ಬೆಂಗಳೂರು: ‘ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲಿಯೇ ಇರಬೇಕು. ಮಾತೃ ಭಾಷೆ ಕಣ್ಣು ಇದ್ದಂತೆ. ಇತರ ಭಾಷೆಗಳು ಕನ್ನಡಕ ಇದ್ದಂತೆ’ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದರು.
ಮೌಂಟ್ ಕಾರ್ಮೆಲ್ ಕಾಲೇಜಿನ ಅಮೃತ ಮಹೋತ್ಸವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದ ಅವರು, ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮಾತೃಭಾಷೆಯಲ್ಲಿ ಕಲಿಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ’ ಎಂದರು.
‘ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯದಿದ್ದರೆ ಬದುಕಿನಲ್ಲಿ ಸಾಧನೆ ಸಾಧ್ಯ ಇಲ್ಲ ಎನ್ನುವುದು ತಪ್ಪು ಕಲ್ಪನೆ. ನಮ್ಮ ರಾಷ್ಟ್ರಪತಿ ಹಳ್ಳಿಯಲ್ಲಿ ಓದಿವರು. ಪ್ರಧಾನಿ, ಮುಖ್ಯ ನ್ಯಾಯಮೂರ್ತಿ ಕಾನ್ವೆಂಟ್ ನೋಡಿದವರಲ್ಲ. ಹಾಗೆಂದು, ಇತರ ಭಾಷೆಗಳನ್ನು ಕಲಿಯಬಾರದು ಎಂದಲ್ಲ. ಸಂವಹನಕ್ಕೆ ಇತರ ಭಾಷೆಗಳೂ ಬೇಕಿದೆ’ ಎಂದರು.
‘ಗುರಿ ನೆಟ್ಟು ಹೆಚ್ಚಿನ ಪರಿಶ್ರಮದಿಂದ ಸಾಧನೆ ಸಾಧ್ಯ. ಶಿಸ್ತು ಅಗತ್ಯ. ನಾಲ್ಕು ‘ಸಿ’ಗಳು (ಕ್ಯಾರೆಕ್ಟರ್, ಕೆಪೆಸಿಟಿ, ಕಾಂಡಕ್ಟ್, ಕೆರಿಯರ್) ಇರಬೇಕು. ಆದರೆ, ಈಗ ಕಾಸ್ಟ್, ಕಮ್ಯುನಲ್, ಕ್ಯಾಷ್, ಕ್ರಿಮಿನಾಲಿಟಿ ಮುನ್ನಲೆಗೆ ಬಂದಿದೆ. ನಿಷ್ಪಕ್ಷಪಾತ ಮತ್ತು ಸಮ ಸಮಾಜ ನಿರ್ಮಿಸಲು ಶಿಕ್ಷಣ ಅತ್ಯಂತ ಶಕ್ತಿಶಾಲಿ ಸಾಧನ’ ಎಂದರು.
‘ಮಹಿಳಾ ವಿಮೋಚನೆಗೆ ಅಡ್ಡಿಯಾಗಿರುವ ಅಡೆತಡೆಗಳನ್ನು ತೆಗೆದುಹಾಕಬೇಕು. ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು’ ಎಂದ ಅವರು, ಶಿಕ್ಷಣದ ಮೂಲಕ ಮಹಿಳಾ ವಿಮೋಚನೆಗೆ ಒತ್ತು ನೀಡಿದ ವೀರಶೈವ ಚಳುವಳಿಯನ್ನು ಶ್ಲಾಘಿಸಿದರು.
ಅಮೃತ ಮಹೋತ್ಸವದ ಸ್ಮರಣಾರ್ಥ ಅಂಚೆ ಇಲಾಖೆ ಹೊರ ತಂದ ವಿಶೇಷ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ರಾಜ್ಯಪಾಲ ಥಾವರಚಂದ್ ಗೆಹಲೋತ್, ಗೋವಾದ ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವಾ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಲಿಂಗರಾಜ ಗಾಂಧಿ, ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್, ಬೆಂಗಳೂರಿನ ಆರ್ಚ್ ಬಿಷಪ್ ಪೀಟರ್ ಮಚಾಡೊ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.