಾತ್ರ ಡಾಂಬರು ತುಂಬಿ ಸುಮ್ಮನಾಗಿದ್ದಾರೆ. ವಾರ್ಡ್ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸ ಬಹುತೇಕ ಸ್ಥಗಿತಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.