ಬೆಂಗಳೂರು: ‘ಕನ್ನಡ ಸಾಹಿತ್ಯದಲ್ಲಿ ವೈದೇಹಿ ಅವರು ಅಕ್ಕು ಪಾತ್ರದ ಮೂಲಕ ಮಹಿಳೆಯರ ತಾಳ್ಮೆ, ಅವರೊಳಗಿನ ಪ್ರತಿಭಟಿಸುವ ಶಕ್ತಿಯನ್ನು ಸಾಹಿತ್ಯದ ಮೂಲಕ ಅನಾವರಣಗೊಳಿಸಿ ಸ್ತ್ರೀವಾದಕ್ಕೆ ಹೊಸ ಆಯಾಮ ನೀಡಿದ್ದಾರೆ’ ಎಂದು ವಿಮರ್ಶಕ ಸಿ.ಎನ್. ರಾಮಚಂದ್ರನ್ ಹೇಳಿದರು.
ಕರ್ನಾಟಕ ಲೇಖಕಿಯರ ಸಂಘ ಮತ್ತು ವಸಂತ ಪ್ರಕಾಶನ ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಬುಧವಾರ ಆಯೋಜಿಸಿದ್ದ ‘ವೈದೇಹಿ ಅವರಿಗೆ ಅಭಿನಂದನಾ ಸಮಾರಂಭ’ ಹಾಗೂ ಲಲಿತಮ್ಮ ಚಂದ್ರಶೇಖರ ಅವರ ‘ನೆನಪಿನ ಉಗ್ರಾಣ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ವೈದೇಹಿ ಅವರಿಗೆ ಲಲಿತಮ್ಮನವರು ಬರೆದಿರುವ ಪತ್ರಗಳನ್ನೇ ಆಧರಿಸಿದ ಕೃತಿ ಇದು. ಈಗ ಲಲಿತಮ್ಮ ಅವರಿಗೆ 91 ವರ್ಷ ವಯಸ್ಸು.
‘ವೈದೇಹಿ ಅವರು ಹೆಣ್ಣಿನಲ್ಲಿ ಹುದುಗಿರುವ ಬಗೆ ಬಗೆಯ ಶಕ್ತಿಗಳನ್ನು ತಮ್ಮ ಕಥೆ, ಕಾದಂಬರಿಗಳಲ್ಲಿ ಅನಾವರಣಗೊಳಿಸಿದ್ದಾರೆ. ಲೇಖಕಿ ಲಲಿತಮ್ಮ ಅವರು ಸಮಾಜವನ್ನು ಅಂತಃಕರಣದ ಮೂಲಕ ನೋಡುತ್ತಿದ್ದರು. 50–60 ವರ್ಷಗಳ ಹಿಂದೆ ಮಹಿಳಾ ಸ್ವಾವಲಂಬನೆಯ ಕುರಿತು ಸ್ಪಷ್ಟತೆ ಹೊಂದಿದ್ದರು. ವ್ಯಕ್ತಿಕೇಂದ್ರಿತವಾಗಿರುವ ಸಮಾಜದಲ್ಲಿ ಅಂತಃಕರಣದಿಂದ ಎಲ್ಲರ ಕಷ್ಟಕ್ಕೆ ಸ್ಪಂದಿಸುತ್ತಾರೆ’ ಎಂದು ಸಿ.ಎನ್. ರಾಮಚಂದ್ರನ್ ವಿಶ್ಲೇಷಿಸಿದರು.
ವಿಮರ್ಶಕಿ ಎಂ.ಎಸ್. ಆಶಾದೇವಿ ಮಾತನಾಡಿ, ‘ವೈದೇಹಿ ಅವರು ಹೆಣ್ಣಿನ ಅರಿವಿನ ದಾರಿಯನ್ನು ತೆರೆಯುತ್ತಿರುವಂತೆ ಕಂಡರು. ಹೆಣ್ಣಿನ ಎಲ್ಲಾ ಪ್ರಯತ್ನಗಳನ್ನು ನಾವು ಪರಿವರ್ತನಾ ಸ್ವರೂಪದಲ್ಲಿ ನೋಡಬೇಕಾಗುತ್ತದೆ. ಗಂಡು ಮತ್ತು ಹೆಣ್ಣು ಇಬ್ಬರ ಜ್ಞಾನವನ್ನು ಅವರು ಹೆಚ್ಚಿಸಿದ್ದಾರೆ. ಕೋಮುವಾದದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಸಹಜವಾಗಿ ಸೌಹಾರ್ದವನ್ನು ಕಲಿಸಿದವರು ಲಲಿತಮ್ಮ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
‘ಕತ್ತಿಗಿಂತ ಲೇಖನಿ ಹರಿತವಾದುದು. ನನಗಿನ್ನೂ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿಲ್ಲ. ಲೇಖನಗಳನ್ನು ಬರೆ
ಯುವುದಕ್ಕೆ ವಸ್ತು ವಿಷಯಗಳ ಕೊರತೆ ಇಲ್ಲ. ಹೆಣ್ಣುಮಕ್ಕಳು ಮನೆಯಲ್ಲಿ ನಡೆ
ಯುವ ಪ್ರಸಂಗಗಳು, ಮಕ್ಕಳ ಬಗ್ಗೆ ಹೆಚ್ಚು ಹೆಚ್ಚು ಸಾಹಿತ್ಯ ರಚಿಸಬೇಕು’ ಎಂದು ಲೇಖಕಿ ಲಲಿತಮ್ಮ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಲಲಿತಮ್ಮ ಹಾಗೂ ವೈದೇಹಿ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ಮಾತನಾಡಿದರು. ‘ಸುಧಾ’ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ. ಪುಸ್ತಕದ ಕುರಿತು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.