ಕೆ.ಆರ್.ಪುರ: ‘ಜಗತ್ತಿನ ಗಮನ ಸೆಳೆದ ಮಹರ್ಷಿ ವಾಲ್ಮೀಕಿ ಸಂದೇಶಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿವೆ’ ಎಂದು ಪೂರ್ವ ತಾಲ್ಲೂಕು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ವೆಂಕಟೇಶ್ ಹೇಳಿದರು.
ತಾಲ್ಲೂಕು ಕಚೇರಿ ಆವರಣದಲ್ಲಿ ಬೆಂಗಳೂರು ಪೂರ್ವ ತಾಲ್ಲೂಕು ಆಡಳಿತ ಮಂಡಳಿ ಮತ್ತು ಪೂರ್ವ ತಾಲ್ಲೂಕು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ ಜಂಟಿಯಾಗಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
‘ವಾಲ್ಮೀಕಿ ರಚಿಸಿರುವ ರಾಮಾಯಣವು ಸದಾ ಕಾಲಕ್ಕೂ ಆದರ್ಶವಾಗಿದೆ. ಭಾರತೀಯ ಸಂಸ್ಕೃತಿ ಹಾಗೂ ಜೀವನ ಪದ್ಧತಿಯನ್ನು ಪ್ರತಿಬಿಂಬಿಸುವ ರಾಮಾಯಣ ಸರ್ವಕಾಲಕ್ಕೂ ಪ್ರಸ್ತುತ’ ಎಂದರು.
ವಾಲ್ಮೀಕಿ ಸಮಾಜದ ಮುಖಂಡ ಬಾಕ್ಸರ್ ನಾಗರಾಜ್, ‘ನಮ್ಮ ಜನಾಂಗಕ್ಕೆ ಸಮುದಾಯ ಭವನ ನಿರ್ಮಿಸುವ ಬಗ್ಗೆ 14 ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ. ಆದರೆ, ಈವರೆಗೂ ನಮ್ಮ ಬೇಡಿಕೆ ಸಾಕಾರವಾಗಿಲ್ಲ. ಜನಾಂಗಕ್ಕೆ ಸಮುದಾಯ ಭವನ, ವಸತಿ ನಿಲಯ, ಶಿಕ್ಷಣ ಸೇರಿದಂತೆ ಹಲವು ಸೌಲಭ್ಯಕ್ಕಾಗಿ 5 ಎಕರೆ ಜಾಗವನ್ನು ಮೀಸಲಿಡಬೇಕು’ ಎಂದು ತಿಳಿಸಿದರು.
ತಹಶೀಲ್ದಾರ್ ಶೇಖರ್, ಮುಖಂಡರಾದ ಬೆಳ್ಳೂರು ಆಂಜಿನಪ್ಪ, ಕಟ್ಟಗೊಲ್ಲಹಳ್ಳಿ ಶಿವಕುಮಾರ್, ಮಂಜುನಾಥ್, ಜಿ.ಕೆ.ನಾಗೇಶ್, ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಜೆಡಿಎಸ್ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ
ಬೆಂಗಳೂರು: ಜೆಡಿಎಸ್ ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ನಾಯಕರು ವಾಲ್ಮೀಕಿ ಅವರ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್‌ಬಾಬು ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ ಟಿ.ಎ. ಶರವಣ ಟಿ.ಎನ್. ಜವರಾಯಿ ಗೌಡ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.