ಬೆಂಗಳೂರು: 'ಭಾರತಕ್ಕೆ ಆರ್ಯರು ಹೊರಗಿನಿಂದ ಬಂದರು ಎಂಬ ವಾದದಲ್ಲಿ ಹುರುಳಿಲ್ಲ' ಎಂದು ವಿಯೆಟ್ನಂನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ಜಿ.ಬಿ.ಹರೀಶ ತಿಳಿಸಿದರು.
ವಿಯೆಟ್ನಂನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವೇದಗಳನ್ನು ಕುರಿತ ಎರಡು ಸಂಶೋಧನಾ ಪತ್ರಿಕೆಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ವಿಯೆಟ್ನಾಮಿ ಭಾಷೆಯಲ್ಲಿರುವ ಈ ಸಂಚಿಕೆಗಳು ವಿಯೆಟ್ನಂ ಹಾಗೂ ಭಾರತ ನಡುವಿನ ಸಂಬಂಧದಲ್ಲಿ ಹೊಸ ಹೆಜ್ಜೆ. ಸ್ವಾಮಿ ವಿವೇಕಾನಂದರು ವಿಶ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿದ ದಿನದಂದೇ (ಸೆ.11) ಬಿಡುಗಡೆ ಆಗುತ್ತಿರುವುದು ಮತ್ತೊಂದು ವಿಶೇಷ' ಎಂದರು.
'ಇದರಲ್ಲಿ ಡೇವಿಡ್ ಫ್ರಾಲಿ ಲೇಖನವೂ ಸೇರಿದಂತೆ ಅನೇಕ ವಿದ್ವಾಂಸರ ಲೇಖನಗಳಿವೆ. ವೇದಗಳನ್ನು ಕುರಿತು ವಿಯೆಟ್ನಂ ಭಾಷೆಯಲ್ಲಿ ಪ್ರಕಟವಾದ ಮೊದಲ ಸಂಚಿಕೆಗಳಿವು. ವಿಯೆಟ್ನಂ ಅಕಾಡೆಮಿ ಆಫ್ ಸೋಶಿಯಲ್ ಸೈನ್ಸ್‌ನ ಧಾರ್ಮಿಕ ಅಧ್ಯಯನ ವಿಭಾಗ ಹಾಗೂ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಈ ಸಂಚಿಕೆಗಳು ಸಿದ್ಧವಾಗಿವೆ' ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.