ADVERTISEMENT

ವಂದೇ ಭಾರತ್‌ ಮೊದಲ ಸ್ಲೀಪರ್‌ ರೈಲು ಅನಾವರಣ: ವಿಶೇಷತೆಗಳೇನು?

ಭಾರತದ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಭಾನುವಾರ ಅನಾವರಣಗೊಳಿಸಿದರು.

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 21:04 IST
Last Updated 1 ಸೆಪ್ಟೆಂಬರ್ 2024, 21:04 IST
ದೇಶದ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಭಾನುವಾರ ಅನಾವರಣಗೊಳಿಸಿದರು. ರೈಲ್ಚೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ರೈಲ್ವೆ ಮಂಡಳಿ ಸಿಇಒ ಮತ್ತು ಅಧ್ಯಕ್ಷ ಶಂತನು ರಾಯ್‌ ಬೆಮೆಲ್ ಅಧಿಕಾರಿಗಳು ರೈಲ್ವೆ ಅಧಿಕಾರಿಗಳು ಭಾಗವಹಿಸಿದ್ದರು. –ಪ್ರಜಾವಾಣಿ ಚಿತ್ರ
ದೇಶದ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಭಾನುವಾರ ಅನಾವರಣಗೊಳಿಸಿದರು. ರೈಲ್ಚೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ರೈಲ್ವೆ ಮಂಡಳಿ ಸಿಇಒ ಮತ್ತು ಅಧ್ಯಕ್ಷ ಶಂತನು ರಾಯ್‌ ಬೆಮೆಲ್ ಅಧಿಕಾರಿಗಳು ರೈಲ್ವೆ ಅಧಿಕಾರಿಗಳು ಭಾಗವಹಿಸಿದ್ದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಭಾರತ್ ಅರ್ಥ್‌ ಮೂವರ್ಸ್ ಲಿಮಿಟಿಡ್‌ನಲ್ಲಿ (ಬೆಮೆಲ್‌) ತಯಾರಾಗಿರುವ ರಾತ್ರಿ ವೇಳೆ ಸಂಚರಿಸಲಿರುವ ಭಾರತದ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಭಾನುವಾರ ಅನಾವರಣಗೊಳಿಸಿದರು.

ಮುಂದಿನ ಮೂರು ತಿಂಗಳ ಒಳಗೆ ಸ್ಲೀಪರ್‌ ರೈಲು ಸಂಚಾರ ಆರಂಭವಾಗಲಿದೆ. ಆರಂಭಕ್ಕೂ ಮುನ್ನ ಹತ್ತು ದಿನ ತಾಂತ್ರಿಕ ಪರೀಕ್ಷೆ, ವಿವಿಧ ಪ್ರಾಯೋಗಿಕ ಸಂಚಾರ ನಡೆಸಲಾಗುವುದು ಎಂದು ಅಶ್ವಿನಿ ವೈಷ್ಣವ್‌ ತಿಳಿಸಿದರು.

‘ಎರಡು ಪ್ರೊಟೊಟೈಪ್‌ (ಮೂಲಮಾದರಿ) ರೈಲುಗಳನ್ನು ಪರಿಶೀಲಿಸಿದ್ದೇನೆ. ರೈಲು ವಿನ್ಯಾಸಗೊಳಿಸಿದ ಎಂಜಿನಿಯರ್‌ಗಳೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ರೈಲು ತಪಾಸಣೆ ಮುಗಿದ ಬಳಿಕ ಇನ್ನಷ್ಟು ರೈಲುಗಳನ್ನು ತಯಾರಿಸಲಾಗುವುದು. ಮುಂದಿನ ಹಂತದ ರೈಲುಗಳು ಒಂದೂವರೆ ವರ್ಷಗಳಲ್ಲಿ ತಯಾರಾಗಲಿವೆ. ಬಳಿಕ ಪ್ರತಿ ತಿಂಗಳಿಗೆ ಎರಡರಿಂದ ಮೂರು ರೈಲುಗಳು ಸಂಚಾರಕ್ಕೆ ಸಿದ್ಧಗೊಳ್ಳಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ವಂದೇ ಭಾರತ್‌ ರೈಲಿನ ವಿನ್ಯಾಸವನ್ನು ನಿರಂತರವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಅದೇ ರೀತಿ ವಂದೇ ಭಾರತ್‌ ಮೆಟ್ರೊ, ವಂದೇ ಭಾರತ್‌ ಸ್ಲೀಪರ್‌, ಅಮೃತ್‌ ಭಾರತ್‌ ರೈಲುಗಳನ್ನೂ ಹೊಸದಾಗಿ ರೂಪಿಸಲಾಗುತ್ತಿದೆ. ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವಿರುವ ಈ ರೈಲು, ಸುಧಾರಿತ ಅಪಘಾತ ಸುರಕ್ಷಾ ವಿನ್ಯಾಸವನ್ನು ಹೊಂದಿದೆ. ಜೊತೆಗೆ ರೈಲ್ವೆ ಬೋಗಿಗಳು ಐಷಾರಾಮಿ, ಸಕಲ ಸೌಲಭ್ಯದ ಸಂಚಾರಿ ಅನುಭವ ನೀಡಲಿವೆ ಎಂದು ಮಾಹಿತಿ ನೀಡಿದರು.

‘ರಾತ್ರಿ ವೇಳೆ 800-1200 ಕಿ.ಮೀ ದೂರ ಕ್ರಮಿಸಲು ಅನುಕೂಲವಾಗುಂತೆ ವಂದೇ ಭಾರತ್‌ ಸ್ಲೀಪರ್‌ ರೈಲನ್ನು ರೂಪಿಸಲಾಗಿದೆ. ಮಧ್ಯಮ ವರ್ಗದ ಜನರಿಗೆ ಅನುಕೂಲಕರವಾಗಲಿದೆ. ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನ ದರಕ್ಕೆ ಸರಿಸಮವಾಗಿ ವಂದೇ ಭಾರತ್‌ ಸ್ಲೀಪರ್‌ ದರ ಇರಲಿದೆ’ ಎಂದು ವಿವರಿಸಿದರು.

‘ನಾಯಿಗೂ ಜಾಗ’: ಆರ್‌ಪಿಎಫ್‌ ಸೇರಿ ಭದ್ರತಾ ಸಿಬ್ಬಂದಿಯ ಶ್ವಾನದಳ ತಂಗಲು ‘ಡಾಗ್‌ ಬಾಕ್ಸ್’ ಇಡಲಾಗಿದೆ. ಅಗತ್ಯವಿದ್ದರೆ ಪ್ರಯಾಣಿಕರ ಸಾಕುನಾಯಿಗೂ ‘ಡಾಗ್‌ ಬಾಕ್ಸ್’ ಬಳಸಲು ಅವಕಾಶ ಸಿಗಲಿದೆ.

ಅಡುಗೆ ಸಿದ್ಧಪಡಿಸಲು ವಿಶೇಷ ಕೋಣೆಯಿದ್ದು, ಇಲ್ಲಿ ಓವೆನ್‌, ಫ್ರಿಡ್ಜ್‌, ನೀರು ಕಾಯಿಸುವ ವ್ಯವಸ್ಥೆ ಇದೆ. ಜೊತೆಗೆ ತ್ಯಾಜ್ಯದ ತೊಟ್ಟಿ ವ್ಯವಸ್ಥೆ ಮಾಡಲಾಗಿದೆ.

ಹ್ಯಾಂಗರ್‌ ನಿರ್ಮಾಣ: ಬೆಮೆಲ್‌ ನೂತನ ವಂದೇ ಭಾರತ್‌ ನಿರ್ಮಾಣ ಘಟಕ ಹಾಗೂ 9 ಎಕರೆ 2 ಗುಂಟೆ ವಿಸ್ತೀರ್ಣದಲ್ಲಿ ನೂತನ ಹ್ಯಾಂಗರ್‌ ನಿರ್ಮಾಣಕ್ಕೆ ರೈಲ್ವೆ ಸಚಿವರು ಚಾಲನೆ ನೀಡಿದರು. ಇಲ್ಲಿ ಬ್ರಾಡ್‌ ಗೇಜ್‌, ಸ್ಟ್ಯಾಂಡರ್ಡ್‌ ಗೇಜ್‌ ರೋಲಿಂಗ್ ಸ್ಟಾಕ್‌ ನಿರ್ಮಾಣಗೊಳ್ಳಲಿದೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ರೈಲ್ವೆ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಅಧ್ಯಕ್ಷ ಸತೀಶ್‌ ಕುಮಾರ್‌, ಬೆಮೆಲ್‌ ವ್ಯವಸ್ಥಾಪಕ ನಿರ್ದೇಶಕ ಶಂತನು ರಾಯ್‌ ಭಾಗವಹಿಸಿದ್ದರು.


‘ನಾಯಿಗೂ ಜಾಗ’

ಆರ್‌ಪಿಎಫ್‌ ಸೇರಿ ಭದ್ರತಾ ಸಿಬ್ಬಂದಿಯ ಶ್ವಾನದಳ ತಂಗಲು ‘ಡಾಗ್‌ ಬಾಕ್ಸ್’ ಇಡಲಾಗಿದೆ. ಅಗತ್ಯವಿದ್ದರೆ ಪ್ರಯಾಣಿಕರ ಸಾಕುನಾಯಿಗೂ ‘ಡಾಗ್‌ ಬಾಕ್ಸ್’ ಬಳಸಲು ಅವಕಾಶ ಸಿಗಲಿದೆ.

ಅಡುಗೆ ಸಿದ್ಧಪಡಿಸಲು ವಿಶೇಷ ಕೋಣೆಯಿದ್ದು, ಇಲ್ಲಿ ಓವೆನ್‌, ಫ್ರಿಡ್ಜ್‌, ನೀರು ಕಾಯಿಸುವ ವ್ಯವಸ್ಥೆ ಇದೆ. ಜೊತೆಗೆ ತ್ಯಾಜ್ಯದ ತೊಟ್ಟಿ ವ್ಯವಸ್ಥೆ ಮಾಡಲಾಗಿದೆ.

‘ಕಳಪೆ ಆಹಾರ ಪೂರೈಸಿದರೆ ಕ್ರಮ’

‘ವಂದೇ ಭಾರತ್‌ ಸೇರಿದಂತೆ ಭಾರತೀಯ ರೈಲ್ವೆ ಪ್ರತಿದಿನ 13 ಲಕ್ಷ ಊಟ ಪೂರೈಸುತ್ತಿದೆ. ಕಳಪೆ ಆಹಾರದ ಬಗ್ಗೆ ಶೇ 0.1 ಕ್ಕಿಂತ ಕಡಿಮೆ ದೂರುಗಳು ದಾಖಲಾಗುತ್ತಿವೆ. ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಗುತ್ತಿಗೆ ಅಡುಗೆದಾರರು, ಪೂರೈಕೆದಾರರ ಮೇಲೆ ಕ್ರಮ ವಹಿಸಲಾಗಿದೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದರು.

ವಂದೇ ಭಾರತ್‌ ಸ್ಲೀಪರ್‌ ವಿಶೇಷತೆಗಳು

l  ನಿದ್ರಿಸಲು ಆರಾಮದಾಯಕ ಮಂಚ

l  ಅತ್ಯುತ್ತಮ ಒಳಾಂಗಣ ವಿನ್ಯಾಸ

l ಏರೋಡೈನಾಮಿಕ್ ಬಾಹ್ಯನೋಟ

l ಅಗ್ನಿ ಅಪಾಯದ ಮಟ್ಟ ಅತಿಕಡಿಮೆ

l ಅಂಗವಿಕಲರಿಗೆ ವಿಶೇಷ ಆಸನ ಮತ್ತು ಶೌಚಾಲಯ ವ್ಯವಸ್ಥೆ

l ಸ್ವಯಂಚಾಲಿತ ಬಾಗಿಲುಗಳು

l  ಬೋಗಿಗಳ ಮಧ್ಯೆ ಸೆನ್ಸರ್ ಆಧಾರಿತ ಬಾಗಿಲುಗಳು

l  ರೈಲಿನ ಕೊನೆ ಬೋಗಿಯಲ್ಲಿ ದೂರದಿಂದಲೇ ಕಾರ್ಯ
ನಿರ್ವಹಿಸುವ ಬೆಂಕಿ ತಡೆಗೋಡೆ ಬಾಗಿಲುಗಳು

l  ವಾಸನೆ ಮುಕ್ತ ಶೌಚಾಲಯ ವ್ಯವಸ್ಥೆ

l ಚಾಲನಾ ಸಿಬ್ಬಂದಿಗೆ ಶೌಚಾಲಯ

l ಪ್ರಥಮ ದರ್ಜೆ ಎಸಿ ಕಾರಿನಲ್ಲಿ ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ

l ಯುಎಸ್‌ಬಿ ಚಾರ್ಜಿಂಗ್, ರೀಡಿಂಗ್ ಲೈಟ್

l ಸಾರ್ವಜನಿಕ ಪ್ರಕಟಣೆ ಮತ್ತು ದೃಶ್ಯ ಮಾಹಿತಿ ವ್ಯವಸ್ಥೆ

l ವಿಶಾಲವಾದ ಲಗೇಜ್ ಕೊಠಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.