ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ರೂಪಿಸಿದ್ದ ವಿಶೇಷ ನೇಮಕಾತಿ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಬೇಕು ಎಂದು ಅಭ್ಯರ್ಥಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಈ ವಿಶೇಷ ನೇಮಕಾತಿ ಸುಮಾರು 2008ರಿಂದ ಸ್ಥಗಿತಗೊಂಡಿದೆ. ಇದರಿಂದಾಗಿ ಸರ್ಕಾರ ನೀಡಿರುವ ಸೌಲಭ್ಯವನ್ನು ಅರ್ಹ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳು ಪಡೆಯದೆ ವಂಚಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕ ನಾಗರಿಕ ಸೇವೆಗಳು (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ) ಅಭ್ಯರ್ಥಿಗಳಿಗೆ ಕೆಲವು ‘ಗ್ರೂಪ್ ಎ’ ಮತ್ತು ‘ಗ್ರೂಪ್ ಬಿ’ ಹುದ್ದೆಗಳಿಗೆ ವಿಶೇಷ ನೇಮಕಾತಿ ನಿಯಮಾವಳಿಗಳು–1985ರ ಅನ್ವಯ ಈ ನೇಮಕಾತಿಯನ್ನು ಕೈಗೊಳ್ಳಲಾಗುತ್ತಿತ್ತು.
ಈ ಸೌಲಭ್ಯದಿಂದ ವಿಶ್ವವಿದ್ಯಾಲಯಗಳಲ್ಲಿ ರ‍್ಯಾಂಕ್ ಪಡೆದ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕವೇ ಈ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು. 2008ರ ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಈ ಬಗ್ಗೆ ಗಮನಹರಿಸಿಲ್ಲ ಎಂದು ದೂರಿದ್ದಾರೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರಾಜ್ಯ ಸರ್ಕಾರದಿಂದ ನಾಮನಿರ್ದೇಶನಗೊಳ್ಳುವ ಕುಲಪತಿ ಮತ್ತು ಶಿಕ್ಷಣ ತಜ್ಞರನ್ನು ಒಳಗೊಂಡ ಸಮಿತಿಯು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಕೈಗೊಳ್ಳಬೇಕು ಎಂದು ನಿಯಮಾವಳಿಗಳನ್ನು ಸೂಚಿಸಲಾಗಿತ್ತು. ಈ ಸಮಿತಿಯು ವಿಶ್ವವಿದ್ಯಾಲಯದಿಂದ ರ‍್ಯಾಂಕ್ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಪಡೆದು ಆಯ್ಕೆ ಪ್ರಕ್ರಿಯೆಗಳನ್ನು ಆರಂಭಿಸುವಂತೆ ನಿರ್ದೇಶನ ನೀಡಲಾಗಿತ್ತು. 1982–83ರಿಂದ ಈ ಪ್ರಕ್ರಿಯೆ ಕೈಗೊಳ್ಳಲಾಗುತ್ತಿತ್ತು. ಹೀಗಾಗಿ, ಈ ಪ್ರಕ್ರಿಯೆಯನ್ನು ಮತ್ತೊಮ್ಮೆ ಆರಂಭಿಸುವ ಮೂಲಕ ಪರಿಶಿಷ್ಟರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.