ADVERTISEMENT

ಬೆಂಗಳೂರು | ವೀರಲೋಕ ಪುಸ್ತಕ ಸಂತೆ: ಹರಿದು ಬಂದ ಜನಸಾಗರ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 15:29 IST
Last Updated 17 ನವೆಂಬರ್ 2024, 15:29 IST
‘ವೀರಲೋಕ ಪುಸ್ತಕ ಸಂತೆ’ಯಲ್ಲಿ ಪುಸ್ತಕ ಖರೀದಿಸಿಲು ನಗರದ ವಿವಿಧೆಡೆಯಿಂದ ಹರಿದುಬಂದ ಜನಸಾಗರ
ಪ್ರಜಾವಾಣಿ ಚಿತ್ರ
‘ವೀರಲೋಕ ಪುಸ್ತಕ ಸಂತೆ’ಯಲ್ಲಿ ಪುಸ್ತಕ ಖರೀದಿಸಿಲು ನಗರದ ವಿವಿಧೆಡೆಯಿಂದ ಹರಿದುಬಂದ ಜನಸಾಗರ ಪ್ರಜಾವಾಣಿ ಚಿತ್ರ   

ಬೆಂಗಳೂರು: ವೀರಲೋಕ ಪ್ರಕಾಶನವು ಜಯನಗರದ ಶಾಲಿನಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಎರಡನೇ ಆವೃತ್ತಿಯ ‘ವೀರಲೋಕ ಪುಸ್ತಕ ಸಂತೆ’ಗೆ ಕೊನೆಯ ದಿನವಾದ ಭಾನುವಾರ  ಜನಸಾಗರವೇ ಹರಿದು ಬಂದಿತ್ತು. ಸಾಹಿತ್ಯ ಪ್ರೇಮಿಗಳು ಸಂಭ್ರಮದಿಂದ ಸಂತೆಯಲ್ಲಿ ಮಳಿಗೆಗಳಿಗೆ ಓಡಾಡಿ, ನೆಚ್ಚಿನ ಲೇಖಕರ ಪುಸ್ತಕಗಳೊಂದಿಗೆ ಮನೆಗೆ ತೆರಳಿದರು. 

ರಜಾ ದಿನವಾದ್ದರಿಂದ ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಮೇಳಕ್ಕೆ ಬಂದಿದ್ದರು. ಮಧ್ಯಾಹ್ನದ ವೇಳೆಗೆ ಮಳಿಗೆಗಳಲ್ಲಿ ಜನದಟ್ಟಣೆ ಉಂಟಾಗಿತ್ತು. ಸಂಜೆಯ ಹೊತ್ತಿಗೆ ಮಳಿಗೆಗಳು ಮಾತ್ರವಲ್ಲದೆ, ಮೈದಾನದ ಎಲ್ಲೆಡೆ ಜನರು ಆವರಿಸಿಕೊಂಡಿದ್ದರು. ಆಹಾರ, ಆಟಿಕೆಗಳು, ಕರಕುಶಲ ಹಾಗೂ ಅಲಂಕಾರಿಕ ವಸ್ತುಗಳ ಮಳಿಗೆಗಳ ಬಳಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಶನಿವಾರ ಸಂಜೆ ಸುರಿದ ಮಳೆಯಿಂದಾಗಿ ಮಳಿಗೆಗಳ ಆವರಣ ಕೆಸರುಮಯವಾಗಿದ್ದರೂ, ಜನರ ಉತ್ಸಾಹ ಮಾತ್ರ ಕುಗ್ಗಲಿಲ್ಲ. ಅದರ ನಡುವೆಯೇ ಸಾಗಿ ವಿವಿಧ ತಿನಿಸುಗಳನ್ನು ಸವಿದರು.

ಹರಿವು ಬುಕ್ಸ್ ಹೊರತಂದ ಕೆ.ಬಿ. ಸೂರ್ಯಕುಮಾರ್ ಅವರ ‘ಮಂಗಳಿ’, ಮೈಸೂರು ನಾಗರಾಜ ಶರ್ಮಾ ಅವರ ‘ಸಂಚು ವಂಚನೆಗಳ ಲೋಕದಲ್ಲಿ’, ಸರ್ವಮಂಗಳ ಜಯರಾಂ ಅವರ ‘ಸಂಜೆ ಸುರಿದ ಮಳೆ’ ಹಾಗೂ ವೆಂಕಟೇಶ ಪಿ. ಮರಕಂದಿನ್ನಿ ಅವರ ‘ಪಡಸಾಲಿ’ ಪುಸ್ತಕಗಳನ್ನು ಮಧ್ಯಾಹ್ನ ಬಿಡುಗಡೆ ಮಾಡಲಾಯಿತು. 

ADVERTISEMENT

ಲೇಖಕರ ಹಸ್ತಾಕ್ಷರ: ಸಂತೆಯಲ್ಲಿ ಲೇಖಕರಿಗೂ ಪ್ರತ್ಯೇಕ ಸ್ಥಳಾವಕಾಶ ಒದಗಿಸಿದ್ದರಿಂದ ಸಾಹಿತ್ಯಾಸಕ್ತಿರಿಗೆ ಅವರ ಭೇಟಿ ಸುಲಭವಾಯಿತು. ‘ಓಲೇ (ಓದುಗ–ಲೇಖಕ) ವಿಭಾಗದಲ್ಲಿ...’ ಮಲ್ಲೇಪುರಂ ಜಿ. ವೆಂಕಟೇಶ್, ಮೂಡ್ನಾಕೂಡು ಚಿನ್ನಸ್ವಾಮಿ, ವಿಶ್ವೇಶ್ವರ ಭಟ್, ಅಬ್ದುಲ್ ರಶೀದ್, ಎ.ಆರ್. ದತ್ತಾತ್ರಿ, ನರೇಂದ್ರ ರೈ ದೇರ್ಲ, ನಾಗರಾಜ ವಸ್ತಾರೆ, ಭಾರತಿ ಹೆಗಡೆ, ದೀಪಾ ಹಿರೇಗುತ್ತಿ, ದಾದಾಪೀರ್ ಜೈಮನ್, ಜಿ.ಬಿ. ಹರೀಶ್, ಶರಣು ಹುಲ್ಲೂರು, ವಿಕ್ರಮ್ ಹತ್ವಾರ್, ಕುಸುಮಾ ಆಯರಹಳ್ಳಿ, ಶಾಂತಿ ಕೆ. ಅಪ್ಪಣ್ಣ, ಇಂದ್ರಕುಮಾರ್ ಎಚ್.ಬಿ., ಶರತ್ ಎಂ.ಎಸ್. ಪಾಲ್ಗೊಂಡಿದ್ದರು. ಸಂತೆಗೆ ಬಂದಿದ್ದ ಕೆಲವರು ಅವರ ಪುಸ್ತಕಗಳನ್ನು ಖರೀದಿಸಿ, ಹಸ್ತಾಕ್ಷರವನ್ನೂ ಪಡೆದುಕೊಂಡರು. 

ಮಧ್ಯಾಹ್ನದ ಬಳಿಕ ‘ಕವಿತೆ ಹುಟ್ಟುವ ಸಮಯ’ ಕಾರ್ಯಾಗಾರ ನಡೆಯಿತು. ಇದನ್ನು ಕವಿ ವಾಸುದೇವ ನಾಡಿಗ್ ನಡೆಸಿಕೊಟ್ಟರು. ಸಂಜೆ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಿ. ಚಂದ್ರಿಕಾ ಅವರ ‘ಪ್ಯಾಲೆಟ್’, ಮಂಜುನಾಥ್ ಚಾಂದ್ ಅವರ ‘ಪ್ರಿಯ ಮೀರಾ’, ಡಿ.ವಿ. ಗುರುಪ್ರಸಾದ್ ಅವರ ‘ಸಮರಕಂಡ’, ಡಿ.ಎಸ್. ಚೌಗಲೆ ಅವರ ‘ಸದರ ಬಜಾರ್’, ರಾಮ್ ಕದಮ್ ಅವರ ‘ಮನೆ ಇಂಜಿನಿಯರ್’, ಶ್ರೀದೇವಿ ಕಳಸದ ಅವರ ‘ಹಮ್ಮಾ ಹೂ’ ಹಾಗೂ ಅನು ಬೆಳ್ಳೆ (ರಾಘವೇಂದ್ರ ರಾವ್‌) ಅವರ ‘ನಗು ಎಂದಿದೆ ಮಂಜಿನ ಬಿಂದು’ ಪುಸ್ತಕಗಳು ಬಿಡುಗಡೆಯಾದವು. 

ರಾಜ್ಯದ ವಿವಿಧೆಡೆ ಪುಸ್ತಕ ಸಂತೆ ಆಯೋಜನೆಗೆ ಮನವಿಗಳು ಬರುತ್ತಿವೆ. ಇದಕ್ಕೆ ಹೆಚ್ಚಿನ ಶ್ರಮ ಮತ್ತು ಹಣ ಅಗತ್ಯ. ನಮಗೆ ಆತಿಥ್ಯ ನೀಡುವುದಾದರೆ ಈ ಸಂತೆ ಆಯೋಜನೆಗೆ ಸಿದ್ಧ 
ವೀರಕಪುತ್ರ ಶ್ರೀನಿವಾಸ ವೀರಲೋಕ ಪ್ರಕಾಶನದ ಸಂಸ್ಥಾಪಕ

ಪುಸ್ತಕಗಳ ಬಾಕ್ಸ್ ಅನಾವರಣ

ವೀರಲೋಕ ಪ್ರಕಾಶನವು ಉಡುಗೊರೆ ನೀಡಬಹುದಾದ ಪುಸ್ತಕಗಳ ಬಾಕ್ಸ್‌ ಪರಿಚಯಿಸಿದೆ. ಇದನ್ನು ಭಾನುವಾರ ಸಂಜೆ ಅನಾವರಣ ಮಾಡಲಾಯಿತು. ಪ್ರತಿ ಬಾಕ್ಸ್‌ನಲ್ಲಿ ಆರು ಏಳು ಪುಸ್ತಕಗಳು ಇರಲಿವೆ. ಇದನ್ನು ಕೊರಿಯರ್ ಮೂಲಕವೂ ನಿರ್ದಿಷ್ಟ ವ್ಯಕ್ತಿಯ ಪರವಾಗಿ ಸಂಬಂಧಪಟ್ಟವರಿಗೆ ಕಳಿಸುವುದಾಗಿ ಆಯೋಜಕರು ಘೋಷಿಸಿದ್ದಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಉಡುಗೊರೆ ಮಳಿಗೆ ಸಿಹಿ ಅಂಗಡಿಗಳಲ್ಲಿ ಇಡುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.