ಬೆಂಗಳೂರು: ವರ್ತೂರು ಕೆರೆ ಬಳಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಸ್ಥಾಪನೆಗೆ ಮಾಡಿಕೊಳ್ಳಲಾಗಿದ್ದ 35 ಎಕರೆ 25 ಗುಂಟೆ ಭೂ ಸ್ವಾಧೀನದ ಕ್ರಮಬದ್ಧತೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಭೂಸ್ವಾಧೀನ ಪ್ರಶ್ನಿಸಿ ಜಮೀನಿನ ಮಾಲೀಕ ಬಾಬು ಮೌಲಾನಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಲೇವಾರಿ ಮಾಡಿದೆ.
ವಿಚಾರಣೆ ವೇಳೆ ಬೆಂಗಳೂರು ಜಲಮಂಡಳಿ ಪರ ವಾದ ಮಂಡಿಸಿದ ವಕೀಲ ಕೆ.ಬಿ.ಮೋನೇಶ್ ಕುಮಾರ್ ಅವರು, ‘ವರ್ತೂರು ಕೆರೆ ಸೇರುತ್ತಿದ್ದ ಒಳಚರಂಡಿಯ ಕೊಳಚೆ ನೀರನ್ನು ಶುದ್ಧೀಕರಿಸಿ ಆ ನೀರನ್ನು ಕೋಲಾರದ ಕೆರೆಗಳಿಗೆ ಹರಿಸಲಾಗುವುದು. ಈ ನಿಟ್ಟಿನಲ್ಲಿ ಇದು ಬೆಂಗಳೂರಿನ ಅತಿದೊಡ್ಡ ಎಸ್‌ಟಿಪಿ ಎನಿಸಲಿದೆ. ಆದರೆ, ವಾಜ್ಯದಿಂದಾಗಿ ಘಟಕ ನಿರ್ಮಾಣ ವಿಳಂಬವಾಗುತ್ತಿದೆ’ ಎಂದು ಆಕ್ಷೇಪಿಸಿದರು.
‘ನಿಯಮದ ಪ್ರಕಾರವೇ ಭೂ ಸ್ವಾಧೀನ ಮಾಡಿಕೊಂಡು, ಭೂ ಮಾಲೀಕರಿಗೆ ಪರಿಹಾರ ನೀಡಲಾಗಿದೆ. ಆದ್ದರಿಂದ ಭೂ ಸ್ವಾಧೀನ ಪ್ರಕ್ರಿಯೆಯನ್ನು ಮಾನ್ಯ ಮಾಡಬೇಕು’ ಎಂದು ಕೋರಿದರು.
ಈ ವಾದವನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಅರ್ಜಿದಾರರ ವಾದದಲ್ಲಿ ಹುರುಳಿಲ್ಲ’ ಎಂದು ಅರ್ಜಿ ವಜಾ ಗೊಳಿಸಿತು. ಈ ಆದೇಶದಿಂದಾಗಿ ಬೆಳ್ಳಂದೂರು ಅಮಾನಿಖಾನೆಯಲ್ಲಿ ಎಸ್‌ಟಿಪಿ ಘಟಕ ಸ್ಥಾಪನೆಗೆ ಇದ್ದ ಅಡ್ಡಿ ನಿವಾರಣೆಯಾದಂತಾಗಿದೆ ಮತ್ತು 12 ವರ್ಷಗಳ ನಾಲ್ಕು ಸುತ್ತಿನ ಕಾನೂನು ಸಮರ ಅಂತ್ಯವಾದಂತಾಗಿದೆ.
ಈ ಘಟಕವು ಪ್ರತಿದಿನ 70 ಎಂಎಲ್‌ಡಿ ನೀರು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.