ADVERTISEMENT

‘ಕೃಷ್ಣೆ ಅಭಿವೃದ್ಧಿಗೆ ₹1ಲಕ್ಷ ಕೋಟಿ ಮೀಸಲಿಡಿ’

ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 21:27 IST
Last Updated 8 ಮಾರ್ಚ್ 2020, 21:27 IST
ಮಹಾಸಂಸ್ಥೆಯ ಬೇಡಿಕೆಗಳ ಪತ್ರವನ್ನು ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಲಾಯಿತು. ಮಹಾಸಂಸ್ಥೆಯ ಕಾರ್ಯದರ್ಶಿ ಭಾಗ್ಯರಾಜ್‌ ಸೊನ್ನದ, ಅಧ್ಯಕ್ಷ ಶಿವಕುಮಾರ್‌ ಆರ್‌.ಮೇಟಿ, ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಡಿಎಸ್‌ ಮ್ಯಾಕ್ಸ್‌ ನಿರ್ದೇಶಕ ದಯಾನಂದ ಪಟ್ಟಣಶೆಟ್ಟಿ ಇದ್ದಾರೆ -–-ಪ್ರಜಾವಾಣಿ ಚಿತ್ರ
ಮಹಾಸಂಸ್ಥೆಯ ಬೇಡಿಕೆಗಳ ಪತ್ರವನ್ನು ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಲಾಯಿತು. ಮಹಾಸಂಸ್ಥೆಯ ಕಾರ್ಯದರ್ಶಿ ಭಾಗ್ಯರಾಜ್‌ ಸೊನ್ನದ, ಅಧ್ಯಕ್ಷ ಶಿವಕುಮಾರ್‌ ಆರ್‌.ಮೇಟಿ, ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಡಿಎಸ್‌ ಮ್ಯಾಕ್ಸ್‌ ನಿರ್ದೇಶಕ ದಯಾನಂದ ಪಟ್ಟಣಶೆಟ್ಟಿ ಇದ್ದಾರೆ -–-ಪ್ರಜಾವಾಣಿ ಚಿತ್ರ   

ಬೆಂಗಳೂರು: ಗಾಂಧಿ ಟೋಪಿ, ಜುಬ್ಬಾ ಧರಿಸಿ ಓಡಾಡುತ್ತಿದ್ದ ಪುರುಷರು, ಇಳಕಲ್‌ ಸೀರೆಯುಟ್ಟು ಓಡಾಡುತ್ತಾ ಕಾರ್ಯಕ್ರಮದ ಸೊಗಸು ಹೆಚ್ಚಿಸಿದ್ದ ಮಹಿಳೆಯರು, ಕಿವಿಗಳಿಗೆ ತಂಪೆರೆದ ವಚನ–ಜಾನಪದ ಗಾಯನ, ಹೊಟ್ಟೆ ತುಂಬಿಸಿದಹುಗ್ಗಿ, ಜೋಳದ ರೊಟ್ಟಿ, ಬದನೆಕಾಯಿ, ಕಾಳಿನ ಪಲ್ಯದ ಊಟ...

ನಗರದಲ್ಲಿ ಭಾನುವಾರ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ಉದ್ಘಾಟನಾ ಕಾರ್ಯಕ್ರಮದ ನೋಟವಿದು. ಬಯಲು ಸೀಮೆಯ ಸಂಸ್ಕೃತಿ, ಸಂಸ್ಕಾರಗಳನ್ನು ಪ್ರತಿಬಿಂಬಿಸುವುದರ ಜತೆಗೆ, ಸಂಘಟನೆಗಳ ಬಲ ಹೆಚ್ಚಿಸುವ ಕೆಲಸ ಈ ಕಾರ್ಯಕ್ರಮದಲ್ಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿ, ‘ಉತ್ತರ ಕರ್ನಾಟಕದ ಜೀವನದಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಸರ್ಕಾರ ₹1ಲಕ್ಷ ಕೋಟಿ ಮೀಸಲಿಡಬೇಕು. ಉತ್ತರ ಕರ್ನಾಟಕದ ಜನರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಬೇಕು’ ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ADVERTISEMENT

‘ಮಹಾರಾಷ್ಟ್ರದ ವಿದರ್ಭದ ಜನ ಕೆಲಸಕ್ಕಾಗಿ ಮುಂಬೈಗೆ ಹೋಗುತ್ತಾರೆ. ಅವರ ಅನುಕೂಲಕ್ಕಾಗಿ ಅಲ್ಲಿನ ಸರ್ಕಾರ ‘‘ಶ್ರಮ ಬೋರ್ಡ್‌’’ ಸ್ಥಾಪಿಸಿ, ಉಚಿತ ವಸತಿ ಹಾಗೂ ಕಡಿಮೆ ದರದಲ್ಲಿ ಊಟದ ವ್ಯವಸ್ಥೆ ಮಾಡುತ್ತಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುವ ಉತ್ತರ ಕರ್ನಾಟಕ ಭಾಗದ ನೌಕರರು ಮತ್ತು ಕಾರ್ಮಿಕರಿಗಾಗಿ ಇದೇ ಮಾದರಿಯಲ್ಲಿ ಪ್ರತ್ಯೇಕ ಭವನ ನಿರ್ಮಾಣ ಮಾಡಬೇಕು’ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಾಕಷ್ಟುಅನುದಾನ ಬಿಡುಗಡೆ ಮಾಡಿದ್ದಾರೆ. ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಗೆ ಈ ಬಜೆಟ್‌ನಲ್ಲಿ ₹10 ಸಾವಿರ ಕೋಟಿ ಬಿಡುಗಡೆ ಮಾಡಿದ್ದಾರೆ’ ಎಂದರು.

‘ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದವರಿಗೆ ಭವನ ನಿರ್ಮಾಣಕ್ಕಾಗಿ ನಿವೇಶನ ಮತ್ತು ಅನುದಾನ ನೀಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡುತ್ತೇನೆ’ ಎಂದು ಅವರು ಭರವಸೆ ನೀಡಿದರು.

ಜನಪ್ರತಿನಿಧಿಗಳ ಗೈರು: ಬೇಸರ
ರಾಜ್ಯದಲ್ಲಿ ಉತ್ತರ ಕರ್ನಾಟಕದ 100ಕ್ಕೂ ಹೆಚ್ಚು ಶಾಸಕರಿದ್ದರೂ, ಬಸವರಾಜ ಬೊಮ್ಮಾಯಿ ಹೊರತು ಪಡಿಸಿ ಉಳಿದವರು ಕಾರ್ಯಕ್ರಮಕ್ಕೆ ಬಾರದಿದ್ದುದಕ್ಕೆ ಸಂಘಟಕರು ಅಸಮಾಧಾನ ವ್ಯಕ್ತಪಡಿಸಿದರು.

ಮಹಾಸಂಸ್ಥೆಯ ಗೌರವಾಧ್ಯಕ್ಷ ಶಂಕರ ಬಿದರಿ, ‘ಕಾರ್ಯಕ್ರಮಕ್ಕೆ ಹಾಜರಾಗುವ ಜನಪ್ರತಿನಿಧಿಗಳ ಹೆಸರನ್ನು ಮಾತ್ರ ಇನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ. ಉತ್ತರ ಕರ್ನಾಟಕದವರು ಯಾರ ಮರ್ಜಿಗೂ ಕಾಯಬೇಕಾಗಿಲ್ಲ. ನಮ್ಮ ಅಗತ್ಯ ಅವರಿಗಿದೆ (ಜನಪ್ರತಿನಿಧಿಗಳು). ಅವರ ಅಗತ್ಯ ನಮಗಿಲ್ಲ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

*
ಪ್ರತ್ಯೇಕ ರಾಜ್ಯ ಬೇಡಿಕೆಗೆ ನಮ್ಮ ಸಹಮತವಿಲ್ಲ. ಈ ಭಾಗ ಅಭಿವೃದ್ಧಿಯಾಗಿಲ್ಲ ಎಂಬ ಕಾರಣಕ್ಕೆ ಕೆಲವರು ನೋವು ಮತ್ತು ಹತಾಶೆಯಿಂದ ಆ ಹೇಳಿಕೆ ನೀಡುತ್ತಾರೆ.
-ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.