ADVERTISEMENT

ಬೆಂಗಳೂರು: ಪ್ರತಿ ಕೆ.ಜಿ ಶುಂಠಿಗೆ ₹280, ಬಟಾಣಿ ₹180..

ಸ್ಥಿರತೆ ಕಾಯ್ದುಕೊಂಡ ಟೊಮೆಟೊ, ತುಟ್ಟಿಯಾದ ಮೆಣಸಿನಕಾಯಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2023, 15:27 IST
Last Updated 10 ಜುಲೈ 2023, 15:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಳೆ ಕೊರತೆಯಿಂದ ಇಳುವರಿ ಕುಂಠಿತವಾಗಿ ತರಕಾರಿ ಮತ್ತು ಸೊಪ್ಪಿನ ದರಗಳು ದುಪ್ಪಟ್ಟಾಗಿದ್ದು, ಪ್ರತಿ ಕೆ.ಜಿ ಶುಂಠಿ ₹280, ಬಟಾಣಿ ₹180, ಟೊಮೊಟೊ ₹80-100ರಂತೆ ಮಾರಾಟವಾಗುತ್ತಿದೆ.

ಗಗನಕ್ಕೇರಿರುವ ಶುಂಠಿಯ ದರ ಇನ್ನೂ ಇಳಿಕೆಯಾಗಿಲ್ಲ. ಕೆ.ಜಿಗೆ ₹250 ರಿಂದ ₹280ರವರೆಗೂ ಮಾರಾಟವಾಗುತ್ತಿದೆ. ಇದರಿಂದ, ಹೋಟೆಲ್‌ ಉದ್ಯಮಕ್ಕೆ ಶುಂಠಿ ದರ ಏರಿಕೆ ಬಿಸಿ ತಟ್ಟಿದೆ.

‘ಶುಂಠಿ ಬೆಳೆ ನಾಶ, ರೋಗ ಬಾಧೆ, ಇಳುವರಿ ಕುಸಿತ ದರ ಏರಿಕೆಗೆ ಮುಖ್ಯ ಕಾರಣ. ಮಾರುಕಟ್ಟೆಗೆ ಹೊಸದಾಗಿ ಶುಂಠಿ ಪೂರೈಕೆಯಾದರೆ ಮಾತ್ರ ಬೆಲೆ ಇಳಿಕೆಯಾಗುತ್ತದೆ’ ಎಂದು ವ್ಯಾಪಾರಿ ಇಮ್ರಾನ್‌ ತಿಳಿಸಿದರು.

ADVERTISEMENT

ಇಳಿಯದ ಟೊಮೆಟೊ ದರ: ಕಳೆದ ವಾರ ಕೆ.ಜಿ.ಗೆ ₹100ರಿಂದ ₹120ಕ್ಕೆ ಮಾರಾಟವಾಗಿದ್ದ ಟೊಮೆಟೊ ದರ ಈ ವಾರವೂ ಬಹುತೇಕ ಸ್ಥಿರತೆ ಕಾಯ್ದುಕೊಂಡಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹85 ರಿಂದ ₹100ರವರೆಗೆ ಮಾರಾಟವಾಯಿತು. ಕೋಲಾರ ಹಾಗೂ ಚಿಕ್ಕಬಳ್ಳಾಪುರದಿಂದ ಟೊಮೊಟೊ ನಗರಕ್ಕೆ ಬರುತ್ತದೆ. ಅಲ್ಲಿನ ಮಾರುಕಟ್ಟೆಗಳಲ್ಲೂ ಪ್ರತಿ ಕೆ.ಜಿಗೆ ₹80ರಂತೆ ಮಾರಾಟವಾಗುತ್ತಿದೆ. ಅದು ನಗರಕ್ಕೆ ಬಂದಾಗ ಬೆಲೆ ಇನ್ನೂ ಹೆಚ್ಚಾಗುತ್ತದೆ.

‘ಕೆ.ಆರ್‌. ಮಾರುಕಟ್ಟೆಯಲ್ಲಿ ಸೋಮವಾರ ಕೆ.ಜಿ ನುಗ್ಗೆಕಾಯಿಗೆ ₹180, ಮೆಣಸಿನಕಾಯಿ ₹120ರಿಂದ ₹150 ದರ ಇದ್ದರೆ, ಪಡವಲಕಾಯಿ 120, ಬೀನ್ಸ್‌ ₹80, ಕ್ಯಾರೆಟ್‌ ಮತ್ತು ಬದನೆಕಾಯಿ 60ರಂತೆ ಮಾರಾಟವಾಗುತ್ತಿದೆ. ಕೆಲವು ಕಡೆ ಮಳೆ ಕೊರತೆ ಇದ್ದರೆ, ಕೆಲವು ಕಡೆ ಅತಿಯಾದ ಮಳೆಯಿಂದಾಗಿ ತರಕಾರಿ ಬೆಳೆ ಹಾಳಾಗಿದೆ. ಬೆಂಗಳೂರು ನಗರಕ್ಕೆ ಬಹುತೇಕ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ತರಕಾರಿ ಪೂರೈಕೆಯಾಗುತ್ತದೆ. ಆಯಾ ಪ್ರದೇಶಗಳ ಸ್ಥಿತಿಗತಿಗಳ ಆಧಾರದ ಮೇಲೆ ಬೆಲೆಗಳನ್ನು ನಿಗದಿಪಡಿಸಲಾಗುತ್ತದೆ’ ಎಂದು ವ್ಯಾಪಾರಿ ಅಕ್ರಂ, ಸುಭಾಸ್‌ ತಿಳಿಸಿದರು.

ಸೊಪ್ಪಿನ ದರ ಕಡಿಮೆ: ಕಳೆದ ವಾರ ಒಂದು ಕಟ್ಟಿಗೆ ₹40ರಂತೆ ಮಾರಾಟವಾಗುತ್ತಿದ್ದ ಕೊತ್ತಂಬರಿ, ಸದ್ಯ ₹20ರಂತೆ ಮಾರಾಟವಾಗುತ್ತಿದೆ. ಮೆಂತೆ, ಸಬ್ಬಸಿಗೆ ಪ್ರತಿ ಕಟ್ಟಿಗೆ ₹15ರಂತೆ ಮಾರಾಟವಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.