ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣದ ತನಿಖೆಯನ್ನು ವಿಶೇಷ ತನಿಖಾ ದಳದ (ಎಸ್ಐಟಿ) ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಪ್ರಕರಣದಲ್ಲಿ 100ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
‘ಪ್ರಕರಣದಲ್ಲಿ ಈವರೆಗೆ ಆರೋಪಿಗಳಿಂದ ನಗದು, ಚಿನ್ನಾಭರಣ ಸೇರಿ ಒಟ್ಟು ₹28 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಆರೋಪಿಗಳು ಹಣ ಹಾಕಿದ್ದ 197 ಖಾತೆಗಳನ್ನು ಪತ್ತೆ ಮಾಡಲಾಗಿದೆ. ಅದರಲ್ಲಿ ಬಾರ್ ಮಾಲೀಕರು, ಚಿನ್ನಾಭರಣ ಅಂಗಡಿ ಹಾಗೂ ಹೋಟೆಲ್ ಮಾಲೀಕರು, ಕಾರ್ಮಿಕರು ಸೇರಿ 100 ಮಂದಿ ವಿಚಾರಣೆ ನಡೆಸಿ ಮಾಹಿತಿ ಪಡೆಯಲಾಗಿದೆ. ಕೆಲವರು ಕಮಿಷನ್ ಪಡೆದು ತಮ್ಮ ಖಾತೆಯಿಂದ ಹಣ ಡ್ರಾ ಮಾಡಿಕೊಟ್ಟಿರುವುದು ಗೊತ್ತಾಗಿದೆ. ಕಮಿಷನ್ ಪಡೆದವರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಹೈದರಾಬಾದ್‌ನ ‘ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ– ಆಪರೇಟಿವ್ ಸೊಸೈಟಿ’ಯ (ಎಫ್‌ಎಫ್‌ಸಿಸಿಎಸ್‌ಎಲ್) ವಿವಿಧ ಖಾತೆಗಳಿಗೆ ವಾಲ್ಮೀಕಿ ನಿಗಮದ ಖಾತೆಯಿಂದ ₹94.73 ಕೋಟಿ ಹಣ ವರ್ಗಾವಣೆ ಆಗಿತ್ತು. ಆ ಹಣವನ್ನು ಆರೋಪಿಗಳು ಆನ್‌ಲೈನ್ ಮೂಲಕ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಹೈದರಾಬಾದ್, ಬೆಂಗಳೂರು ಹಾಗೂ ಮಂಗಳೂರು ಸೇರಿ ರಾಜ್ಯದ ವಿವಿಧೆಡೆ ಆರೋಪಿಗಳು ಹವಾಲಾ ಮೂಲಕ ಹಣವನ್ನು ನಗದು ಮಾಡಿಕೊಂಡಿದ್ದಾರೆ ಎಂದು ತನಿಖೆಯಿಂದ ಗೊತ್ತಾಗಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
‘ಹವಾಲಾ ದಂಧೆ ನಡೆಸುತ್ತಿದ್ದ ಕಾರ್ತಿ ಶ್ರೀನಿವಾಸ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಅವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ. ಬೆಂಗಳೂರಿನ ತೇಜ ತಮ್ಮಯ್ಯ, ಹೈದರಾಬಾದ್‌ನ ಚಂದ್ರಮೋಹನ್, ಶ್ರೀನಿವಾಸ್ ಹಾಗೂ ಜಗದೀಶ್ ವಿಚಾರಣೆ ವೇಳೆ ಈ ಹವಾಲಾ ಮಾರ್ಗದಲ್ಲಿ ಹಣ ನಗದು ಮಾಡಿಕೊಂಡಿರುವುದು ಪತ್ತೆಯಾಗಿದೆ. ಅಕ್ರಮಕ್ಕೆ ಸಹಕಾರ ನೀಡಿದ್ದವರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ತನಿಖಾಧಿಕಾರಿ ಒಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.