ADVERTISEMENT

ವಚನ ಶ್ರಾವಣ ವರ್ಷಪೂರ್ತಿ ನಡೆಯಲಿ: ಬಲವಂತರಾವ್ ಪಾಟೀಲ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2022, 21:29 IST
Last Updated 30 ಆಗಸ್ಟ್ 2022, 21:29 IST
ವಚನಜ್ಯೋತಿ ಬಳಗ ಆಯೋಜಿಸಿದ್ದ ವಚನ ಶ್ರಾವಣ ಸಮಾರೋಪದಲ್ಲಿ ಮಹೇಶ್ ಬೆಲ್ಲದ ಶಾಲಾ ಶಿಕ್ಷಕರಿಗೆ ವಚನಾಮೃತ ಸವಿ ಪುಸ್ತಕಗಳ ಕಟ್ಟು ನೀಡಿದರು. ಬಳಗದ ಅಧ್ಯಕ್ಷ ಪಿನಾಕಪಾಣಿ, ಸಾಮಾಜಿಕ ಕಾರ್ಯಕರ್ತ ಮರಿಲಿಂಗನಗೌಡ ಇದ್ದಾರೆ
ವಚನಜ್ಯೋತಿ ಬಳಗ ಆಯೋಜಿಸಿದ್ದ ವಚನ ಶ್ರಾವಣ ಸಮಾರೋಪದಲ್ಲಿ ಮಹೇಶ್ ಬೆಲ್ಲದ ಶಾಲಾ ಶಿಕ್ಷಕರಿಗೆ ವಚನಾಮೃತ ಸವಿ ಪುಸ್ತಕಗಳ ಕಟ್ಟು ನೀಡಿದರು. ಬಳಗದ ಅಧ್ಯಕ್ಷ ಪಿನಾಕಪಾಣಿ, ಸಾಮಾಜಿಕ ಕಾರ್ಯಕರ್ತ ಮರಿಲಿಂಗನಗೌಡ ಇದ್ದಾರೆ   

ಬೆಂಗಳೂರು: ‘ನಿತ್ಯ ನೂತನವಾದ ವಚನಗಳ ಶ್ರಾವಣ ವರುಷವಿಡಿ ನಡೆಯಲಿ’ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ ಹೇಳಿದರು.

ಹಂಪಿನಗರ ಗ್ರಂಥಾಂಗಣದಲ್ಲಿ ವಚನ ಶ್ರಾವಣ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಮಲೀನವಾಗುತ್ತಿರುವ ಇಂದಿನ ಸಮಾಜಕ್ಕೆ ಆರೋಗ್ಯಕರ ವಚನಗಳನ್ನು ಉಣಬಡಿಸಿ ನೈತಿಕ ಮೌಲ್ಯಗಳನ್ನು, ಬದುಕಿನ ಸೂತ್ರಗಳನ್ನು ನೀಡುತ್ತಿರುವ ವಚನಜ್ಯೋತಿ ಬಳಗದ ಕಾರ್ಯ ಸ್ತುತಾರ್ಹ್ಯ. ಶಾಲೆಗಳಲ್ಲಿ, ಆಸಕ್ತರ ಮನೆಯಂಗಳದಲ್ಲಿ ನಡೆದ ವಚನ ಶ್ರಾವಣದ ಅವಶ್ಯಕತೆ ಇಂದು‌ ಬಹು ಅಗತ್ಯವಿದ್ದು, ಸಂಸ್ಕೃತಿಯ ಸಿಂಚನವಾಗಬೇಕು’ ಎಂದು ಹೇಳಿದರು.

ADVERTISEMENT

ಕಂದಾಯ‌ ಇಲಾಖೆಯ ಉಪ ಕಾರ್ಯದರ್ಶಿ ಜಯಲಕ್ಷಿ ಆನಂದ್ ಮಾತನಾಡಿ, ‘ವಚನಗಳು ಬದುಕಿಗೆ ಮಾರ್ಗದರ್ಶಕವಾದವು, ಮನಸ್ಸಿಗೆ ಸಾಂತ್ವಾನವನ್ನು ನೀಡುವಂಥವು. ಹಸಿಗೋಡೆಯಂತ ಮಕ್ಕಳ‌ ಮನಸ್ಸಿಗೆ ವಚನಗಳನ್ನು ತಲುಪಿಸುತ್ತಿರುವ ವಚನಜ್ಯೋತಿ ಬಳಗದ ಕಾರ್ಯ ಎಲ್ಲರಿಗೂ ಮಾದರಿ’ ಎಂದು ಬಣ್ಣಿಸಿದರು.

ಮಕ್ಕಳ ವಚನ ಮೇಳ: ಬಳಗದ ಅಧ್ಯಕ್ಷ ಎಸ್‌. ಪಿನಾಕಪಾಣಿ ಮಾತನಾಡಿ, ‘ಡಿಸೆಂಬರ್‌ನಲ್ಲಿ ರವೀಂದ್ರ‌ ಕಲಾಕ್ಷೇತ್ರದಲ್ಲಿ ಮೂರು ದಿನಗಳ‌ ಮಕ್ಕಳ ವಚನ ಮೇಳ ನಡೆಸಲಾಗುವುದು’ ಎಂದರು.

ಪಂಡಿತ ದೇವೇಂದ್ರಕುಮಾರ ಪತ್ತಾರ್, ಪಂಡಿತ ರವೀಂದ್ರ ಸೊರಗಾವಿ, ಸಿದ್ದರಾಮ ಕೇಸಾಪುರ, ಹಿಂದೂಸ್ಥಾನಿ ಗಾಯಕರಾದ ಸರಸ್ವತಿ ಹೆಗಡೆ, ಮೀನಾಕ್ಷಿ ಮೇಟಿ, ಈರಯ್ಯ ಚಿಕ್ಕಮಠ್, ದೇವಿಕ ಚೇತನ್, ಕರ್ನಾಟಕ ಸಂಗೀತದ ವೀಣಾಮೂರ್ತಿ, ಸುಷ್ಮಾ ಸಂತೋಷ್, ಜನಪದ ಗಾಯಕಿ ಟಿ.ಎಂ. ಜಾನಕಿ, ಬಾಲ ಪ್ರತಿಭೆಗಳಾದ ಪೂರ್ಣಿಕ ಆರಾಧ್ಯ, ಶ್ರಾವಣಿ ಹಣ್ಣಿ, ಸುರಭಿ ಹಣ್ಣಿ ವಚನ ಸಂಗೀತ ಹರಿಸಿದರು. ಆರ್.ಇ.ಎಸ್. ಹೈಸ್ಕೂಲಿನ‌ ಮಕ್ಕಳು ವಚನ ಸಂವಾದ ನಡೆಸಿಕೊಟ್ಟರು. ಕಲ್ಯಾಣ್ ಲೇಔಟಿನ ವಚನ ಕಲಿಕಾ ತರಗತಿಯ ವಿದ್ಯಾರ್ಥಿಗಳು ಸಮೂಹ ವಚನ ಗಾಯನ ಮಾಡಿದರು.

60 ವಸಂತಗಳನ್ನು ಪೂರೈಸಿದ ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಬಿ.ಎಸ್. ಶಿವಪ್ರಕಾಶ್ - ಜಿ.ಎಸ್. ಕಾತ್ಯಾಯಿನಿ ದಂಪತಿಗಳಿಗೆ ವಚನ ಷಷ್ಟಿ ಹಾರೈಕೆಯನ್ನು ಸಲ್ಲಿಸಲಾಯಿತು. ವಚನಜ್ಯೋತಿ ಬಳಗದ ಗೌರವಾಧ್ಯಕ್ಷ ಮಹೇಶ್ ಬೆಲ್ಲದ್ ಸಮಾರೋಪದ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.