ಯಲಹಂಕ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ವೆಂಕಟೇಶಪುರ ಗ್ರಾಮದ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ‘ಕ್ಷೇತ್ರವ್ಯಾಪ್ತಿಯಲ್ಲಿ ನಿರಂತರವಾಗಿ ಕೆರೆಗಳ ಪುನಶ್ಚೇತನ ಕಾರ್ಯ ಮಾಡಲಾಗುತ್ತಿದೆ. ಇದರ ಭಾಗವಾಗಿ ಎರಡು ವರ್ಷಗಳಿಂದ ವೆಂಕಟೇಶಪುರ ಕೆರೆಯ ಪುನರುಜ್ಜೀವನ ಕೆಲಸವು ನಡೆದಿದೆ’ ಎಂದರು.
‘ಸದ್ಯ ಈ ಕೆರೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ನೀರು ನಿಲ್ಲುವಂತೆ ಮಾಡಲಾಗಿದೆ. ಮೊದಲು 6 ಎಕರೆ ವಿಸ್ತೀರ್ಣವಿದ್ದ ಕೆರೆಯನ್ನು ಪಕ್ಕದಲ್ಲಿದ್ದ ಬಿಡಿಎ ಮತ್ತು ಸರ್ಕಾರಕ್ಕೆ ಸೇರಿದ ಜಾಗವನ್ನು ಬಳಸಿಕೊಂಡು, 13 ಎಕರೆ ವಿಸ್ತೀರ್ಣದ ದೊಡ್ಡ ಕೆರೆಯಾಗಿಸಿ ಮೇಲ್ದರ್ಜೆಗೇರಿಸಲಾಗಿದೆ’ ಎಂದು ವಿವರಿಸಿದರು.
‘ಸ್ಥಳೀಯ ಜನರ ವಾಯುವಿಹಾರಕ್ಕೆ ಅನುಕೂಲವಾಗುವಂತೆ ನಡಿಗೆ ಪಥ, ಖಾಸಗಿಯವರ ಸಹಕಾರದೊಂದಿಗೆ ಬಟರ್ ಫ್ಲೈ ಉದ್ಯಾನ, ಮಕ್ಕಳಿಗೆ ಆಟದ ಮೈದಾನ ಸೇರಿದಂತೆ ಕೆರೆಯ ಅಭಿವೃದ್ಧಿಯ ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸೌಕರ್ಯಗಳನ್ನು ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ‘ ಎಂದರು.
‘ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಈ ದಿಸೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ಮಕ್ಕಳಿಂದ ಕೆರೆಯ ಸುತ್ತಲೂ ಸಸಿನೆಡುವ ಕಾರ್ಯವನ್ನು ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಶೇಷಾದ್ರಿ, ಕಾಂಗ್ರೆಸ್ ಮುಖಂಡರಾದ ಟಿ.ವೆಂಕಟರಾಮರೆಡ್ಡಿ, ಎಚ್.ಎ.ಶಿವಕುಮಾರ್, ಚಂದನ್.ಜೆ.ಎ, ವಿ.ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.