ಬೆಂಗಳೂರು: ವೀರಲೋಕ ಪ್ರಕಾಶನದಿಂದ ಎರಡನೇ ವರ್ಷದ ‘ವೀರಲೋಕ ಪುಸ್ತಕ ಸಂತೆ’ ನವೆಂಬರ್ 15ರಿಂದ 17ರವರೆಗೆ ಜಯನಗರ ಶಾಲಿನಿ ಮೈದಾನದಲ್ಲಿ ನಡೆಯಲಿದೆ.
ಒಂದೇ ಸೂರಿನಡಿ ನೂರಕ್ಕೂ ಅಧಿಕ ಲೇಖಕರು, ಪ್ರಕಾಶಕರು ಭೇಟಿಯಾಗಲಿದ್ದಾರೆ. ಎಲ್ಲರೂ ಪ್ರತ್ಯೇಕ ಮಳಿಗೆಗಳಲ್ಲಿ ಪುಸ್ತಕ ಗಳೊಂದಿಗೆ ಓದುಗರನ್ನು ಭೇಟಿ ಮಾಡಲಿದ್ದಾರೆ. ಮಕ್ಕಳಿಗಾಗಿ ವಿಶೇಷ ಆಟ ಮತ್ತು ಮನೋರಂಜನಾ ವಿಭಾಗಗಳಿರಲಿವೆ. ಆಹಾರ, ಆರೋಗ್ಯ, ವಸ್ತ್ರ, ಚಿತ್ರಕಲೆ, ಸಣ್ಣ ಕೈಗಾರಿಕಾ ಮಳಿಗೆಗಳು ಕನ್ನಡಿಗರನ್ನು ಸೆಳೆಯಲಿವೆ. ಉದ್ಘಾಟನೆಯ ಬಳಿಕ ಜನಪದ ಸಂಜೆ, ಭಾವಗೀತೆ, ಚಲನಚಿತ್ರಗೀತೆಗಳ ಕಾರ್ಯಕ್ರಮ ನಡೆಯಲಿವೆ. ಇದೇ ಸಂದರ್ಭದಲ್ಲಿ ವೀರಲೋಕ ಪ್ರಕಟಣೆಯ 20 ಪುಸ್ತಕಗಳು ಲೋಕಾರ್ಪಣೆ ಗೊಳ್ಳಲಿವೆ ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.
ಶಾಲಿನಿ ಮೈದಾನದಲ್ಲಿ 20 ಸಾವಿರ ಅಡಿ ವಿಸ್ತೀರ್ಣದಲ್ಲಿ ಸುಸಜ್ಜಿತ ಟೆಂಟ್‌ನಲ್ಲಿ ಪುಸ್ತಕ ಪ್ರದರ್ಶನ, ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಪುಸ್ತಕ ಸಂತೆ ಕುರಿತು ಪ್ರಚಾರ ಅಭಿಯಾನಕ್ಕೆ ಒಂದು ಸಾವಿರಕ್ಕೂ ಹೆಚ್ಚು ಆಟೊ ಚಾಲಕರು ಕೈಜೋಡಿಸಿದ್ದಾರೆ ಎಂದು ಹೇಳಿದ್ದಾರೆ.
ನ.15ರಂದು ಬೆಳಿಗ್ಗೆ 10ಕ್ಕೆ ಸಾಂಸ್ಕೃತಿಕ ಮೆರವಣಿಗೆ ಮತ್ತು ಉದ್ಘಾಟನೆ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಕನ್ನಡ ಧ್ವಜಾರೋಹಣ ಮಾಡಲಿದ್ದಾರೆ. ಶಾಸಕ ಸಿ.ಕೆ. ರಾಮಮೂರ್ತಿ ಅಧ್ಯಕ್ಷತೆ ವಹಿಸುವರು. ಪುಸ್ತಕ ಪರಿಚಾರಕ ಅಂಕೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಪುಸ್ತಕ ಮಳಿಗೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಉದ್ಘಾಟಿಸ ಲಿದ್ದಾರೆ. ಬೆಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಜಯಕರ ಎಸ್.ಎಂ. ಮಕ್ಕಳ ಮೇಳ ಉದ್ಘಾಟಿಸುವರು. ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಹಾರ ಮೇಳ ಉದ್ಘಾಟಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅತಿಥಿಗಳಾಗಿರುವರು.
ಮಧ್ಯಾಹ್ನ 3ಕ್ಕೆ ಓದುಗ–ಲೇಖಕರ ‘ಓಲೆ’ ವಿಭಾಗದ ಕಾರ್ಯಕ್ರಮ ನಡೆಯಲಿದೆ. ‘ಪುಸ್ತಕ ಪ್ರಕಟಣೆ ಹೇಗೆ’ ಕಾರ್ಯಾಗಾರ ಹಮ್ಮಿಕೊಳ್ಳಲಾ ಗಿದೆ. ಸಂಜೆ 5.30ಕ್ಕೆ 6 ಕೃತಿಗಳು ಲೋಕಾರ್ಪಣೆ ಗೊಳ್ಳಲಿವೆ. ಸಂಜೆ 6.30ರಿಂದ ‘ಜಾನಪದ ವೈಭವ’ ನಡೆಯಲಿದೆ. ನ.16ರಂದು ಮಧ್ಯಾಹ್ನ 3ಕ್ಕೆ ಓದುಗ–ಲೇಖಕರ ‘ಓಲೆ’ ವಿಭಾಗದ ಕಾರ್ಯಕ್ರಮ ಇರಲಿದೆ. ‘ಕಥೆ ಕಟ್ಟೋಣ ಬನ್ನಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ 5.30ಕ್ಕೆ 6 ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಸಂಜೆ 6.30ಕ್ಕೆ ‘ಭಾವ ಸಂಜೆ’ ನಡೆಯಲಿದೆ.
ನ.17ರಂದು ಬೆಳಿಗ್ಗೆ 11ರಿಂದ ನಾಲ್ಕು ಕೃತಿಗಳು ಬಿಡುಗಡೆಗೊಳ್ಳಲಿವೆ. ಮಧ್ಯಾಹ್ನ 3ಕ್ಕೆ ಮೂರನೇ ದಿನದ ಓದುಗ–ಲೇಖಕರ ‘ಓಲೆ’ ವಿಭಾಗದ ಕಾರ್ಯಕ್ರಮ ನಡೆಯಲಿದೆ. ‘ಕವಿತೆ ಹುಟ್ಟುವ ಸಮಯ’ ಕಾರ್ಯಾಗಾರ ಹಮ್ಮಿ ಕೊಳ್ಳಲಾಗಿದೆ. ಸಂಜೆ 5.30ಕ್ಕೆ 6 ಕೃತಿಗಳ ಲೋಕಾರ್ಪಣೆಗೊಳ್ಳಲಿವೆ. 6.30ರಿಂದ ‘ಸಿನಿಮಾ ಸಂಜೆ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.