ADVERTISEMENT

ಗರ್ಭದಲ್ಲಿ ಫೈಬ್ರಾಯ್ಡ್‌: ವಾಣಿವಿಲಾಸದಲ್ಲಿ ಯಶಸ್ವಿ ಹೆರಿಗೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 23:30 IST
Last Updated 10 ಅಕ್ಟೋಬರ್ 2024, 23:30 IST
ಶಸ್ತ್ರಚಿಕಿತ್ಸೆ ಮೂಲಕ ಗರ್ಭಾಶಯದಲ್ಲಿನ ನಾರುಗಡ್ಡೆ ಹೊರತೆಗೆದ ವಾಣಿವಿಲಾಸ ಆಸ್ಪತ್ರೆಯ ವೈದ್ಯರ ತಂಡ
ಶಸ್ತ್ರಚಿಕಿತ್ಸೆ ಮೂಲಕ ಗರ್ಭಾಶಯದಲ್ಲಿನ ನಾರುಗಡ್ಡೆ ಹೊರತೆಗೆದ ವಾಣಿವಿಲಾಸ ಆಸ್ಪತ್ರೆಯ ವೈದ್ಯರ ತಂಡ   

ಬೆಂಗಳೂರು: ಗರ್ಭಾಶಯದಲ್ಲಿ ನಾರುಗಡ್ಡೆ (ಫೈಬ್ರಾಯ್ಡ್‌) ಹೊಂದಿದ್ದ 31 ವರ್ಷದ ಗರ್ಭಿಣಿಗೆ ವಾಣಿವಿಲಾಸ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.

ನಗರದ ವಾಸಿಯಾದ ಮಹಿಳೆ, ಫೈಬ್ರಾಯ್ಡ್‌ನಿಂದಾಗಿ ಮಕ್ಕಳನ್ನು ಹೊಂದಲು ಸಾಧ್ಯವಾಗಿರಲಿಲ್ಲ. ಫೈಬ್ರಾಯ್ಡ್‌ ಸಂಬಂಧ ಅವರು 2017ರಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮತ್ತೆ ಈ ನಾರುಗಡ್ಡೆ ಬೆಳೆದಿದ್ದರಿಂದ ಅವರಿಗೆ ಮೂರು ಬಾರಿ ಗರ್ಭಪಾತವಾಗಿತ್ತು. ಮತ್ತೊಮ್ಮೆ ಗರ್ಭಿಣಿಯಾದ ಅವರು, ಮೂರನೇ ತಿಂಗಳಲ್ಲಿ ನಗರದ ವಾಣಿವಿಲಾಸ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಗತ್ಯ ಚಿಕಿತ್ಸೆ ಒದಗಿಸಿದ ವೈದ್ಯರು, ಗರ್ಭ ಚೀಲಕ್ಕೆ ಹೋಲಿಗೆ ಹಾಕುವ ಮೂಲಕ ಗರ್ಭಪಾತ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಮಹಿಳೆಗೆ ಅ.5 ರಂದು ಶಸ್ತ್ರಚಿಕಿತ್ಸೆ ನಡೆಸಿ, ಮಗು ಹಾಗೂ ನಾಲ್ಕು ಕೆ.ಜಿ. ತೂಕದ ನಾರುಗಡ್ಡೆಯನ್ನು ಹೊರ ತೆಗೆದಿದ್ದಾರೆ.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಸವಿತಾ ಸಿ. ಅವರ ನೇತೃತ್ವದಲ್ಲಿ ವೈದ್ಯರ ತಂಡವು ಸಿಸೇರಿಯನ್ ಹೆರಿಗೆ ಮಾಡಿಸಿದ್ದಾರೆ. ಮಗು 2.3 ಕೆ.ಜಿ. ತೂಕವಿದೆ. ತಾಯಿ ಹಾಗೂ ಮಗು ಆರೋಗ್ಯದಿಂದಿದ್ದು, ಶೀಘ್ರದಲ್ಲಿಯೇ ಅವರು ಮನೆಗೆ ತೆರಳುವುದಾಗಿ ವೈದ್ಯರು ತಿಳಿಸಿದ್ದಾರೆ. 

ADVERTISEMENT

‘ವಿವಾಹವಾಗಿ ಎಂಟು ವರ್ಷಗಳಾದರೂ ಮಹಿಳೆಗೆ ಮಗುವಾಗಿರಲಿಲ್ಲ. ಇದರಿಂದ ಅವರು ಸಾಕಷ್ಟು ನೊಂದಿದ್ದರು. ಗರ್ಭಾಶಯದಲ್ಲಿ ನಾರುಗಡ್ಡೆ ಬೆಳೆದಿದ್ದರಿಂದ ಮಗುವಿಗೆ ಅಪಾಯವಾಗುವ ಸಾಧ್ಯತೆಯಿತ್ತು. ಸಾಮಾನ್ಯವಾಗಿ ಒಂದು ಕೆ.ಜಿ. ತೂಕ ಇರಬೇಕಾದ ಗರ್ಭಾಶಯ ನಾಲ್ಕು ಕೆ.ಜಿ. ತೂಕವಿತ್ತು. ಅವರಿಗೆ ಪ್ರಾಣಾಪಾಯ ತಪ್ಪಿಸಲು ಗರ್ಭಾಶಯ ತೆಗೆಯುವುದು ಅನಿವಾರ್ಯವಾಯಿತು. ಹಲವು ಸವಾಲುಗಳನ್ನು ಎದುರಿಸಿ, ತಾಯಿ ಮತ್ತು ಮಗುವನ್ನು ರಕ್ಷಿಸಲಾಗಿದೆ. ಸಂಪೂರ್ಣ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸಲಾಗಿದೆ’ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.