ಬೆಂಗಳೂರು: ಯುಪಿಐ ಆಧಾರಿತ ಆ್ಯಪ್‌ಗಳ ಮೂಲಕ ಹಣ ಪಾವತಿಸಿಕೊಂಡು ಟಿಕೆಟ್ ನೀಡುವುದರಲ್ಲಿ ಬಿಎಂಟಿಸಿ ಮುಂಚೂಣಿಯಲ್ಲಿದೆ. ಆದರೆ, ದೂರ ಪ್ರಯಾಣದ ಬಸ್‌ಗಳಲ್ಲಿ ಮಾತ್ರ ಈ ವ್ಯವಸ್ಥೆ ಇದ್ದು, ಉಳಿದ ಬಸ್‌ಗಳಲ್ಲಿ ಅನುಷ್ಠಾನಗೊಂಡಿಲ್ಲ.
ಕೋವಿಡ್ ಕಾಲದಲ್ಲಿ ಅಂತರ ಕಾಪಾಡಿಕೊಳ್ಳಬೇಕು ಎಂಬ ನಿಯಮ ಬಂದಾಗ ಬಿಎಂಟಿಸಿ ಬಸ್‌ನಲ್ಲಿ ಯುಪಿಐ ಆಧಾರಿತ ಪಾವತಿ ವ್ಯವಸ್ಥೆಯನ್ನು 2021ರ ಮೇ ತಿಂಗಳಲ್ಲಿ ಪರಿಚಯಿಸಲಾಗಿತ್ತು. ಆ ವರ್ಷ 8 ತಿಂಗಳಲ್ಲಿ ₹36 ಲಕ್ಷ ವರಮಾನ ಯುಪಿಐ ಆಧಾರಿತವಾಗಿ ಬಂದಿದ್ದರೆ, ಈ ವರ್ಷ 7 ತಿಂಗಳಲ್ಲಿ ₹ 50 ಕೋಟಿ ದಾಟಿರುವುದು ಯುಪಿಐ ಬಳಕೆಗೆ ಪ್ರಯಾಣಿಕರು ಹೆಚ್ಚು ಒತ್ತು ನೀಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.
‘ಉಳಿದ ನಿಗಮಗಳಲ್ಲಿ ಯುಪಿಐ ವ್ಯವಸ್ಥೆ ಇತ್ತೀಚೆಗೆ ಜಾರಿಯಾಗುತ್ತಿದೆ. ನಾವು ಮೂರೂವರೆ ವರ್ಷಗಳ ಹಿಂದೆಯೇ ಅನುಷ್ಠಾನಕ್ಕೆ ತಂದಿದ್ದೇವೆ. ಈಗ ಪ್ರತಿದಿನ ₹ 20 ಲಕ್ಷದಿಂದ ₹ 25 ಲಕ್ಷವರೆಗೆ ಯುಪಿಐ ಮೂಲಕ ಬರುತ್ತಿದೆ. ಇದು ಉಳಿದ ನಿಗಮಗಳಿಗಿಂತ ಅಧಿಕ’ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಾಯೋಗಿಕ ಸಮಸ್ಯೆ: ಬಿಎಂಟಿಸಿಯ ಎಲ್ಲ ಬಸ್‌ಗಳಲ್ಲಿ ಯುಪಿಐ ಬಳಸಬೇಕು ಎಂದು ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಜೊತೆಗೆ ಎಲ್ಲ ನಿರ್ವಾಹಕರಿಗೆ ಯುಪಿಐ ಆಧಾರಿತವಾಗಿ ಕಾರ್ಯನಿರ್ವಹಿಸುವ ಟಿಕೆಟ್ ಮಷಿನ್‌ಗಳನ್ನೂ ಕೂಡ ನೀಡಿದ್ದಾರೆ. ಆದರೆ, ದೇವನಹಳ್ಳಿ, ಬನ್ನೇರುಘಟ್ಟ ಹೀಗೆ ದೂರದ ಊರಿಗೆ ಸಾಗುವ ವೋಲ್ವೊ ಬಸ್‌ಗಳನ್ನು ಹೊರತುಪಡಿಸಿ ಉಳಿದ ಬಸ್‌ಗಳಲ್ಲಿ ಬಳಕೆ ಬಹಳ ಕಡಿಮೆ ಇದೆ.
‘ನಗರದಲ್ಲಿ ಸಂಚರಿಸುವ ಸಾಮಾನ್ಯ ಬಸ್‌ಗಳಿಗೆ ಅರ್ಧ ಕಿಲೋಮೀಟರ್‌ಗೆ ಒಮ್ಮೆ ನಿಲುಗಡೆ ಇರುತ್ತದೆ. ಬಸ್ ಹತ್ತಿ ಮುಂದಿನ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರಿಗೆ ತಕ್ಷಣ ಟಿಕೆಟ್ ನೀಡಬೇಕು. ಒಂದೆರಡು ಪ್ರಯಾಣಿಕರಾದರೆ ಗೂಗಲ್ ಪೇ/ ಫೋನ್ ಪೇ ಮೂಲಕ ಪಾವತಿ ಮಾಡಿಸಿಕೊಳ್ಳಬಹುದು. ಜನಸಂದಣಿ ಜಾಸ್ತಿ ಇರುವ ಹೊತ್ತಿನಲ್ಲಿ ಅಷ್ಟು ಸಮಯ ಇರುವುದಿಲ್ಲ. ಅವರು ಪಾವತಿ ಮಾಡಿರುವ ಹಣ ಬಂದಿದೆಯೊ? ಇಲ್ಲವೊ? ಎಂದು ನೋಡುವಷ್ಟರಲ್ಲಿ ನಿಲ್ದಾಣ ಬಂದಿರುತ್ತದೆ’ ಎಂದು ಬಿಎಂಟಿಸಿ ಬಸ್ ನಿರ್ವಾಹಕರೊಬ್ಬರು ಸಮಸ್ಯೆ ಹೇಳಿಕೊಂಡರು.
‘ವೋಲ್ವೊ, ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ದೂರದ ಮಾರ್ಗಗಳಾಗಿರುವುದರಿಂದ ಅಲ್ಲಿ ಯುಪಿಐ ಪಾವತಿ ಬಾರದೇ ಇದ್ದರೆ ಮತ್ತೆ ಕೇಳುವ ಅವಕಾಶ ಇರುತ್ತದೆ. ಇಲ್ಲಿ ಸಮಯವೂ ಕಡಿಮೆ. ನೂಕುನುಗ್ಗಲಲ್ಲಿ ಖಚಿತಪಡಿಸಿಕೊಳ್ಳುವುದೂ ಕಷ್ಟ. ಅದಕ್ಕಾಗಿ ಸಾಮಾನ್ಯ ಬಸ್‌ಗಳಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ’ ಎಂದು ವಿವರಿಸಿದರು.
ಪೂರ್ಣ ಪ್ರಮಾಣದಲ್ಲಿ ಜಾರಿಗೆ ಪ್ರಯತ್ನ: ಕೋವಿಡ್ ಕಾಲದಲ್ಲಿ ಎಲ್ಲ ಬಸ್‌ಗಳಲ್ಲಿ ಯುಪಿಐ ಬಳಕೆಯಾಗುತ್ತಿತ್ತು. ಆನಂತರ ಜನ ಸಂಚಾರ ಹೆಚ್ಚಾದ ಮೇಲೆ ಸಾಮಾನ್ಯ ಬಸ್‌ಗಳಲ್ಲಿ ಪ್ರಾಯೋಗಿಕ ಸಮಸ್ಯೆಯಿಂದ ಪೂರ್ಣ ಪ್ರಮಾಣದಲ್ಲಿ ಯುಪಿಐ ಬಳಕೆಯಾಗುತ್ತಿಲ್ಲ. ನೆಟ್‌ವರ್ಕ್ ಸಮಸ್ಯೆ, ಅಧಿಕ ದಟ್ಟಣೆ, ಸಮಯದ ಕೊರತೆ ಇನ್ನಿತರ ಸಮಸ್ಯೆಗಳು ಇದಕ್ಕೆ ಕಾರಣ. ಎಲ್ಲ ನಿಗಮಗಳಲ್ಲಿ ನಗರ ಮತ್ತು ಸ್ಥಳೀಯ ಸಂಚಾರದ ಬಸ್‌ಗಳಿಗೆ ಮಾತ್ರ ಇಂಥ ಸಮಸ್ಯೆಗಳು ಎದುರಾಗುತ್ತಿವೆ. ಅಂತರ್ ನಗರ ಸಂಚಾರದ ಬಸ್‌ಗಳಲ್ಲಿ ಯುಪಿಐ ಅಳವಡಿಕೆ ಸುಲಭ. ಆದರೂ ಬಿಎಂಟಿಸಿಯಲ್ಲಿ ಪೂರ್ಣಪ್ರಮಾಣದಲ್ಲಿ ಯುಪಿಐ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನಿಸಲಾಗುವುದು’ ಎಂದು ಬಿಎಂಟಿಸಿಯ ಸಂಚಾರ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಪ್ರತಿ ತಿಂಗಳು ಹೆಚ್ಚಳವಾಗುತ್ತಿದೆ
ಜನರು ಫೋನ್ ಪೇ ಗೂಗಲ್ ಪೇ ಸಹಿತ ಯುಪಿಐ ಆಧಾರಿತವಾಗಿ ಪಾವತಿ ಮಾಡುವುದಕ್ಕೆ ಒಗ್ಗಿ ಹೋಗಿದ್ದಾರೆ. ಅಂಗಡಿ ಹೋಟೆಲ್ ಮಾಲ್ ಸಹಿತ ಎಲ್ಲ ಕಡೆ ಬಳಸುತ್ತಿದ್ದಾರೆ. ನೆಟ್‌ವರ್ಕ್ ಇನ್ನಿತರ ಸಮಸ್ಯೆ ಎದುರಾಗದೇ ಇದ್ದರೆ ಬಸ್‌ಗಳಲ್ಲಿಯೂ ಯುಪಿಐ ಮೂಲಕ ಪಾವತಿ ಮಾಡುತ್ತಾರೆ. ಬಿಎಂಟಿಸಿ ಬಸ್‌ಗಳಲ್ಲಿ ಯುಪಿಐ ಆಧಾರಿತ ಟಿಕೆಟ್ ಹಣ ಸಂಗ್ರಹದಲ್ಲಿ ಪ್ರತಿ ತಿಂಗಳು ಹೆಚ್ಚಳವಾಗುತ್ತಿದೆ. ಸಂಸ್ಥೆಯ ಟಿಕೆಟ್ ಆಧಾರಿತ ಒಟ್ಟು ವರಮಾನದಲ್ಲಿ ಶೇ 10ರಷ್ಟು ಯುಪಿಐ ಮೂಲಕವೇ ಬರುತ್ತಿದೆ. ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲು ಪ್ರೋತ್ಸಾಹಿಸುತ್ತೇವೆ. ರಾಮಚಂದ್ರನ್ ಆರ್. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ
ಚಿಲ್ಲರೆ ಸಮಸ್ಯೆ ಸರಿಪಡಿಸಿ
‘₹5 ₹10 ಚಿಲ್ಲರೆ ನೀಡುವುದೇ ಸಮಸ್ಯೆಯಾಗಿದೆ. ಅದಕ್ಕಾಗಿ ಬಸ್ ನಿರ್ವಾಹಕರು ಪ್ರಯಾಣಿಕರ ಮಧ್ಯೆ ಆಗಾಗ ಜಗಳಗಳಾಗುತ್ತಿವೆ. ಇತ್ತೀಚೆಗೆ ಹೆಬ್ಬಾಳ–ಚಂದ್ರಾಪುರ ಬಸ್‌ನಲ್ಲಿ ₹ 5 ಚಿಲ್ಲರೆಗೆ ಗಲಾಟೆಯಾಗಿ ನಿರ್ವಾಹಕನನ್ನೇ ಅಧಿಕಾರಿಗಳು ಅಮಾನತು ಮಾಡಿದ್ದರು. ಯುಪಿಐ ವ್ಯವಸ್ಥೆಯನ್ನು ಎಲ್ಲ ಬಸ್‌ಗಳಲ್ಲಿ ಜಾರಿಗೆ ತಂದರೆ ಇಂಥ ‘ಚಿಲ್ಲರೆ’ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ’ ಎಂದು ಪ್ರಯಾಣಿಕ ಯೋಗೀಶ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.