ಬೆಂಗಳೂರು: ಶತಮಾನದ ಇತಿಹಾಸವಿರುವ ವಿವಿಧ ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದ್ದು, ಮೊದಲ ಹಂತದಲ್ಲಿ ದೊಡ್ಡಜಾಲ, ದೇವನಹಳ್ಳಿ, ಆವತಿಹಳ್ಳಿ ಮತ್ತು ನಂದಿ ಹಾಲ್ಟ್ ನಿಲ್ದಾಣಗಳನ್ನು ಆಧುನೀಕರಣಗೊಳಿಸಲಾಗುತ್ತಿದೆ.
ಹಳೆಯ ಶೈಲಿಯನ್ನೇ ಉಳಿಸಿಕೊಂಡು, ನಾಲ್ಕೂ ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಬ್ರಿಟಿಷರ ಕಾಲದಲ್ಲಿ ವಸಾಹತುಶಾಹಿ ಮತ್ತು ಮೈಸೂರು ಶೈಲಿ ವಾಸ್ತುಶಿಲ್ಪಗಳ ಮಿಶ್ರಣಗೊಳಿಸಿ ಹೈಬ್ರಿಡ್ ವಾಸ್ತುಶಿಲ್ಪ ಶೈಲಿಯಲ್ಲಿ 107 ವರ್ಷಗಳ ಹಿಂದೆ ಈ ನಾಲ್ಕು ಚಿಕ್ಕ ನಿಲ್ದಾಣಗಳನ್ನು ನಿರ್ಮಿಸಲಾಗಿತ್ತು. ದೊಡ್ಡಜಾಲ, ದೇವನಹಳ್ಳಿ, ಆವತಿಹಳ್ಳಿ ನಿಲ್ದಾಣಗಳು ಒಂದೇ ವಿನ್ಯಾಸ ಹೊಂದಿದ್ದು, ನಂದಿ ಹಾಲ್ಟ್ ನಿಲ್ದಾಣ ಮಾತ್ರ ಭಿನ್ನ ವಿನ್ಯಾಸದಲ್ಲಿದೆ.
ಪ್ರತಿ ಕಟ್ಟಡದಲ್ಲಿ ನಾಲ್ಕು ಪಾರ್ಶ್ವಗಳ ಮಂಗಳೂರು ಹೆಂಚಿನ ಗೇಬಲ್ ಚಾವಣಿ, ಪ್ರತಿ ಗೇಬಲ್‌ನಲ್ಲಿ ವೃತ್ತಾಕಾರದ ಕಿಟಕಿ, ಸಣ್ಣ ಪಡಸಾಲೆ, ಸ್ಥಳೀಯ ಕಡಪ ಕಲ್ಲಿನ ನೆಲಹಾಸುಗಳಿವೆ ಎಂದು ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ನಿಲ್ದಾಣಗಳ ಕಟ್ಟಡಗಳ ಗೋಡೆಗಳು ಬಿರುಕುಬಿಟ್ಟಿದ್ದವು. ಹೆಂಚುಗಳು ಅಸ್ತವ್ಯಸ್ತವಾಗಿದ್ದವು. ಒಟ್ಟಾರೆ ಕಟ್ಟಡಗಳು ಶಿಥಿಲಗೊಂಡಿದ್ದವು. ಇಂಟ್ಯಾಕ್ ಸಂಸ್ಥೆಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಪಡೆದು, ಈ ಕಟ್ಟಡಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ. ನಿಲ್ದಾಣದ ಆಸುಪಾಸಿನಲ್ಲಿ ಆರ್ಟ್ ಗ್ಯಾಲರಿ, ಗ್ರಂಥಾಲಯ, ರೇಷ್ಮೆ ಮ್ಯೂಸಿಯಮ್‌ಗಳ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ವಿವರಿಸಿದರು.
ನಂದಿ ಹಾಲ್ಟ್ ನಿಲ್ದಾಣ ಹೊರತುಪಡಿಸಿ ಉಳಿದ ಮೂರು ನಿಲ್ದಾಣಗಳಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ದುರಸ್ತಿ ಮಾಡಲಾಗಿದೆ. ಉಳಿದ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಈ ನಿಲ್ದಾಣಗಳು ಪ್ರವಾಸಿ ತಾಣಗಳಾಗಲಿವೆ. ಚಿಕ್ಕಬಳ್ಳಾಪುರ ಕಡೆಗೆ ತೆರಳುವ ರೈಲುಗಳಲ್ಲಿ ಪ್ರವಾಸಿಗರು ಬಂದು ವೀಕ್ಷಿಸಬಹುದು. ಪ್ರವಾಸಿಗರು ಇಲ್ಲಿಗೆ ಬಂದು ಹೋಗಲು ಬಸ್‌ಗಳ ವ್ಯವಸ್ಥೆ ಮಾಡುವಂತೆಯೂ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ನೈರುತ್ಯ ರೈಲ್ವೆಗೆ ಯಾವುದೇ ಆರ್ಥಿಕ ಹೊರೆಯಾಗದಂತೆ ಈ ಕಟ್ಟಡಗಳನ್ನು ಪುನರುಜ್ಜೀವಗೊಳ್ಳುತ್ತಿವೆ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.