ಬೆಂಗಳೂರು: ವೀರಲೋಕ ಪ್ರಕಾಶನವು ಜಯನಗರದ ಶಾಲಿನಿ ಮೈದಾನದಲ್ಲಿ ಹಮ್ಮಿಕೊಂಡಿರುವ ‘ವೀರಲೋಕ ಪುಸ್ತಕ ಸಂತೆ’ಗೆ ಎರಡನೇ ದಿನವಾದ ಶನಿವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಂಜೆ ಮಳೆಯ ನಡುವೆಯೂ ಜನರು ಪುಸ್ತಕ ಖರೀದಿಸಿ ಸಂಭ್ರಮಿಸಿದರು.
ಬೆಳಿಗ್ಗೆಯಿಂದಲೇ ನಗರದ ವಿವಿಧೆಡೆಯಿಂದ ಬಂದಿದ್ದ ಜನರು, ವಿವಿಧ ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿ, ತಮ್ಮ ನೆಚ್ಚಿನ ಲೇಖಕರ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಿದರು. ಮಧ್ಯಾಹ್ನದ ಬಳಿಕ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಂತೆಗೆ ಬಂದು, ಅಲ್ಲಿದ್ದ ವಿವಿಧ ತಿನಿಸುಗಳನ್ನೂ ಸವಿದರು. ಸಂಜೆಯಾಗುತ್ತಿದ್ದಂತೆ ಸಾಹಿತ್ಯಾಸಕ್ತರ ದಂಡೇ ಬಂದಿತ್ತು. ಆದರೆ, ಮಳೆಯಿಂದಾಗಿ ವಿವಿಧೆಡೆ ಚದುರಬೇಕಾಯಿತು. ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನೂ ಪುಸ್ತಕ ಮಳಿಗೆಗಳು ಇರುವೆಡೆ ಸ್ಥಳಾಂತರಿಸಲಾಯಿತು.
ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್, ನಾಟಕಕಾರ ಎಸ್.ಎನ್. ಸೇತುರಾಂ, ಗಜಾನನ ಶರ್ಮ, ಜಗದೀಶಶರ್ಮ ಸಂಪ, ಜೋಗಿ, ಕೆ.ಎನ್. ಗಣೇಶಯ್ಯ ಮೊದಲಾದ ಲೇಖಕರು ಪಾಲ್ಗೊಂಡಿದ್ದರು. ಅವರೊಂದಿಗೆ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿಕೊಂಡ ಸಾಹಿತ್ಯಾಸಕ್ತರು, ಪುಸ್ತಕಗಳಿಗೆ ಲೇಖಕರ ಹಸ್ತಾಕ್ಷರವನ್ನೂ ಪಡೆದುಕೊಂಡರು.
ಮಧ್ಯಾಹ್ನದ ಬಳಿಕ ‘ಕತೆ ಕಟ್ಟೋಣ ಬನ್ನಿ...’ ಕಾರ್ಯಾಗಾರ ನಡೆಯಿತು. ಇದನ್ನು ಉಪನ್ಯಾಸಕ ಶಿವಕುಮಾರ್ ಮಾವಲಿ ಹಾಗೂ ಪ್ರಕಾಶಕ ಶ್ರೀಧರ ಬನವಾಸಿ ನಡೆಸಿಕೊಟ್ಟರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಎ.ಎನ್. ಪ್ರಸನ್ನ ಅವರ ‘ಪರದೆ ಮತ್ತಿತರ ಕತೆಗಳು’, ಮಹಾಬಲೇಶ್ವರರಾವ್ ಅವರ ‘ಈ ಸಾವು ನ್ಯಾಯವೇ’, ಡಿ.ಎಸ್. ಶ್ರೀನಿವಾಸ ಪ್ರಸಾದ್ ಅವರ ‘ಬದುಕು ಬದಲಾಯಿತು’, ರಶ್ಮಿ ಅಭಯಸಿಂಹ ಅವರ ‘ಪಿಂಕ್ ಮುಜಾಂಡ’, ಮಂಜುನಾಥ್ ಕುಣಿಗಲ್ ಅವರ ‘ಶಿವಾಜಿ ಟೆಂಟ್’ ಹಾಗೂ ಅರುಣ್ ಕಿಲ್ಲೂರು ಅವರ ‘ಶ್ರೀಮಂತರಾಗೋಣ ಬನ್ನಿ’ ಪುಸ್ತಕಗಳು ಬಿಡುಗಡೆಯಾದವು.
ಪುಸ್ತಕ ಸಂತೆಗೆ ತೆರೆ ಇಂದು
ಪುಸ್ತಕ ಸಂತೆಯ ಕಡೆಯ ದಿನವಾದ ಭಾನುವಾರವೂ ಬೆಳಿಗ್ಗೆ 10ರಿಂದ ರಾತ್ರಿ 9 ಗಂಟೆಯವರೆಗೆ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಮೂಡ್ನಾಕೂಡು ಚಿನ್ನಸ್ವಾಮಿ ವಿಶ್ವೇಶ್ವರ ಭಟ್ ಅಬ್ದುಲ್ ರಶೀದ್ ಸೇರಿ ಹಲವು ಲೇಖಕರು ಪಾಲ್ಗೊಳ್ಳುತ್ತಾರೆ. ‘ಕವಿತೆ ಹುಟ್ಟುವ ಸಮಯ’ ಕಾರ್ಯಾಗಾರ ನಡೆಯಲಿದ್ದು ಕವಿ ವಾಸುದೇವ ನಾಡಿಗ್ ನಡೆಸಿಕೊಡಲಿದ್ದಾರೆ. ಸಂಜೆ 4 ಗಂಟೆಗೆ ಅಯುಬ ಜ ಧನ್ನೂರ ಅವರಿಂದ ಮ್ಯಾಜಿಕ್ ಶೊ 5.30ಕ್ಕೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಅತಿಥಿಗಳಾಗಿ ಟಿ.ಎನ್. ಸೀತಾರಾಮ್ ಬಿ. ದಯಾನಂದ್ ಭಾಗವಹಿಸುತ್ತಾರೆ. ಸಂಜೆ 6.30ರಿಂದ ಸಿನಿಮಾ ಸಂಜೆ ಕಾರ್ಯಕ್ರಮ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.