ADVERTISEMENT

ಬೆಂಗಳೂರು | ಕಾರು ನಿಲುಗಡೆ ವಿಚಾರಕ್ಕೆ ಗಲಾಟೆ: ವೃದ್ಧರಿಗೆ ಚಾಕು ಇರಿತ

ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರ ಕಾರ್ಯಾಚರಣೆ: ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 17:55 IST
Last Updated 14 ನವೆಂಬರ್ 2024, 17:55 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಬೆಂಗಳೂರು: ಮನೆ ಎದುರು ಕಾರು ನಿಲುಗಡೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವೃದ್ಧರೊಬ್ಬರಿಗೆ ಚಾಕುವಿನಿಂದ ಇರಿದಿದ್ದ ಆರೋಪಿಯನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಗರಬಾವಿ 2ನೇ ಹಂತದ ವಿನಾಯಕ ಬಡಾವಣೆಯ ನಿವಾಸಿ ದಳಪತಿ (70) ಅವರಿಗೆ ಚಾಕುವಿನಿಂದ ಇರಿಯಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಳಪತಿ ಅವರು ಅಪಾಯದಿಂದ ಪಾರಾಗಿದ್ದಾರೆ.

ಕೃತ್ಯದ ಎಸಗಿದ ಆರೋಪದಡಿ ನಾಗರಬಾವಿಯ ನಿವಾಸಿ, ಕ್ಯಾಬ್‌ ಚಾಲಕ ರಾಘವೇಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

‘ಚಾಕು ಇರಿತಕ್ಕೆ ಒಳಗಾದ ದಳಪತಿ ಹಾಗೂ ಆರೋಪಿ ರಾಘವೇಂದ್ರ ಅಕ್ಕಪಕ್ಕದ ಮನೆಯ ನಿವಾಸಿಗಳು. ದಳಪತಿ ಅವರು ತಮ್ಮ ಕಾರನ್ನು ಬುಧವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಮನೆಯ ಎದುರು ತಂದು ನಿಲ್ಲಿಸಿದ್ದರು. ಅದೇ ಸಮಯಕ್ಕೆ ಕಾರಿನಲ್ಲಿ ಬಂದಿದ್ದ ಆರೋಪಿ, ಕಾರನ್ನು ಬೇರೆಡೆ ನಿಲ್ಲಿಸುವಂತೆ ಸೂಚಿಸಿದ್ದ. ದಳಪತಿ ಮನೆಯಲ್ಲಿ ಇದ್ದವರು ಹೊರಗೆ ಬಂದು, ಕಾರನ್ನು ಏಕೆ ಬೇರೆ ಸ್ಥಳದಲ್ಲಿ ನಿಲ್ಲಿಸಬೇಕೆಂದು ಪ್ರಶ್ನಿಸಿದ್ದರು. ಅಲ್ಲದೇ ನಾವು ಬಹಳ ವರ್ಷಗಳಿಂದ ಈ ಸ್ಥಳದಲ್ಲೇ ಕಾರು ನಿಲುಗಡೆ ಮಾಡುತ್ತಿದ್ದೇವೆ. ಸಾರ್ವಜನಿಕರ ಸ್ಥಳದಲ್ಲಿ ಕಾರು ನಿಲ್ಲಿಸಲಾಗಿದೆ ಎಂಬುದಾಗಿ ಹೇಳಿದ್ದರು. ಆಗ ವಾಗ್ವಾದ ನಡೆದಿತ್ತು’ ಎಂದು ಪೊಲೀಸರು ತಿಳಿಸಿದರು.

‘ದಳಪತಿ ಅವರ ಸೊಸೆ ಹಾಗೂ ಆರೋಪಿ ಮಧ್ಯೆ ವಾಗ್ವಾದ ನಡೆಯುತ್ತಿದ್ದ ಸಮಯದಲ್ಲಿ ದಳಪತಿ ಅವರು ಮನೆಯಿಂದ ಹೊರಕ್ಕೆ ಬಂದಿದ್ದರು. ಅವರೂ ಕ್ಯಾಬ್‌ ಚಾಲಕನನ್ನು ಪ್ರಶ್ನಿಸಿದ್ದರು. ಇದರಿಂದ ಸಿಟ್ಟಿಗೆದ್ದ ಆರೋಪಿ ಚಾಕುವಿನಿಂದ ಇರಿದು ಪರಾರಿ ಆಗಿದ್ದ’ ಎಂದು ಪೊಲೀಸರು ತಿಳಿಸಿದರು.

‘ದಳಪತಿ ಕುಟುಂಬಸ್ಥರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.