ಯಲಹಂಕ:‘ಯಲಹಂಕದಲ್ಲಿ ವಾಲ್ಮೀಕಿ ಭವನ ಮತ್ತು ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು’ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ವತಿಯಿಂದ ಅಟ್ಟೂರು ಗ್ರಾಮದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
‘ವಾಲ್ಮೀಕಿ ಅವರು ಐದು ಸಾವಿರ ವರ್ಷಗಳ ಹಿಂದೆಯೇ ‘ರಾಮಾಯಣ’ ಕೃತಿಯ ಮೂಲಕ ವಿಶ್ವಕ್ಕೆ ಪರಿಚಯಿಸಿದ ಮಹಾನ್ ವ್ಯಕ್ತಿ. ಅವರು ನಮ್ಮ ದೇಶದ ಸಂಸ್ಕೃತಿ ಮತ್ತು ಭವ್ಯತೆಯನ್ನು ಸಾರುವ ಮೂಲಕ ಭರತ ಖಂಡಕ್ಕೆ ನೀಡಿರುವ ಕೊಡುಗೆ ಸಾವಿರಾರು ವರ್ಷಗಳವರೆಗೆ ಜೀವಂತವಾಗಿ ಉಳಿಯಲಿದೆ. ಇಂತಹ ವ್ಯಕ್ತಿಯ ಆದರ್ಶಗಳನ್ನು ನಾವೆಲ್ಲ ಪಾಲಿಸಬೇಕು’ ಎಂದರು.
ವಿವಿಧ ಕಲಾ ತಂಡಗಳ ಸಮೇತಅಟ್ಟೂರು ಗ್ರಾಮದಿಂದ ಯಲಹಂಕ-ಯಶವಂತಪುರ ಮುಖ್ಯ ರಸ್ತೆಯವರೆಗೆ ವಾಲ್ಮೀಕಿ ಮಹರ್ಷಿ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು.ಕರ್ನಾಟಕ ಮದಕರಿ ನಾಯಕ ಸೇನೆಯ ಅಟ್ಟೂರು ಶಾಖೆಯನ್ನು ಕಾರ್ಯಕ್ರಮದಲ್ಲಿ ಉದ್ಘಾಟಿಸಲಾಯಿತು.
ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಕೆಂಪರಾಮಯ್ಯ, ಕಾರ್ಯದರ್ಶಿ ಸಣ್ಣನಾಯಕ, ಮುಖಂಡರಾದ ಎಂ.ಸತೀಶ್,ಸಿಂಗಾಪುರ ವೆಂಕಟೇಶ್, ಎ.ಸಿ.ಮುನಿಕೃಷ್ಣಪ್ಪ, ಚಂದ್ರು, ನಾರಾಯಣ್ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.