ADVERTISEMENT

ವೀರಪ್ಪನ್ ಸಹಚರ ನಿಮ್ಹಾನ್ಸ್‌ನಲ್ಲಿ ಸಾವು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2023, 23:15 IST
Last Updated 17 ಏಪ್ರಿಲ್ 2023, 23:15 IST
   

ಬೆಂಗಳೂರು: ತಮಿಳುನಾಡಿನ ಪಾಲಾರ್​ನಲ್ಲಿ ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ 34 ವರ್ಷಗಳಿಂದ ಮೈಸೂರು ಜೈಲಿನಲ್ಲಿದ್ದ ವೀರಪ್ಪನ್ ಸಹಚರ ಮೀಸೆಕಾರ್ ಮಾದಯ್ಯ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಭಾನುವಾರ ಅಸುನೀಗಿದ್ದಾನೆ.

‘ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಾದಯ್ಯನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನಿಂದ ನಿಮ್ಹಾನ್ಸ್ ಆಸ್ಪತ್ರೆಗೆ ಇತ್ತೀಚೆಗೆ ಸ್ಥಳಾಂತರಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರು ತೀರಿಕೊಂಡಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಸೋಮವಾರ ಹಸ್ತಾಂತರಿಸಲಾಗಿದೆ’ ಎಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೂಲಗಳು ತಿಳಿಸಿವೆ.

‘ಪಾಲಾರ್​ನಲ್ಲಿ 1993ರಲ್ಲಿ ವೀರಪ್ಪನ್ ಹಾಗೂ ಆತನ ಸಹಚರರು ನಡೆಸಿದ್ದ ಬಾಂಬ್ ಸ್ಫೋಟದಲ್ಲಿ ವಿಶೇಷ ಕಾರ್ಯಪಡೆಯ ಅಧಿಕಾರಿ ಗೋಪಾಲಕೃಷ್ಣನ್​ ಸೇರಿದಂತೆ 22 ಮಂದಿ ಮೃತಪಟ್ಟಿದ್ದರು. ಇದೇ ಪ್ರಕರಣದಲ್ಲಿ ಮೀಸೆಕಾರ್ ಮಾದಯ್ಯನನ್ನು ಬಂಧಿಸಲಾಗಿತ್ತು. ಈತನಿಗೆ ಗಲ್ಲು ಶಿಕ್ಷೆಯಾಗಿತ್ತು. ಇದನ್ನು ಪ್ರಶ್ನಿಸಿ ಮಾದಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಿತ್ತು’ ಎಂದು ಹೇಳಿವೆ.

ADVERTISEMENT

ಹಣ ಹೊಂದಿಸಲು ಪರದಾಟ: ‘ಮೀಸೆಗಾರ್ ಮಾದಯ್ಯ ಮೃತದೇಹ ತೆಗೆದುಕೊಂಡು ಹೋಗಲು ತಮಿಳುನಾಡಿನ ಈರೋಡ್‌ನಿಂದ ಸಂಬಂಧಿಕರು ಬಂದಿದ್ದರು. ಆದರೆ, ಮೃತದೇಹ ಸಾಗಿಸಲು ಅಗತ್ಯವಿದ್ದ ಹಣ ಅವರ ಬಳಿ ಇರಲಿಲ್ಲ. ಆಸ್ಪತ್ರೆ ಆವರಣದಲ್ಲಿದ್ದ ಹಲವರ ಬಳಿ ಹಣಕ್ಕಾಗಿ ಬೇಡಿಕೊಂಡರು. ಕೆಲವರು ಹಣದ ಸಹಾಯ ಮಾಡಿದರು. ನಂತರವೇ ಅವರು ಮೃತದೇಹ ಕೊಂಡೊಯ್ದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.