ADVERTISEMENT

₹100ರ ಗಡಿ ದಾಟಿದ ಬೀನ್ಸ್‌, ಕ್ಯಾರೆಟ್‌

ತಾಪಮಾನ ಏರಿಕೆ, ಮಳೆ ಕೊರತೆಯಿಂದ ಗಗನಕ್ಕೇರಿದ ತರಕಾರಿ ದರ

ಖಲೀಲ ಅಹ್ಮದ ಶೇಖ
Published 13 ಜೂನ್ 2023, 20:52 IST
Last Updated 13 ಜೂನ್ 2023, 20:52 IST
.
.   

ಬೆಂಗಳೂರು: ತಾಪಮಾನ ಏರಿಕೆ, ಮಳೆ ಕೊರತೆಯಿಂದಾಗಿ ಇಳುವರಿ ಕುಂಠಿತವಾಗಿ ತರಕಾರಿ ಮತ್ತು ಸೊಪ್ಪಿನ ದರಗಳು ದುಪ್ಪಟ್ಟಾಗಿವೆ. ಬೀನ್ಸ್‌ ಮತ್ತು ಕ್ಯಾರೆಟ್‌ ₹100ರ ಗಡಿ ದಾಟಿದ್ದು, ಗ್ರಾಹಕರಿಗೆ ಹೊರೆಯಾಗಿದೆ.

ಕಳೆದ ವಾರ ರಾಜ್ಯದ ಕೆಲವು ಭಾಗಗಳಲ್ಲಿ ಮುಂಗಾರುಪೂರ್ವ ಮಳೆ ಬಿದ್ದಿದೆ. ಆದರೆ, ಬಿಸಿಲಿನ ತಾಪ ಕಡಿಮೆಯಾಗಿಲ್ಲ. ಈ ಕಾರಣದಿಂದಾಗಿ  ಸಹಜವಾಗಿಯೇ ತರಕಾರಿಗಳ ಇಳುವರಿ ಕಡಿಮೆಯಾಗಿ ಬೆಲೆ ದುಬಾರಿಯಾಗಿದೆ.

‘ತಮಿಳುನಾಡು ಸೇರಿ ಬೇರೆ ರಾಜ್ಯಗಳಲ್ಲಿ ಮಳೆ ಬೀಳದ ಕಾರಣ ಕ್ಯಾರೆಟ್‌ ಪೂರೈಕೆ ಕಡಿಮೆಯಾಗಿದೆ. ಅಲ್ಲಿಂದ ಆವಕವಾಗುತ್ತಿದ್ದ ಕ್ಯಾರೆಟ್‌ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದ ಬೆಲೆ ಹೆಚ್ಚಾಗಿದೆ. ಮದುವೆ ಮೊದಲಾದ ಶುಭ ಸಮಾರಂಭ ಮಾಡುವವರಿಗೆ ಹಾಗೂ ಗ್ರಾಹಕರಿಗೆ ಇದರಿಂದ ಹೆಚ್ಚು ತೊಂದರೆಯಾಗಿದೆ. ಮತ್ತೊಂದೆಡೆ ರೈತರು ಬೆಳೆದ ಫಸಲಿನಲ್ಲಿ ಸಮರ್ಪಕ ಇಳುವರಿ ಬಾರದ ಕಾರಣ ಅವರಿಗೂ ಹೆಚ್ಚಿನ ಲಾಭವಾಗುತ್ತಿಲ್ಲ’ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆಯ ತರಕಾರಿ ವ್ಯಾಪಾರಿಗಳು.‌

ADVERTISEMENT

ಕಳೆದ ವಾರ ಕೆ.ಜಿಗೆ ₹60ಕ್ಕೆ ಮಾರಾಟವಾಗುತ್ತಿದ್ದ ಬೀನ್ಸ್‌, ಕ್ಯಾರೆಟ್‌ ₹100ರ ಗಡಿ ದಾಟಿದೆ. ಪ್ರತಿ ಕೆ.ಜಿ.ಗೆ ₹40ರಂತೆ ಮಾರಾಟವಾಗುತ್ತಿದ್ದ ಹೂಕೋಸು, ಹಾಗಲಕಾಯಿ, ತೊಂಡೆಕಾಯಿ, ಬದನೆಕಾಯಿ, ಕುಂಬಳಕಾಯಿ, ಸೊರೇಕಾಯಿ, ಹಿರೇಕಾಯಿ ₹20 ಹೆಚ್ಚಳವಾಗಿ, ₹60ರಂತೆ ಮಾರಾಟವಾಗುತ್ತಿವೆ.

ಸೊಪ್ಪಿನ ದರ ಹೆಚ್ಚಳ: ಕಳೆದ ವಾರ ಒಂದು ಕಟ್ಟಿಗೆ ₹10ರಂತೆ ಮಾರಾಟವಾಗುತ್ತಿದ್ದ ಕೊತ್ತಂಬರಿ, ಸದ್ಯ ₹40ರಂತೆ ಮಾರಾಟವಾಗುತ್ತಿದೆ. ಮೆಂತೆ, ಸಬ್ಬಸಿಗೆ ಪ್ರತಿ ಕಟ್ಟಿಗೆ ₹20ರಂತೆ ಮಾರಾಟವಾಗುತ್ತಿವೆ.

‘ಪ್ರತಿ ಕೆ.ಜಿ. ಪಡವಲಕಾಯಿ ₹80, ಟೊಮೆಟೊ ದರದಲ್ಲಿ ₹20 ಹೆಚ್ಚಾಗಿದ್ದು, ₹40ರಂತೆ ಮಾರಾಟವಾಗುತ್ತಿದೆ. ಕಳೆದ ವಾರದಂತೆ ಅಗತ್ಯ ಪ್ರಮಾಣದ ತರಕಾರಿಗಳು ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ಮುಂದಿನ ವಾರ ಮತ್ತೆ ತರಕಾರಿ ದರಗಳು ಸ್ಥಿರತೆ ಕಾಣಲಿದ್ದು, ಅಲ್ಲಿಯವರೆಗೆ ದರ ಏರಿಕೆ ತಪ್ಪಿದ್ದಲ್ಲ’ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆಯ ತರಕಾರಿ ವ್ಯಾಪಾರಿಗಳಾದ ಅಕ್ರಮ್‌, ಮಂಜುನಾಥ್ ಮತ್ತು ಕುಮಾರ್‌.

.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.