ಬೆಂಗಳೂರು: ಸುಸಜ್ಜಿತ ಆಸನಗಳು, ಬಿಸಿಲಿನ ತಾಪದಿಂದ ರಕ್ಷಣೆ ನೀಡಲು ಸೂರಿನ ವ್ಯವಸ್ಥೆ, ರಾತ್ರಿ ವೇಳೆ ಬೆಳಕಿನ ಸೌಲಭ್ಯ... ಮುಂತಾದ ಸೌಕರ್ಯಗಳಿರುವ ಪ್ರಯಾಣಿಕರ ತಂಗುದಾಣವಿದು. ಆದರೂ ಬಳಕೆಯಾಗದೇ ಈ ನಿಲ್ದಾಣ ಪಾಳುಬಿದ್ದಿದೆ.
ಹೆಬ್ಬಾಳ ಸಮೀಪದ ವೆಟರಿನರಿ ಕಾಲೇಜಿನ ಬಳಿಯ ಪ್ರಯಾಣಿಕರ ತಂಗುದಾಣದ ಸ್ಥಿತಿ ಇದು. ಈ ತಂಗುದಾಣದ ಬಳಕೆಗೆ ಪ್ರಯಾಣಿಕರು ಆಸಕ್ತಿ ವಹಿಸುತ್ತಿಲ್ಲ. ಹಾಗಾಗಿ ಇದರ ಎದುರೇ ಕಸದ ರಾಶಿ ಬಿದ್ದಿದೆ.
ನಗರದ ಬಳ್ಳಾರಿ ರಸ್ತೆಯಸಿಬಿಐ ಕಚೇರಿ ಹಾಗೂ ಹೆಬ್ಬಾಳದ ನಡುವೆ ಎರಡೂ ಬದಿಯಲ್ಲಿ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಇಲ್ಲಿಗೆ ಸಮೀಪದಲ್ಲೇ ವೆಟರಿನರಿ ಕಾಲೇಜು ಇರುವುದರಿಂದ ಈ ತಂಗುದಾಣಗಳನ್ನು ಜನ ‘ವೆಟರಿನರಿ ಕಾಲೇಜು ಬಸ್ ನಿಲ್ದಾಣ’ ಎಂದೇ ಕರೆಯುತ್ತಾರೆ.
ವೆಟರಿನರಿ ಆಸ್ಪತ್ರೆ ಎದುರಿನ ನಿಲ್ದಾಣದ ಬಳಿ ಹೆಬ್ಬಾಳ ಕಡೆಯಿಂದ ಬರುವ ಯಾವ ಬಸ್‌ಗಳೂ ನಿಲ್ಲುವುದಿಲ್ಲ. ಈ ನಿಲ್ದಾಣದ ಮುಂಭಾಗದಲ್ಲಿ ರೋಡ್‌ರೋಲರ್, ಟ್ಯಾಕ್ಸಿ, ಶಾಲಾ ಕಾಲೇಜುಗಳ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತದೆ. ನಿಲ್ದಾಣದ ಅರ್ಧಭಾಗವನ್ನು ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ಬಳಸಿಕೊಳ್ಳಲಾಗಿದೆ. ಬಸ್ ನಿಲ್ಲಬೇಕಾದ ಸ್ಥಳದಲ್ಲಿಕಸವನ್ನು ಹಾಗೂ ಕಟ್ಟಡ ತ್ಯಾಜ್ಯವನ್ನು ರಾಶಿ ಹಾಕಲಾಗಿದೆ. ಹಾಗಾಗಿ ಜನ ಈ ತಂಗುದಾಣವನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ.
ವಾಹನ ನಿಲುಗಡೆ ನಿಷೇಧದ ಸ್ಥಳದಿಂದ ಎತ್ತಿಕೊಂಡು ಬರುವ ವಾಹನಗಳ ನಿಲುಗಡೆಗಾಗಿ ಸಂಚಾರ ಪೊಲೀಸರು ಈ ಜಾಗ ಬಳಸುತ್ತಿದ್ದಾರೆ.
‘ಇಲ್ಲ ಬಳಿ ಬಸ್ ನಿಲುಗಡೆಗೆ ವಿಸ್ತಾರ ಪ್ರದೇಶ ಲಭ್ಯ ಇದೆ. ಪ್ರಯಾಣಿಕರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇಲ್ಲೊಂದು ಸ್ಕೈವಾಕ್ ನಿರ್ಮಾಣವಾದರೆ ಪ್ರಯಾಣಿಕರು ರಸ್ತೆ ದಾಟುವುದಕ್ಕೆ ಅನುಕೂಲವಾಗಲಿದೆ. ಎಲ್ಲ ಬಸ್‌ಗಳು ಇಲ್ಲಿ ನಿಲುಗಡೆಯಾದರೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ತಂಗುದಾಣ ಬಳಸುತ್ತಾರೆ’ ಎಂದು ಗಂಗಾನಗರ ನಿವಾಸಿ ಸೆಲ್ವ ಸಲಹೆ ನೀಡುತ್ತಾರೆ.
‘ಸಂಚಾರ ದಟ್ಟಣೆ ಕಡಿಮೆಯಾಗಲಿದೆ’
‘ಇಲ್ಲಿಂದ ಕೂಗಳತೆ ದೂರದಲ್ಲಿರುವ ಸಿಬಿಐ ಕಚೇರಿ ಹಾಗೂ ಮೇಖ್ರಿ ವೃತ್ತದ ಬಳಿಯ ನಿಲ್ದಾಣಗಳಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಾಗಿ ಕಾಯುತ್ತಿರುತ್ತಾರೆ. ಇದರಿಂದ ಮೇಖ್ರಿ ವೃತ್ತದ ಬಳಿ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ವೆಟರಿನರಿ ಬಸ್ ನಿಲ್ದಾಣದಲ್ಲಿ ಬಸ್‌ಗಳು ಸಮರ್ಪಕವಾಗಿ ನಿಲುಗಡೆ ನೀಡಿದರೆ ಕೆಲವು ಪ್ರಯಾಣಿಕರು ಇಲ್ಲಿಗೆ ಬರುತ್ತಾರೆ. ಇದರಿಂದ ವಾಹನ ದಟ್ಟನೆ ಕಡಿಮೆಯಾಗಲಿದೆ’ ಎನ್ನುವುದು ಸ್ಥಳೀಯ ನಿವಾಸಿ ಸಂತೋಷ್ ಅವರ ಸಲಹೆ.
***
ತಂಗುದಾಣ ನಿರ್ಮಾಣಕ್ಕಾಗಿ ಲಕ್ಷಗಟ್ಟಲೆ ವ್ಯಯಿಸಲಾಗಿದೆ. ಇಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಖಾಸಗಿಯವರು ವಾಹನ ನಿಲ್ಲಿಸದಂತೆ ತಡೆಯಬೇಕು.
- ಮುನಿ, ಸ್ಥಳೀಯ
ಬಸ್ ನಿಲ್ಲಿಸದ ಬಗ್ಗೆ ಸಾರ್ವಜನಿಕರು ಈಗಾಗಲೇ ನಿಗಮಕ್ಕೆ ದೂರು ನೀಡಿದ್ದಾರೆ. ಇಲ್ಲಿ ಬಸ್ ನಿಲ್ಲಿಸುವಂತೆ ಬಿಎಂಟಿಸಿ ಬಸ್ ಚಾಲಕರಿಗೆ ಸೂಚನೆ ನೀಡುತ್ತೇವೆ.
- ಬಿಎಂಟಿಸಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.