ADVERTISEMENT

ವಾಲ್ಮೀಕಿ ನಿಗಮದ ಹಗರಣ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 18:27 IST
Last Updated 1 ಜುಲೈ 2024, 18:27 IST
<div class="paragraphs"><p>ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ವಾಲ್ಮೀಕಿ ನವಸಮಾಜ ಸಂಘದ ಸದಸ್ಯರು ಭಾಗವಹಿಸಿದ್ದರು </p></div>

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ವಾಲ್ಮೀಕಿ ನವಸಮಾಜ ಸಂಘದ ಸದಸ್ಯರು ಭಾಗವಹಿಸಿದ್ದರು

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬ್ಯಾಂಕ್‌ ಖಾತೆಯಿಂದ ₹ 89 ಕೋಟಿ ಅಕ್ರಮವಾಗಿ ವರ್ಗಾವಣೆ ಮಾಡಿರುವ ಹಗರಣದಲ್ಲಿ ತಪ್ಪಿತಸ್ಥರನ್ನು ಪತ್ತೆಹಚ್ಚಿ, ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ವಾಲ್ಮೀಕಿ ನವಸಮಾಜ ಸಂಘದ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ADVERTISEMENT

‘ವಾಲ್ಮೀಕಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಹಗರಣಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ನಿಗಮದಲ್ಲಿ ಮೀಸಲಿಟ್ಟಿರುವ ಅನುದಾನವನ್ನು ಆಯಾ ಆರ್ಥಿಕ ವರ್ಷದಲ್ಲಿಯೇ ಸಮುದಾಯದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ನಿಗಮದಲ್ಲಿ ನಡೆಯುತ್ತಿರುವ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ಹಾವಳಿಯನ್ನು ನಿಯಂತ್ರಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

‘ಪರಿಶಿಷ್ಟ ಪಂಗಡದ ಶೇಕಡ 7ರಷ್ಟು ಮೀಸಲಾತಿಯನ್ನು ಸಂವಿಧಾನದ ಅನುಚ್ಛೇದ 9ರಲ್ಲಿ ಸೇರ್ಪಡೆ ಮಾಡಬೇಕು. ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡದಂತೆ ಕ್ರಮ ಕೈಗೊಳ್ಳಬೇಕು. ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವೆಂದು ಮರುನಾಮಕರಣ ಮಾಡಬೇಕು. ವಾಲ್ಮೀಕಿ ಅಧ್ಯಯನ ಪೀಠಕ್ಕೆ ಹೆಚ್ಚುವರಿ ಅನುದಾನ ಒದಗಿಸಬೇಕು’ ಎಂದು ಆಗ್ರಹಿಸಿದರು.

‘ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅವಕಾಶ ನೀಡಬೇಕು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು’ ಎಂದರು.

ರಾಯಚೂರು ವಲ್ಲಪಲ್ಲಿ ಮಠದ ವರದದಾನೇಶ್ವರ ಸ್ವಾಮೀಜಿ, ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಎನ್. ಲಕ್ಷ್ಮಿಪತಿ, ಕಲ್ಯಾಣ ಕರ್ನಾಟಕ ಭಾಗದ ಅಧ್ಯಕ್ಷ ಲಿಂಗಯ್ಯ ನಾಯಕ್, ಯುವ ಘಟಕದ ಅಧ್ಯಕ್ಷ ತುಳಸಿರಾಮ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.