ADVERTISEMENT

ಬೆಂಗಳೂರಿನ ವೆಂಕಟಪ್ಪ ಕಲಾ ಗ್ಯಾಲರಿ 9 ತಿಂಗಳಲ್ಲಿ ನವೀಕರಣದ ಭರವಸೆ

'ಸ್ಮಾರಕ ದತ್ತು’ ಯೋಜನೆಯಡಿ ಬ್ರಿಗೇಡ್ ಫೌಂಡೇಷನ್ ಕ್ರಮ

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 14:35 IST
Last Updated 17 ಜನವರಿ 2024, 14:35 IST
ನವೀಕರಣಗೊಳ್ಳಲಿರುವ ವೆಂಕಟಪ್ಪ ಕಲಾ ಗ್ಯಾಲರಿಯ ನೀಲ ನಕ್ಷೆ
ನವೀಕರಣಗೊಳ್ಳಲಿರುವ ವೆಂಕಟಪ್ಪ ಕಲಾ ಗ್ಯಾಲರಿಯ ನೀಲ ನಕ್ಷೆ   

ಬೆಂಗಳೂರು: ನಿರ್ವಹಣೆ ಕೊರತೆಯಿಂದ ಕಳೆಗುಂದಿದ್ದ ಕಸ್ತೂರ ಬಾ ರಸ್ತೆಯಲ್ಲಿರುವ ವೆಂಕಟಪ್ಪ ಕಲಾ ಗ್ಯಾಲರಿ, ಮುಂದಿನ ಒಂಬತ್ತು ತಿಂಗಳಲ್ಲಿ ಆಧುನಿಕ ಸ್ಪರ್ಶದೊಂದಿಗೆ ಕಲಾ ಪ್ರಪಂಚಕ್ಕೆ ತೆರೆದುಕೊಳ್ಳಲಿದೆ. ‘ಸ್ಮಾರಕ ದತ್ತು’ ಯೋಜನೆಯಡಿ ಬ್ರಿಗೇಡ್ ಫೌಂಡೇಷನ್ ಈ ಕಟ್ಟಡದ ನವೀಕರಣ ಕಾಮಗಾರಿ ಕೈಗೆತ್ತಿಕೊಂಡಿದೆ. 

ಗ್ಯಾಲರಿಯ ಆವರಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ನವೀಕರಣ ಕಾಮಗಾರಿಯ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಅಡಿ ಫೌಂಡೇಷನ್ ₹ 5 ಕೋಟಿಯಲ್ಲಿ ನವೀಕರಣ ಕಾರ್ಯವನ್ನು ಫೆಬ್ರವರಿಯಲ್ಲಿ ಪ್ರಾರಂಭಿಸಲಿದ್ದು, ಈ ವರ್ಷದ ದಸರಾದೊಳಗೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದೆ. 

ನವೀಕರಣ ಕಾರ್ಯಯೋಜನೆಯ ನೀಲ ನಕ್ಷೆಯನ್ನು ವೀಕ್ಷಿಸಿ ಮಾತನಾಡಿದ ಎಚ್.ಕೆ. ಪಾಟೀಲ, ‘ರಾಜ್ಯದಲ್ಲಿ ಸುಮಾರು 25 ಸಾವಿರ ಸ್ಮಾರಕಗಳಿವೆ. ಇವುಗಳಲ್ಲಿ ಸುಮಾರು 800 ಸ್ಮಾರಕಗಳನ್ನು ಗುರುತಿಸಲಾಗಿದ್ದು, 500 ಸ್ಮಾರಕಗಳನ್ನು ಮಾತ್ರ ಸಂರಕ್ಷಣೆ ಮಾಡಲಾಗಿದೆ. ಇವುಗಳಿಗೆ ಮೂಲಸೌಕರ್ಯ ಒದಗಿಸಲು ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಡಿ ‘ಸ್ಮಾರಕ ದತ್ತು’ ಯೋಜನೆ ಆರಂಭಿಸಿದ್ದು, ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸ್ಮಾರಕಗಳ ಸಂರಕ್ಷಣೆ ಸರ್ಕಾರದ ಕೆಲಸವೆಂದು ಸುಮ್ಮನಾಗದೆ, ಸಮಾಜವೂ ಕೈಜೋಡಿಸಬೇಕು’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿರುವ ಸ್ಮಾರಕಗಳಲ್ಲಿ ಶೇ 50ರಷ್ಟು ಸ್ಮಾರಕಗಳನ್ನಾದರೂ ಮುಂದಿನ ಐದು ವರ್ಷಗಳಲ್ಲಿ ಸಂರಕ್ಷಣೆ ಮಾಡಬೇಕು. ದತ್ತು ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಥೆಗಳು ಮುಂದೆ ಬಂದರೆ ಅದು ಸಾಧ್ಯವಾಗುತ್ತದೆ. ಮುಂದಿನ ಮೂರು ವರ್ಷಗಳಲ್ಲಿ 5 ಸಾವಿರ ಸ್ಮಾರಕಗಳಿಗೆ ಮೂಲಸೌಕರ್ಯ ಒದಗಿಸುವ ಚಿಂತನೆಯಿದೆ. ಐಹೊಳೆಯಲ್ಲಿ ಚಾಲುಕ್ಯರಿಗೆ ಸಂಬಂಧಿಸಿದ 125 ಸ್ಮಾರಕಗಳಿವೆ. ಇಲಾಖೆ ವ್ಯಾಪ್ತಿಯಲ್ಲಿ 75 ಸ್ಮಾರಕಗಳಿವೆ. ಕೆಲವು ಪಾಳುಬಿದ್ದು, ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿದ್ದವು. ಇದನ್ನು ಗಮನಿಸಿ, ಐಹೊಳೆಯಲ್ಲಿನ ಸ್ಮಾರಕಗಳಿಗೆ ಅಗತ್ಯ ಸೌಕರ್ಯ ಒದಗಿಸಿ, ಪ್ರವಾಸಿಗರನ್ನು ಆಕರ್ಷಿಸಲು ಕ್ರಮವಹಿಸಲಾಗಿದೆ’ ಎಂದು ತಿಳಿಸಿದರು.

ಪರಂಪರೆಗೆ ಕೊಡುಗೆ: ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ. ಫಾಹಿಮ್, ‘ಕಲಾವಿದ ವೆಂಕಟಪ್ಪ ಅವರು ರಾಜ್ಯದ ಕಲಾ ಪರಂಪರೆಗೆ ಅಚ್ಚಳಿಯದ ಕೊಡುಗೆ ನೀಡಿದ್ದಾರೆ. ಅವರ ಹೆಸರಿನಲ್ಲಿರುವ ಈ ಗ್ಯಾಲರಿಯನ್ನು ಜೀರ್ಣೋದ್ಧಾರ ಮಾಡುತ್ತಿರುವುದು ಪರಂಪರೆ ಉಳಿಸುವ ಗಮನಾರ್ಹ ಹೆಜ್ಜೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಬ್ರಿಗೇಡ್ ಫೌಂಡೇಷನ್ ಟ್ರಸ್ಟಿ ಎಂ.ಆರ್. ಜೈಶಂಕರ್, ‘ಕಲಾವಿದರು ಹಾಗೂ ಕಲಾರಸಿಕರಿಗೆ ವೆಂಕಟಪ್ಪ ಕಲಾ ಗ್ಯಾಲರಿ ನೆಚ್ಚಿನ ತಾಣ. ಅಗತ್ಯ ಮೂಲ ಸೌಕರ್ಯ ಇಲ್ಲದಿರುವುದರಿಂದ ಕಲಾ ಚಟುವಟಿಕೆಗಳು ಇಲ್ಲಿ ಕಡಿಮೆಯಾಗಿವೆ. ಹೀಗಾಗಿ, ನವೀಕರಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಮುಂಬರುವ ದಸರಾದೊಳಗೆ ಅಗತ್ಯ ಸೌಕರ್ಯಗಳನ್ನು ಒದಗಿಸುತ್ತೇವೆ. ಇಲ್ಲಿ ಉತ್ತಮ ಸ್ಥಳಾವಕಾಶವಿದ್ದು, ಕಲಾಕೃತಿಗಳ ರಚನೆ ಸೇರಿ ವಿವಿಧ ಕಲಾ ಚಟುವಟಿಕೆಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತದೆ. ಎಲಿವೇಟರ್ ಅಳವಡಿಕೆ, ಕಾಫಿ ಶಾಪ್‌ ನಿರ್ಮಾಣ ಸೇರಿ ವಿವಿಧ ವ್ಯವಸ್ಥೆ ಕಲ್ಪಿಸುವುದು ಕಾರ್ಯಯೋಜನೆಯಲ್ಲಿದೆ. ಹೆಚ್ಚಿನ ಅನುದಾನ ಅಗತ್ಯವಿದ್ದರೆ ಅದನ್ನು ಭರಿಸಲಾಗುವುದು. ನವೀಕರಣ ಕಾರ್ಯ ಪೂರ್ಣಗೊಂಡ ಬಳಿಕ ಸರ್ಕಾರಕ್ಕೆ ಹಸ್ತಾಂತರಿಸಲಾಗುತ್ತದೆ’ ಎಂದು ವಿವರಿಸಿದರು.

ಗ್ಯಾಲರಿ ನವೀಕರಣದ ಶಿಲಾನ್ಯಾಸವನ್ನು ಎಚ್‌.ಕೆ. ಪಾಟೀಲ ನೆರವೇರಿಸಿದರು. ಎಂ.ಆರ್. ಜೈಶಂಕರ್ ಸಲ್ಮಾ ಕೆ. ಫಾಹಿಮ್ ಕಲಾ ವಿಮರ್ಶಕ ಕೃಷ್ಣ ಸೆಟ್ಟಿ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.