ADVERTISEMENT

‘ಹೊಸತಿಗೆ ತುಡಿದ ಅನಂತಮೂರ್ತಿ’

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 20:00 IST
Last Updated 15 ಡಿಸೆಂಬರ್ 2019, 20:00 IST
‘ಎ ಲೈಫ್ ಇನ್ ದ ವರ್ಲ್ಡ್’ ಕೃತಿಯನ್ನು ಕೆ.ಎಸ್. ನಿಸಾರ್ ಅಹಮದ್ ಬಿಡುಗಡೆ ಮಾಡಿದರು. ಲೇಖಕಿ ಎಂ.ಎಸ್.ಆಶಾದೇವಿ, ಕವಿ ಎಚ್.ಎಸ್. ಶಿವಪ್ರಕಾಶ್, ಭಾಗವತರು ಸಾಂಸ್ಕೃತಿಕ ಸಂಘಟನೆ ಅಧ್ಯಕ್ಷ ಕೆ.ರೇವಣ್ಣ, ಲೇಖಕ ಚಂದನ್ ಗೌಡ ಇದ್ದರು  –ಪ್ರಜಾವಾಣಿ ಚಿತ್ರ
‘ಎ ಲೈಫ್ ಇನ್ ದ ವರ್ಲ್ಡ್’ ಕೃತಿಯನ್ನು ಕೆ.ಎಸ್. ನಿಸಾರ್ ಅಹಮದ್ ಬಿಡುಗಡೆ ಮಾಡಿದರು. ಲೇಖಕಿ ಎಂ.ಎಸ್.ಆಶಾದೇವಿ, ಕವಿ ಎಚ್.ಎಸ್. ಶಿವಪ್ರಕಾಶ್, ಭಾಗವತರು ಸಾಂಸ್ಕೃತಿಕ ಸಂಘಟನೆ ಅಧ್ಯಕ್ಷ ಕೆ.ರೇವಣ್ಣ, ಲೇಖಕ ಚಂದನ್ ಗೌಡ ಇದ್ದರು  –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಯು.ಆರ್. ಅನಂತಮೂರ್ತಿ ಅವರು ಪ್ರಾಯೋಗಿಕ ವಿಮರ್ಶೆಗೆ ಹೊಸ ಹಾದಿ ಹಾಕಿಕೊಟ್ಟರು’ ಎಂದು ಹಿರಿಯ ಕವಿ ಕೆ.ಎಸ್. ನಿಸಾರ್ ಅಹಮದ್ ಹೇಳಿದರು.

‘ಭಾಗವತರು’ ಸಾಂಸ್ಕೃತಿಕ ಸಂಘಟನೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಡಾ.ಯು.ಆರ್. ಅನಂತ
ಮೂರ್ತಿ ಮರು ಓದಿನ ನೆಲೆಗಳು’ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ‘ಕುರಿಗಳು ಸಾರ್ ಕುರಿಗಳು’ ಕವಿತೆಯನ್ನು ಬರೆದಾಗ ಅದು ಅನಂತಮೂರ್ತಿಗೆ ಇಷ್ಟವಾಗಲಿಲ್ಲ. ಅವರೇ ವಿಮರ್ಶೆ ಬರೆದರೆ ನನ್ನ ಗೌರವಕ್ಕೆ ಚ್ಯುತಿ ಬರಬಹುದೆಂಬ ಕಾರಣಕ್ಕೆ ‘ಋಜುವಾತು’ ಪತ್ರಿಕೆಯಲ್ಲಿ ಶಿಷ್ಯನ ಮೂಲಕ ಬರೆಸಿದ್ದರು. ನಾನೇ ಭೇಟಿಯಾಗಿ ಕೇಳಿದಾಗ ಕವಿತೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿರೋಧಿಸಿದಂತಿದೆ ಎಂದಿದ್ದರು’ ಎಂದು ಅವರು ನೆನಪಿಸಿಕೊಂಡರು.

ADVERTISEMENT

‘ಅನಂತಮೂರ್ತಿ ಒಳ್ಳೆಯ ಗದ್ಯ ಬರಹಗಾರನೇ ಹೊರತು ನಾಟಕಕಾರನಲ್ಲ. ಅವರೇ ಬರೆದಿದ್ದ ನಾಟಕವನ್ನು ಮೈಸೂರಿನಲ್ಲಿ ನೋಡಲು ಹೋಗಿ ಅರ್ಧಕ್ಕೆ ಎದ್ದು ಬಂದು ನೇರವಾಗಿ ಅವರಿಗೇ ಹೇಳಿದ್ದೆ. ನಾಟಕ ಬರೆಯಬೇಕೆಂಬ ಗೀಳಿನಿಂದಷ್ಟೇ ಬರೆದೆ ಎಂದಿದ್ದರು’ ಎಂದು ನಿಸಾರ್ ಮೆಲುಕು ಹಾಕಿದರು.

ಕವಿ ಪ್ರೊ.ಎಚ್.ಎಸ್. ಶಿವಪ್ರಕಾಶ್ ಮಾತನಾಡಿ, ‘ಸಮಗ್ರ ಕನ್ನಡ ನವ್ಯ ಸಾಹಿತ್ಯದ ಕುರಿತು ಇದುವರೆಗೆ ಗಂಭೀರ ಚಿಂತನೆಗಳು ನಡೆದಿಲ್ಲ. ಈ ನಿಟ್ಟಿನಲ್ಲಿ ಅಧ್ಯಯನಗಳ ಅವಶ್ಯಕತೆ ಇದೆ’ ಎಂದು ಹೇಳಿದರು.

‘ಇಂಗ್ಲಿಷ್ ನವ್ಯ ಸಾಹಿತ್ಯದ ಕುರಿತು ಸಾಕಷ್ಟು ಚಿಂತನೆಗಳು ನಡೆದಿವೆ. ದೃಶ್ಯಕಲೆ ಕ್ಷೇತ್ರದಲ್ಲೂ ಸಾಕಷ್ಟು ಕಲಾ ವಿಮರ್ಶೆ ನಡೆದಿದೆ. ಆದರೆ, ಕನ್ನಡ ನವ್ಯದ ಬಗ್ಗೆ ಸಮಗ್ರವಾದ ಗಂಭೀರ ಚಿಂತನೆಗಳಾಗಿಲ್ಲ. ಪೂರ್ಣಚಂದ್ರ ತೇಜಸ್ವಿ, ಡಾ.ಯು.ಆರ್. ಅನಂತಮೂರ್ತಿ ಮತ್ತು ಪಿ. ಲಂಕೇಶ್ ನವ್ಯ ಕನ್ನಡ ಸಾಹಿತ್ಯದ ತ್ರಿಮೂರ್ತಿಗಳು’ ಎಂದರು.

‘ಜಾತಿಗಳಲ್ಲಾಗುತ್ತಿರುವ ಬದಲಾವಣೆಗಳನ್ನು ಸಮಾಜಶಾಸ್ತ್ರಜ್ಞರು ಗಮನಿಸಬೇಕು. ಚಂದನ್‍ಗೌಡ ಅವರು ತಮ್ಮ ಸಂಯೋಜಿತ ಕೃತಿಯಲ್ಲಿ ಹೇಳಿದಂತೆ ಇವತ್ತಿನ ಲಿಂಗಾಯತರು ಬಸವಣ್ಣನ ಕಾಲದವರಲ್ಲ, ರೋಮನ್ ಕೆಥೋಲಿಕ್ ಚರ್ಚ್‍ನ ಲಿಂಗಾಯತರು. ಈ ಬದಲಾವಣೆಗಳನ್ನು ಸಮಾಜಶಾಸಜ್ಞರೂ ಗಮನಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.