ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಪತ್ತು ಪರಿಹಾರ ನಿಧಿ ಅಡಿಯಲ್ಲಿ ಒಟ್ಟು ₹ 1,171.33 ಕೋಟಿ ವೆಚ್ಚದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಕೆಟಿಟಿಪಿ ಕಾಯ್ದೆಯ ನಿಯಮ 4 (ಜಿ) ಅನ್ವಯ ಟೆಂಡರ್ ಕರೆಯುವುದರಿಂದ ವಿನಾಯಿತಿ ಕೋರಿ ಬಿಬಿಎಂಪಿಯು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಇವುಗಳು ತುರ್ತಾಗಿ ಕೈಗೊಳ್ಳುವ ಕಾಮಗಾರಿಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಅಭಿಪ್ರಾಯಪಟ್ಟಿದೆ.
ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಕಾಮಗಾರಿಗಳನ್ನು ರಾಜ್ಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಯಂತೆ ಕೈಗೊಳ್ಳುವ ಪ್ರಸ್ತಾವವನ್ನು ಮರುಪರಿಶೀಲಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಸಲಹೆ ನೀಡಿದ್ದಾರೆ.
ಬಿಬಿಎಂಪಿ ಸಲ್ಲಿಸಿರುವ ಪ್ರಸ್ತಾವಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಈ ಪ್ರಸ್ತಾವದಲ್ಲಿ ಉಲ್ಲೇಖಿಸಲಾದ ಬಹಳಷ್ಟು ಕಾಮಗಾರಿಗಳು ರಸ್ತೆಗಳ ಸಾಮಾನ್ಯ ನಿರ್ವಹಣೆ ಮತ್ತು ಭವಿಷ್ಯದಲ್ಲಿ ವಿಪತ್ತು ಸಂಭವಿಸುವುದನ್ನು ತಡೆಗಟ್ಟುವುದಕ್ಕೆ ಸಂಬಂಧಿಸಿದವು. ಈ ಕಾಮಗಾರಿಗಳು ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಯನ್ವಯ ತುರ್ತು ದುರಸ್ತಿಗೊಳಿಸುವ ಕಾಮಗಾರಿಗಳ ವ್ಯಾಪ್ತಿಯಲ್ಲಿಲ್ಲ ಎಂದು ಅವರು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಫೆ.11ರಂದು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
₹ 1,173.33 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಗಳನ್ನು ಬಿಬಿಎಂಪಿಯ ಸ್ವಂತ ಸಂಪನ್ಮೂಲ ಭರಿಸಿ ಅನುಷ್ಠಾನಗೊಳಿಸಬೇಕು ಅಥವಾ ಇತ್ತೀಚೆಗೆ ಅನುಮೋದನೆ ನೀಡಿರುವ ‘ಅಮೃತ ನಗರೋತ್ಥಾನ ಯೋಜನೆ’ ಅಡಿ ಬಿಬಿಎಂಪಿ ಈ ಕಾಮಗಾರಿಗಳನ್ನು ಕೈಗೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಅಗತ್ಯವಿದ್ದರೆ, ಯಾವೆಲ್ಲ ಕಾಮಗಾರಿಗಳನ್ನು ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಕೈಗೊಳ್ಳಲು ಅವಕಾಶವಿದೆ ಎಂಬುದನ್ನು ಉಲ್ಲೇಖಿಸಿ ಅರ್ಹ ಮೊತ್ತಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ.
ನಗರದಲ್ಲಿ ಹಾಳಾಗಿರುವ ರಸ್ತೆ ಮತ್ತು ರಾಜಕಾಲುವೆಗಳನ್ನು ಸರಿಪಡಿಸಲು ವಿಪತ್ತು ಪರಿಹಾರ ನಿಧಿಯಡಿ ₹1,173 ಕೋಟಿ ಅನುದಾನ ಮಂಜೂರು ಮಾಡಬೇಕು. ಈ ಕಾಮಗಾರಿಗಳನ್ನು ಟೆಂಡರ್ ಪ್ರಕ್ರಿಯೆ ನಡೆಸದೆಯೇ ಅನುಷ್ಠಾನಗೊಳಿಸಲು ಒಪ್ಪಿಗೆ ನೀಡಬೇಕು ಎಂದು ಕೋರಿ ಬಿಬಿಎಂಪಿಯು 2021ರ ಡಿಸೆಂಬರ್ ಆರಂಭದಲ್ಲಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿತ್ತು.
ನಗರದಲ್ಲಿ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಒಟ್ಟು ಉದ್ದ 1,344 ಕಿಲೋ ಮೀಟರ್‌ಗಳಷ್ಟಿದೆ. 2019-20, 2020-21ನೇ ಸಾಲಿನ ನವ ನಗರೋತ್ಥಾನ ಯೋಜನೆ ಅಡಿ 300 ಕಿ.ಮೀ ಉದ್ದದಷ್ಟು ರಸ್ತೆಗಳ ಅಭಿವೃದ್ಧಿಗೆ ಅನುಮೋದನೆ ದೊರೆತಿದೆ. 192 ಕಿ.ಮೀ ರಸ್ತೆಯನ್ನು ಅತಿ ದಟ್ಟಣೆಯ ಕಾರಿಡಾರ್ ಎಂದು ಗುರುತಿಸಲಾಗಿದ್ದು, ಕೆಆರ್‌ಡಿಸಿಎಲ್‌ಗೆ ನಿರ್ವಹಣೆಗೆ ಒಪ್ಪಿಸಲು ನಿರ್ಧರಿಸಲಾಗಿದೆ. 180 ಕಿ.ಮೀಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿ, 30 ಕಿ.ಮೀ.ನಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಕೈಗೊಳ್ಳಲಾಗಿದೆ. ಉಳಿದ 642 ಕಿ.ಮೀ ರಸ್ತೆಯಲ್ಲಿ, 62 ಕಿ.ಮೀ ರಸ್ತೆಗಳ ಹೊಣೆಗಾರಿಕೆ ಅವಧಿ (ಡಿಎಲ್‌ಪಿ) ಇನ್ನೂ ಚಾಲ್ತಿಯಲ್ಲಿದ್ದು, ಅವುಗಳನಿರ್ವಹಣೆಯ ಹೊಣೆ ಗುತ್ತಿಗೆದಾರರದ್ದು. ಇನ್ನುಳಿದ 580 ಕಿ.ಮೀ ರಸ್ತೆಗಳಿಗೆ 3 ವರ್ಷಗಳಿಂದ ಡಾಂಬರೀಕರಣ ಮಾಡಿಲ್ಲ. ಹಾಗಾಗಿ ಈ ರಸ್ತೆಗಳು ಭಾರಿ ಮಳೆಯಿಂದ ಹಾನಿಗೊಳಗಾಗಿವೆ. ಈ ರಸ್ತೆಗಳ ದುರಸ್ತಿಗೆ ₹ 100 ಕೋಟಿ ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿದೆ’ ಎಂದು ಬಿಬಿಎಂಪಿ ತಿಳಿಸಿತ್ತು.
‘ನಾಲ್ಕು ಪ್ರಮುಖ ರಾಜಕಾಲುವೆಗಳಲ್ಲಿ ತಡೆಗೋಡೆಗಳು ಶಿಥಿಲಗೊಂಡಿವೆ. ಬಡಾವಣೆಗಳಿಗೆ ಮಳೆ ನೀರು ನುಗ್ಗಿ ಹಾನಿಯಾಗಿದೆ. ತಡೆಗೋಡೆಗಳ ಮರು ನಿರ್ಮಾಣದ ಅವಶ್ಯಕತೆ ಇದೆ. ಅದಕ್ಕಾಗಿ 120 ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದ್ದು, ₹411.33 ಕೋಟಿ ವೆಚ್ಚವಾಗುವ ಅಂದಾಜಿದೆ. 8 ಕಸ ಸಂಸ್ಕರಣಾ ಘಟಕಗಳಿಗೆ ಕಸ ಸಾಗಿಸುವ 600 ಕಾಂಪ್ಯಾಕ್ಟರ್‌ಗಳು ಸಂಚರಿಸುವ ಕೂಡು ರಸ್ತೆಗಳೂ ಹಾಳಾಗಿವೆ. ಅವುಗಳ ದುರಸ್ತಿಗೆ ₹50 ಕೋಟಿ ಅಗತ್ಯವಿದೆ. 8 ವಲಯಗಳ ವ್ಯಾಪ್ತಿಯಲ್ಲಿ ಸುಮಾರು 11 ಸಾವಿರ ರಸ್ತೆಗಳಿದ್ದು, ಭಾರಿ ಮಳೆಯಿಂದ ಆ ರಸ್ತೆಗಳು ಬಹುತೇಕ ಹಾಳಾಗಿವೆ. ಇವುಗಳ ದುರಸ್ತಿಗೆ ₹600 ಕೋಟಿ ಬೇಕಿದೆ’ ಎಂದು ಬಿಬಿಎಂಪಿ ವಿವರಿಸಿತ್ತು. ಈ ಎಲ್ಲ ಕಾಮಗಾರಿಗಳನ್ನು ಕೂಡಲೇ ಕೈಗೆತ್ತಿಕೊಳ್ಳಬೇಕಿರುವುದರಿಂದ ಕೆಟಿಪಿಪಿ ಕಾಯ್ದೆಯ 4 (ಜಿ) ನಿಯಮದಡಿ ಟೆಂಡರ್ ಕರೆಯುವುದರಿಂದ ವಿನಾಯಿತಿ ನೀಡಬೇಕು ಎಂದು ಪಾಲಿಕೆ ಕೋರಿತ್ತು.
ಸರ್ಕಾರದಿಂದ ಬಿಬಿಎಂಪಿ ಕೋರಿದ್ದ ಅನುದಾನದ ವಿವರ
₹ 100 ಕೋಟಿ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೆ
₹ 411.33 ಕೋಟಿ ರಾಜಕಾಲುವೆ ದುರಸ್ತಿಗೆ
₹ 50 ಕೋಟಿ ಕಸ ನಿರ್ವಹಣೆ ಮತ್ತು ರಸ್ತೆ ದುರಸ್ತಿಗೆ
₹ 600 ಕೋಟಿ ವಲಯಗಳಲ್ಲಿನ ದುರಸ್ತಿ ಕಾಮಗಾರಿಗಳಿಗೆ
₹ 10 ಕೋಟಿ ನಿಯಂತ್ರಣ ಕೊಠಡಿಗಳಿಗೆ ಯಂತ್ರೋಪಕರಣಗಳ ಖರೀದಿಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.