ADVERTISEMENT

₹147 ಕೋಟಿ ಕಾಮಗಾರಿಗೆ ‘ಸ್ಟುಪ್‌’ ನಿಗಾ

ಸಂಶಯಾಸ್ಪದ ಕಾಮಗಾರಿಗಳ ಪರಿಶೀಲನೆಗೆ ನಿರ್ಧಾರ; ಸಮಗ್ರ ವರದಿ ನೀಡುವ ಹೊಣೆ

ಮಂಜುನಾಥ್ ಹೆಬ್ಬಾರ್‌
Published 19 ಜುಲೈ 2020, 20:08 IST
Last Updated 19 ಜುಲೈ 2020, 20:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಿಬಿಎಂಪಿ ವತಿಯಿಂದ ಕೈಗೆತ್ತಿಕೊಳ್ಳಲಿರುವ ₹147.45 ಕೋಟಿ ವೆಚ್ದದ ಐದು ಕಾಮಗಾರಿಗಳ ಮೇಲೆ ನಿಗಾ ಇಡಲು ನಗರಾಭಿವೃದ್ದಿ ಇಲಾಖೆ ಮುಂದಾಗಿದೆ. ಈ ಕಾಮಗಾರಿಗಳ ಪರಿಶೀಲನೆ ನಡೆಸಿ ಸಮಗ್ರ ವರದಿ ನೀಡುವ ಹೊಣೆಯನ್ನು ‘ಸ್ಟುಪ್‌’ ಕನ್ಸಲ್ಟೆನ್ಸಿಗೆ ವಹಿಸಿದೆ.

’ಪಾಲಿಕೆಯ ಕಾಮಗಾರಿಗಳ ಮೊತ್ತವನ್ನು ಏಕಾಏಕಿ ಹಿಗ್ಗಿಸಲಾಗುತ್ತಿದೆ. ಅನೇಕ ಕಾಮಗಾರಿಗಳನ್ನು ಪೂರ್ಣಗೊಳಿಸದೆಯೇ ಬಿಲ್‌ ಪಾವತಿಸಲಾಗುತ್ತಿದೆ. ಕಳಪೆ ಮಟ್ಟದ ಕಾಮಗಾರಿಗಳನ್ನು ನಡೆಸಲಾಗುತ್ತಿದೆ‘ ಎಂಬಿತ್ಯಾದಿ ದೂರುಗಳ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಈ ಕ್ರಮ ಕೈಗೊಂಡಿದೆ. ಪಾಲಿಕೆ ಆಯುಕ್ತರ ತಾಂತ್ರಿಕ ಜಾಗೃತಿ ಕೋಶದ (ಟಿವಿಸಿಸಿ) ಮುಖ್ಯ ಎಂಜಿನಿಯರ್ ಎ.ಬಿ.ದೊಡ್ಡಯ್ಯ ಅವರನ್ನು ಸಮನ್ವಯಕಾರರನ್ನಾಗಿ ನೇಮಿಸಲಾಗಿದೆ. ಅವರು ಯೋಜನೆಗಳ ಅಂದಾಜು ಪಟ್ಟಿಗಳು ಹಾಗೂ ಇತರ ಅಗತ್ಯ ವಿವರಗಳನ್ನು ಬಿಬಿಎಂಪಿಯಿಂದ ಪಡೆದು ‘ಸ್ಟುಪ್‌’ ಕನ್ಸಲ್ಟೆನ್ಸಿಗೆ ಒದಗಿಸಬೇಕು ಎಂದು ಸೂಚಿಸಲಾಗಿದೆ.

ಹೊಣೆಯೇನು?: ಈ ಸಂಸ್ಥೆಯು ಕಾಮಗಾರಿಗಳ ಅಂದಾಜು ಪಟ್ಟಿಯ ಹಾಗೂ ಸ್ಥಳ ಪರಿಶೀಲನೆ ನಡೆಸಬೇಕು. ಅಂದಾಜುಪಟ್ಟಿಯಲ್ಲಿರುವ ಎಲ್ಲ ವಿವರಣೆಗಳು ಯೋಜನೆಗಳ ಅನುಷ್ಠಾನಕ್ಕೆ ತಾಂತ್ರಿಕವಾಗಿ ಅಗತ್ಯವೇ? ಯೋಜನೆಗಳ ಅನುಷ್ಠಾನದ ವೇಳೆ ಅನಗತ್ಯ ಅಂಶಗಳನ್ನು ಸೇರಿಸಿ ಮೊತ್ತವನ್ನು ಹೆಚ್ಚಿಸಲಾಗುತ್ತಿದೆಯೇ? ಅನಗತ್ಯ ಅಂಶಗಳನ್ನು ಮೂಲ ಅಂದಾಜಿನಲ್ಲಿ ಸೇರಿಸಿ ಬಳಿಕ ನಾಮಕಾವಸ್ತೆ ಕೆಲಸಗಳಿಗೆ ಅನುದಾನ ವರ್ಗಾಯಿಸುವ ಸಾಧ್ಯತೆ ಇದೆಯೇ? ಸರ್ವೆ ಹಾಗೂ ಇತರ ಪರೀಕ್ಷೆಗಳನ್ನು ನಡೆಸಿದ ಬಳಿಕವಷ್ಟೇ ಯೋಜನೆಯ ವಿನ್ಯಾಸ ರೂಪಿಸಿ ವಿಸ್ತೃತಾ ಯೋಜನಾ ವರದಿ (ಡಿಪಿಆರ್‌) ತಯಾರಿಸಲಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸಬೇಕು.

ADVERTISEMENT

‍ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ವೈಟ್‌ ಟಾಪಿಂಗ್‌ ಮತ್ತಿತರ ಕಾಮಗಾರಿಗಳ ಪರಿಶೀಲಿಸಿ ವರದಿ ಸಲ್ಲಿಸಲು ಅವಕಾಶ ಕೊಡಬೇಕು ಎಂದು ಸ್ಟುಪ್‌ ಕನ್ಸಲ್ಟೆನ್ಸಿಯು ಪಾಲಿಕೆ ಆಯುಕ್ತರಿಗೆ ಈ ವರ್ಷದ ಫೆಬ್ರುವರಿಯಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಆಯುಕ್ತರು ಪ್ರಸ್ತಾವವನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ್ದರು. ’ವೈಟ್‌ ಟಾಪಿಂಗ್‌ ಕಾಮಗಾರಿಗಳ ಪರಿಶೀಲನೆಗೆ ಈ ಸಂಸ್ಥೆಯ ನೆರವು ಪಡೆಯಬಹುದು. ಇದಕ್ಕೆ ಕೆಟಿಪಿಪಿ ಕಾಯ್ದೆಯಿಂದ ವಿನಾಯಿತಿ ನೀಡಬಹುದು‘ ಎಂದು ಹಣಕಾಸು ಇಲಾಖೆಯು ನಗರಾಭಿವೃದ್ಧಿ ಇಲಾಖೆಗೆ ಮಾರ್ಚ್‌
ತಿಂಗಳಲ್ಲಿ ತಿಳಿಸಿತ್ತು.

’ಮೊದಲ ಹಂತದಲ್ಲಿ ಕೆಲವು ಸಂಶಯಾಸ್ಪದ ಕಾಮಗಾರಿಗಳ ಅಂದಾಜು ಪರಿಶೀಲನೆಗೆ ಆದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಘನತ್ಯಾಜ್ಯ ನಿರ್ವಹಣೆ, ವಾರ್ಡ್‌ ಕಾಮಗಾರಿಗಳು, ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಸೇರ್ಪಡೆಗೊಳಿಸಲಾಗುವುದು‘ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.

ಯಾವ ಕಾಮಗಾರಿಗಳ ಪರಿಶೀಲನೆ

ಕಾಮಗಾರಿ –ಯೋಜನಾ ಮೊತ್ತ

* ಯಶವಂತಪುರ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ ಸಂಖ್ಯೆ 40 ಹಾಗೂ 72ರಲ್ಲಿ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಸಲುವಾಗಿ ಅಗೆದಿರುವ ರಸ್ತೆಗಳ ಸಮಗ್ರ ಅಭಿವೃದ್ದಿ – ₹35 ಕೋಟಿ

* ಕೆ.ಆರ್‌.ಪುರ ಕ್ಷೇತ್ರದಲ್ಲಿನ ರಾಜಕಾಲುವೆಗಳ ಅಭಿವೃದ್ಧಿ ಹಾಗೂ ಪುನರ್‌ ವಿನ್ಯಾಸ –₹35ಕೋಟಿ

* ಹೊರವರ್ತುಲ ರಸ್ತೆಯ ಹೊಸೆಕೆರೆಹಳ್ಳಿ ಜಂಕ್ಷನ್‌ ಬಳಿ ಗ್ರೇಡ್‌ ಸಪರೇಟರ್‌ ನಿರ್ಮಾಣ –₹30ಕೋಟಿ

* ಭದ್ರಪ್ಪ ಲೇಔಟ್‌, ಲೊಟ್ಟೆಗೊಲ್ಲಹಳ್ಳಿ ದೇವಿನಗರ ಬಸ್‌ ನಿಲ್ದಾಣ, ಲಗ್ಗೆರೆ ಸೇತುವೆ ಬಸ್‌ ನಿಲ್ದಾಣ, ಸುಮನಹಳ್ಳಿ ಜಂಕ್ಷನ್‌, ಜಾಲಹಳ್ಳಿ ಕ್ರಾಸ್‌, ಮಾಗಡಿ ರಸ್ತೆ ಹೌಸಿಂಗ್‌ ಬೋರ್ಡ್‌ ಬಳಿ, ಹರಿಶ್ಚಂದ್ರ ಘಾಟ್ ಬಳಿ ಸ್ಕೈವಾಕ್‌ಗಳ ನಿರ್ಮಾಣ – ₹27.45ಕೋಟಿ

* ಐಟಿಪಿಎಲ್‌ಗೆ ಸಂಪರ್ಕ ಕಲ್ಪಿಸುವ 14 ಪರ್ಯಾಯ ರಸ್ತೆಗಳ ಸಮಗ್ರ ಅಭಿವೃದ್ಧಿ – ₹20ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.