ADVERTISEMENT

ವಾಲ್ಮೀಕಿ ನಿಗಮದ ಹಗರಣ: 6 ಕೆ.ಜಿ ಚಿನ್ನ, ₹2.50 ಕೋಟಿ ನಗದು ಜಪ್ತಿ

ಹೈದರಾಬಾದ್‌ನಲ್ಲಿ ಎಸ್‌ಐಟಿ ಕಾರ್ಯಾಚರಣೆ ತೀವ್ರ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 23:30 IST
Last Updated 27 ಜುಲೈ 2024, 23:30 IST
ಸತ್ಯನಾರಾಯಣ ವರ್ಮಾ 
ಸತ್ಯನಾರಾಯಣ ವರ್ಮಾ    

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಿಂದ ಬಂದ ಹಣದಲ್ಲಿ ಖರೀದಿಸಿದ್ದ ಚಿನ್ನ ಜಪ್ತಿ ಕಾರ್ಯಾಚರಣೆ ಮುಂದುವರೆಸಿರುವ ವಿಶೇಷ ತನಿಖಾ ದಳದ(ಎಸ್ಐಟಿ) ಪೊಲೀಸರು, ಶನಿವಾರ ಹೈದರಾಬಾದ್‌ನ ಎರಡು ಸ್ಥಳಗಳ ಮೇಲೆ ದಾಳಿ ನಡೆಸಿ ಮತ್ತೆ 6 ಕೆ.ಜಿ ಚಿನ್ನದ ಬಿಸ್ಕತ್‌ ಹಾಗೂ ಚಿನ್ನದಗಟ್ಟಿ ಜಪ್ತಿ ಮಾಡಿದ್ದಾರೆ. ಅಲ್ಲದೇ ಬಿಲ್ಡರ್‌ರೊಬ್ಬರಿಂದ ₹2.50 ಕೋಟಿ ನಗದು ವಶಕ್ಕೆ ಪಡೆದಿದ್ದಾರೆ.  

ಆರೋಪಿಗಳ ಮನೆ– ಕಚೇರಿ ಸೇರಿದಂತೆ ವಿವಿಧೆಡೆ ಶೋಧ ನಡೆಸಲು ನ್ಯಾಯಾಲಯದಿಂದ ಅನುಮತಿ ಪಡೆದಿರುವ ಎಸ್‌ಐಟಿ ತನಿಖಾಧಿಕಾರಿಗಳು, ಹೈದರಾಬಾದ್‌ನಲ್ಲಿ ಬೀಡುಬಿಟ್ಟಿದ್ದು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಎರಡು ದಿನ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 16 ಕೆ.ಜಿ ಚಿನ್ನ ಜಪ್ತಿ ಮಾಡಿದ್ದಾರೆ. ಇದರ ಮೌಲ್ಯ ₹12 ಕೋಟಿ ಎಂದು ಅಂದಾಜಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಹೈದರಾಬಾದ್‌ನ ಫಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಕೋ–ಆಪರೇಟಿವ್‌ ಸೊಸೈಟಿ (ಎಫ್‌ಎಫ್‌ಸಿಸಿಎಸ್‌ಎಲ್‌) ಅಧ್ಯಕ್ಷ, ಬಂಧಿತ ಆರೋಪಿ ಸತ್ಯನಾರಾಯಣ ವರ್ಮಾ ಅವರ ಫ್ಲ್ಯಾಟ್‌ನಲ್ಲಿ 5 ಕೆ.ಜಿ ಹಾಗೂ ಮಧ್ಯವರ್ತಿ ಕಾಕಿ ಶ್ರೀನಿವಾಸ್‌ ಅವರು ಖರೀದಿಸಿದ್ದ 1 ಕೆ.ಜಿ ಚಿನ್ನವನ್ನು ಜಪ್ತಿ ಮಾಡಲಾಗಿದೆ ಎಂದು ಎಸ್‌ಐಟಿ ಮೂಲಗಳು ‘ಪ್ರಜಾವಾಣಿ‘ಗೆ ತಿಳಿಸಿವೆ.

ADVERTISEMENT

ಹಣ ವಾಪಸ್‌ ನೀಡಿದ ಬಿಲ್ಡರ್‌:

ನಿಗಮದ ಅಕ್ರಮದ ಹಣದಿಂದ ಸತ್ಯನಾರಾಯಣ ವರ್ಮಾ ಅವರು ಹೈದರಾಬಾದ್‌ನಲ್ಲಿ ಎರಡು ಫ್ಲ್ಯಾಟ್‌ ಬುಕ್‌ ಮಾಡಿದ್ದರು. ಮುಂಗಡವಾಗಿ ಹಣ ಪಾವತಿಸಿದ್ದರು. ಬಿಲ್ಡರ್‌ ಕರೆಸಿ ವಿಚಾರಣೆ ನಡೆಸಿದಾಗ ₹2.50 ಕೋಟಿ ನಗದು ವಾಪಸ್‌ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಕಾಕಿ ಶ್ರೀನಿವಾಸ್‌ ಕೆಲವು ವರ್ಷಗಳ ಕಾಲ ಹೈದರಾಬಾದ್‌ನಲ್ಲೂ ಗ್ರಾಫಿಕ್ಸ್‌ ಡಿಸೈನರ್‌ ಕೆಲಸ ಮಾಡುತ್ತಿದ್ದರು. ಆಗ ಪ್ರಕರಣದ ಪ್ರಮುಖ ಆರೋಪಿ ಸತ್ಯಾನಾರಾಯಣ ವರ್ಮಾ ಅವರ ಸ್ನೇಹವಾಗಿತ್ತು. ಛತ್ತೀಸಗಢದ ಕೃಷಿ ಅಭಿವೃದ್ಧಿ ಮಂಡಳಿಯಿಂದ ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ವರ್ಮಾ ಜತೆಗೆ ಶ್ರೀನಿವಾಸ್‌ ಕೈಜೋಡಿಸಿದ್ದರು. ವಾಲ್ಮೀಕಿ ನಿಗಮದ ಹಗರಣದಲ್ಲೂ ಸತ್ಯನಾರಾಯಣ ವರ್ಮಾ ಜತೆಗೆ ಕೃತ್ಯದಲ್ಲಿ ಭಾಗಿಯಾಗಿ, ನಿಗಮದ ಹಣವನ್ನು ಹವಾಲಾ ಮೂಲಕ ನಗದು ರೂಪದಲ್ಲಿ ಪಡೆಯಲು ಕಾಕಿ ಶ್ರೀನಿವಾಸ್‌ ಪ್ರಮುಖ ಪಾತ್ರ ವಹಿಸಿದ್ದರು. ಅಂದಾಜು ₹ 10 ಕೋಟಿಯನ್ನು ನಗದು ರೂಪದಲ್ಲಿ ಶ್ರೀನಿವಾಸ್ ವರ್ಗಾವಣೆ ಮಾಡಿದ್ದರು. ಈ ಕೆಲಸಕ್ಕೆ ದೊಡ್ಡ ಮೊತ್ತದ ಹಣ ಪಡೆದುಕೊಂಡಿದ್ದರು. ಅದರಿಂದ ಚಿನ್ನ ಖರೀದಿಸಿ ಹೈದರಾಬಾದ್‌ನ ಪರಿಚಯಸ್ಥರ ಮನೆಯಲ್ಲಿ ಇಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

‘ಈ ಪ್ರಕರಣದಲ್ಲಿ ಇದುವರೆಗೂ ಆರೋಪಿಗಳಿಂದ ನಗದು ಸೇರಿದಂತೆ ಒಟ್ಟು ₹48.50 ಕೋಟಿ ಮೌಲ್ಯದ ಚಿನ್ನ ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಎಸ್‌ಐಟಿ ಪೊಲೀಸರು ಹೇಳಿದರು.

ಕಾಕಿ ಶ್ರೀನಿವಾಸ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.