ಬೆಂಗಳೂರು: ವೈಕುಂಠ ಏಕಾದಶಿ ನಿಮಿತ್ತ ನಗರದ ದೇಗುಲಗಳು ಶುಕ್ರವಾರ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದ್ದವು. ವೈಕುಂಠ ಏಕಾದಶಿ ಜೊತೆಗೆ, ಗೀತಾ ಜಯಂತಿಯೂ ಇದ್ದುದರಿಂದ ದೇಗುಲಗಳಲ್ಲಿ ಸಂಭ್ರಮ ಜೋರಾಗಿತ್ತು.
ಹಿಂದಿನ ಬಾರಿಯಷ್ಟಲ್ಲದಿದ್ದರೂ, ಈ ವರ್ಷವೂ ಕೆಲವು ದೇಗುಲಗಳಲ್ಲಿ ಭಕ್ತರ ಸಂಖ್ಯೆ ಕಡಿಮೆಯೇನೂ ಇರಲಿಲ್ಲ. ಕೋವಿಡ್ ಮಾರ್ಗಸೂಚಿಯನ್ವಯ ಅಂತರ ಕಾಪಾಡಲು ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಸಾಮಾನ್ಯರಿಗೆ, ಹಿರಿಯ ನಾಗರಿಕರಿಗೆ, ಗಣ್ಯರು, ಅತಿ ಗಣ್ಯರಿಗೆ ಪ್ರತ್ಯೇಕ ಸಾಲುಗಳನ್ನು ಮಾಡಿ, ಅಂತರ ಕಾಪಾಡಿಕೊಳ್ಳಲಾಗಿತ್ತು. ನಗರದ ವೆಂಕಟೇಶ್ವರ ಮತ್ತು ವಿಷ್ಣು ದೇವಾಲಯಗಳಲ್ಲಿ ಭಕ್ತರು ಸಾಲುಗಟ್ಟಿ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಇಸ್ಕಾನ್, ಕೋಟೆ ವೆಂಕಟರಮಣಸ್ವಾಮಿ, ಜೆ.ಪಿ. ನಗರದ ತಿರುಮಲಗಿರಿ ದೇವಸ್ಥಾನ ಸೇರಿದಂತೆ ಕೆಲವು ದೊಡ್ಡ ದೇಗುಲಗಳಲ್ಲಿ ಈ ಬಾರಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಹೀಗಾಗಿ ಇತರೆ ಬಡಾವಣೆಗಳ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಏರ್ಪಡಿಸಲಾಗಿತ್ತು. ಆದರೆ ಸ್ಯಾನಿಟೈಸರ್ ವ್ಯವಸ್ಥೆ, ದೇಹದ ಉಷ್ಣಾಂಶ ಪರೀಕ್ಷಿಸುವ ವ್ಯವಸ್ಥೆ ಎಲ್ಲ ದೇವಾಲಯಗಳಲ್ಲಿ ಕಂಡುಬರಲಿಲ್ಲ.
ಕೆಲವು ದೇವಾಲಯಗಳಲ್ಲಿ ರಾಜಕೀಯ ಪಕ್ಷದವರು ತಮ್ಮದೇ ಪಕ್ಷದ ಚಿಹ್ನೆ ಹಾಗೂ ಆ ಕ್ಷೇತ್ರದ ರಾಜಕಾರಣಿಗಳ ಭಾವಚಿತ್ರವುಳ್ಳ ಕವರ್ ಗಳಲ್ಲಿ ಲಡ್ಡುಗಳನ್ನು ಪ್ರಸಾದವಾಗಿ ಮತ್ತು ಹೊಸ ವರ್ಷದ ಕ್ಯಾಲೆಂಡರ್ ಗಳನ್ನು ಭಕ್ತರಿಗೆ ವಿತರಿಸಿದರು.
ಧನುರ್ಮಾಸದಲ್ಲಿ ಬರುವ ಈ ಏಕಾದಶಿಯು ವಿಷ್ಣುವು ಯೋಗ ನಿದ್ರೆಯಿಂದ ಎಚ್ಚರಗೊಳ್ಳುವ ದಿನ ಎಂದು ಉಲ್ಲೇಖ ಇದೆ. ದಕ್ಷಿಣ ಭಾರತದಲ್ಲಿ ವೈಕುಂಠ ಏಕಾದಶಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಅದರಂತೆ, ವಿಷ್ಣುವಿನ ದೇಗುಲಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆದವು. ವಿಷ್ಣು ಅಥವಾ ವೆಂಕಟೇಶ್ವರ ದೇವಾಲಯಗಳಲ್ಲಿ ವೈಕುಂಠ ದ್ವಾರ ನಿರ್ಮಿಸಿ, ಆ ಮೂಲಕ ಶ್ರೀಮನ್ನಾರಾಯಣ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಗಣ್ಯರ ಭೇಟಿ:ಇಸ್ಕಾನ್ ದೇವಾಲಯ ಪ್ರವೇಶಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿರಲಿಲ್ಲ. ಆದರೆ ವಿಶೇಷ ಪೂಜೆ ನೆರವೇರಿಸಿ, ವೈಕುಂಠ ದ್ವಾರ ನಿರ್ಮಿಸಲಾಗಿತ್ತು. ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ , ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮತ್ತಿತರರು ಇಸ್ಕಾನ್ ಗೆ ಭೇಟಿ ನೀಡಿದ್ದರು.
ರಾಜಾಜಿನಗರದ ಕೈಲಾಸ ವೈಕುಂಠ ಮಹಾಕ್ಷೇತ್ರಕ್ಕೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಹಾಲಕ್ಷ್ಮಿ ಬಡಾವಣೆಯ ವೆಂಕಟೇಶ್ವರ ದೇಗುಲಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭೇಟಿ ನೀಡಿ ದೇವರ ದರ್ಶನ ಪಡೆದರು.
ಟಿಟಿಡಿ ಆಕರ್ಷಣೆ
ನಗರದ ವೈಯಾಲಿಕಾವಲ್ ತಿರುಪತಿ ತಿರುಮಲ ದೇಗುಲ (ಟಿಟಿಡಿ) ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಆಚರಿಸಲಾಯಿತು. ವೈಕುಂಠ ದ್ವಾರದ ಮೂಲಕ ಸಾಗಿದ ಭಕ್ತರು, ದೇವರ ದರ್ಶನ ಮಾಡಿ ಕೃತಾರ್ಥರಾದರು. ಎಲ್ಲರಿಗೂ ಲಡ್ಡು ವಿತರಿಸಲಾಯಿತು.
ತಿರುಪತಿಯಂತೆ ಇಲ್ಲೂ ಕೂಡ 10 ದಿನಗಳ ವೈಕುಂಠ ದ್ವಾರ ತೆರೆದಿರಲು ತೀರ್ಮಾನಿಸಲಾಗಿದೆ. ಜ.3ರವರೆಗೆ ಭಕ್ತರಿಗೆ ದರ್ಶನ ಅವಕಾಶ ಇರಲಿದೆ. ಗರ್ಭಿಣಿಯರು, ಅಂಗವಿಕಲರು, ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಾಲು ಮಾಡಲಾಗಿದೆ. ಗಣ್ಯರು, ಅತಿಗಣ್ಯರಿಗೆ ವಿಶೇಷ ಪಾಸ್ ವಿತರಿಸಲಾಗಿದ್ದು, ಭದ್ರತೆಗೆ 15ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಬೆಳಿಗ್ಗೆ 6ರಿಂದ ರಾತ್ರಿ 10 ರವರೆಗೆ ದರ್ಶನಕ್ಕೆ ಅವಕಾಶವಿದೆ.
ನಡೆಯದ ಸಾಂಸ್ಕೃತಿಕ ಕಾರ್ಯಕ್ರಮ
ನೆಲಮಂಗಲ: ತಾಲ್ಲೂಕಿನಾದ್ಯಂತ ವೈಕುಂಠ ಏಕಾದಶಿ ಪ್ರಯುಕ್ತ ದೇವಾಲಯಗಳಲ್ಲಿ ವೈಕುಂಠ ದ್ವಾರ ನಿರ್ಮಿಸಿ ಭಕ್ತಿಯಿಂದ ಆಚರಿಸಲಾಯಿತು.
ದಾಸನಪುರದ ಉಭಯ ವೇದಾಂತ ವೈಷ್ಣವ ಸಭಾದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲಾಗಿತ್ತು. ಮಾಸ್ಕ್ ಕಡ್ಡಾಯ ಮಾಡಲಾಗಿತ್ತಲ್ಲದೆ, ದೇಹದ ಉಷ್ಣಾಂಶ ಪರೀಕ್ಷಿಸಿದ ನಂತರ ಭಕ್ತರನ್ನು ಒಳಗಡೆ ಬಿಡಲಾಗುತ್ತಿತ್ತು.
ಪ್ರತಿ ವರ್ಷದಂತೆ ನಡೆಯುತ್ತಿದ್ದ ವಿವಿಧ ವೈದಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿಲ್ಲ, ತೀರ್ಥ ಪ್ರಸಾದ ವಿತರಣೆಯೂ ಇರಲಿಲ್ಲ.
ಶ್ರೀನಿವಾಸನಿಗೆ ಸಪ್ತಾರತಿ
ಯಲಹಂಕ: ಉಪನಗರದ ಶ್ರೀನಿವಾಸ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ನಸುಕಿನ ಜಾವ 2ರಿಂದಲೇ ಸ್ವಾಮಿಗೆ ವಿಶೇಷ ಅಭಿಷೇಕ, ತೋಮಾಲ ಮತ್ತು ಅಲಂಕಾರ ಸೇವೆ, ಗೋದಾಸ್ತುತಿ ಆರಾಧನೆ ಮತ್ತು ಸಪ್ತಾರತಿ ಮಾಡಲಾಯಿತು. ಶ್ರೀನಿವಾಸ ದೇವರಿಗೆ ಮತ್ತು ಅಮ್ಮನವರಿಗೆ ವೈಕುಂಠದ್ವಾರ ತೆರೆಯುವುದು, ಪುಷ್ಪಾಂಜಲಿ ಅರ್ಪಣೆ, ಪ್ರಾಕಾರೋತ್ಸವ ಅರ್ಚನೆ, ದ್ವಾದಶ ಆರತಿ ಮತ್ತಿತರ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
25 ಸಾವಿರ ಲಡ್ಡು ವಿತರಣೆ
ರಾಜರಾಜೇಶ್ವರಿನಗರ: ವೆಂಕಟರಮಣಸ್ವಾಮಿಯ ವಿವಿಧ ದೇವಾಲಯಗಳಲ್ಲಿ ಬೆಳಗಿನ ಜಾವ ವಿವಿಧ ಪೂಜೆ, ಹೋಮ ನೆರವೇರಿಸಲಾಯಿತು.
ಕೆಂಗುಂಟೆಯ ಲಕ್ಷೀವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ 25 ಸಾವಿರ ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಲಾಯಿತು. ಮುದ್ದನಪಾಳ್ಯ ವೆಂಕಟೇಶ್ವರ ದೇವಾಲಯ, ಬೆಟ್ಟನಪಾಳ್ಯದ ಕಂಬದ ರಂಗನಾಥಸ್ವಾಮಿ, ಅರೇಹಳ್ಳಿಯ ಹನುಮಗಿರಿಯ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ವೆಂಕಟೇಶ್ವರಸ್ವಾಮಿಗೆ ಕಿರೀಟಧಾರಣೆ
ಕೆ.ಆರ್.ಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಕೋಟೆ ವೆಂಕಟರಮಣಸ್ವಾಮಿ, ಶ್ರೀಕಾಶಿವಿಶ್ವೇಶ್ವರಸ್ವಾಮಿ, ದೇವರ ಸನ್ನಿಧಿಯಲ್ಲಿ ಶುಕ್ರವಾರ ಮುಂಜಾನೆಯಿಂದಲೇ ದೇವರಿಗೆ ಹಾಲು, ತುಪ್ಪ ಹಣ್ಣಿನ ಅಭಿಷೇಕ ಕವಚಧಾರಣಿ, ರುದ್ರಾಭಿಷೇಕ ನೆರವೇರಿಸಲಾಯಿತು. ವಿವಿಧ ಬಗೆಯ ಪುಪ್ಪ ಅಲಂಕಾರ ಹಾಗೂ ಕಿರೀಟಧಾರಣೆ ಬಳಿಕ ವಿಶೇಷ ಪೂಜೆ ಜರುಗಿತು.
ಕೆ.ಆರ್.ಪುರದ ಸುತ್ತಮುತ್ತಲಿನ ದೇವಸಂದ್ರ, ರಾಮಮೂರ್ತಿನಗರ, ಕಲ್ಕೆರೆ, ಬಸವನಪುರ, ವಿಜಿನಾಪುರ, ಚನ್ನಸಂದ್ರ, ನಾರಾಯಣಪುರ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.