ADVERTISEMENT

ಪಾರಂಪರಿಕ ಕಟ್ಟಡಕ್ಕೆ ಧಕ್ಕೆ: ಕಳವಳ

ವಿಕ್ಟೋರಿಯಾ ಆಸ್ಪತ್ರೆ: ಒಳರೋಗಿ ಕಟ್ಟಡ ನಿರ್ಮಾಣ ಯೋಜನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 20:30 IST
Last Updated 12 ಡಿಸೆಂಬರ್ 2019, 20:30 IST
ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿರುವ ಸ್ಥಳದಲ್ಲಿ ಹಳೆಯ ಕಟ್ಟಡವನ್ನು ಒಡೆದಿರುವುದು – ಪ್ರಜಾವಾಣಿ ಚಿತ್ರ
ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿರುವ ಸ್ಥಳದಲ್ಲಿ ಹಳೆಯ ಕಟ್ಟಡವನ್ನು ಒಡೆದಿರುವುದು – ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗಲಿರುವ ಸಾವಿರ ಹಾಸಿಗೆ ಸಾಮರ್ಥ್ಯದ ಒಳರೋಗಿ ಕಟ್ಟಡದಿಂದ ಶತಮಾನದಷ್ಟು ಹಳೆಯದಾದ ಪಾರಂಪರಿಕ ಕಟ್ಟಡಕ್ಕೆ ಹಾನಿಯಾಗಿದೆ. ಈಗಾಗಲೇ ಆಸ್ಪತ್ರೆಯ ಕಟ್ಟಡದ ಒಂದು ಭಾಗವನ್ನು ಕೆಡವಲಾಗಿದೆ.

₹ 68.53 ಕೋಟಿ ವೆಚ್ಚದಲ್ಲಿ 2 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ 11 ಮಹಡಿಗಳ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು. ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳ ಹಳೆಯ ಕಟ್ಟಡಕ್ಕೆ ಹೊಂದಿಕೊಂಡಿದೆ. ಹೀಗಾಗಿ ಹಳೆ ಕಟ್ಚಡದ ಕೆಲ ಭಾಗಗಳನ್ನು ಕೆಡವಲು ಎಂಜಿನಿಯರ್‌ಗಳು ಯೋಜನೆ ರೂಪಿಸಿದ್ದಾರೆ. ಬೆಂಗ
ಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

‘ಹಳೆಯ ಕಟ್ಟಡವನ್ನು ಹಲವಾರು ಬಾರಿ ದುರಸ್ತಿ ಮಾಡಿದರೂ ಮಳೆಗಾಲದಲ್ಲಿ ಸೋರುತ್ತಿತ್ತು. ಆಸ್ಪತ್ರೆಯ ಮಹಡಿಯ ಮೇಲ್ಪದರ ಕೂಡ ಉದುರುತ್ತಿತ್ತು. ಇದರಿಂದಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಈ ಸ್ಥಳದಲ್ಲಿ ರೋಗಿಗಳಿಗೆ ಸೋಂಕು ತಗುಲುವ ಭೀತಿ ಕೂಡ ಎದುರಾಗಿತ್ತು. ಹಾಗಾಗಿ, ಕಟ್ಟಡದ ಕೆಲ ಭಾಗಗಳನ್ನು ಒಡೆಯುವುದು ಅನಿವಾರ್ಯ’ ಎಂದು ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.

ADVERTISEMENT

ಪಾರಂಪರಿಕ ಕಟ್ಟಡ ಉಳಿಸಿ

‘ಪಾರಂಪರಿಕ ಕಟ್ಟಡವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಕಟ್ಟಡದ ರಚನೆಯನ್ನು ಸರಿಪಡಿಸಲು ಪರಿಣತಿ ಹೊಂದಿದ ವಾಸ್ತುಶಿಲ್ಪಿಗಳು ನಗರದಲ್ಲಿ ಇದ್ದಾರೆ. ದುರಸ್ತಿ ಮಾಡಿಸಲು ವೆಚ್ಚ ಸ್ವಲ್ಪ ಜಾಸ್ತಿಯಾಗಬಹುದು. ಆದರೆ, ಅಸಾಧ್ಯ ಎಂದು ಹೇಳಲು ಸಾಧ್ಯವಿಲ್ಲ. ಪಾರಂಪರಿಕ ಕಟ್ಟಡಗಳ ಮೇಲೆ ದಾಳಿ ನಡೆಯುತ್ತಲೇ ಇದೆ’ ಎಂದು ‘ಹೆರಿಟೇಜ್ ಬೇಕು’ ಸಂಘಟನೆಯ ಸಂಸ್ಥಾಪಕಿ ಪ್ರಿಯಾ ಚೆಟ್ಟಿ ರಾಜ್‌ಗೋಪಾಲ್ ಬೇಸರ ವ್ಯಕ್ತಪಡಿಸಿದರು.

‘ಪಾರಂಪರಿಕ ಕಟ್ಟಡಗಳಿಗೆ ಹಾನಿ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ಬಲಗೊಳಿಸಿ, ಪರಿಣಾಮಕಾರಿ
ಯಾಗಿ ಅನುಷ್ಠಾನ ಮಾಡಲು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಇನ್ನೊಂದೆಡೆ, ನಗರದಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಒಂದೊಂದಾಗಿ ನೆಲಸಮ ಮಾಡಲಾಗುತ್ತಿದೆ. ಈಗ ಸರ್ಕಾರಿ ಕಟ್ಟಡವನ್ನೇ ನೆಲಸಮ ಮಾಡಲಾ‌ಗುತ್ತಿದೆ’ ಎಂದು ವಾಸ್ತುಶಿಲ್ಪಿ ನರೇಶ್ ನರಸಿಂಹನ್ ತಿಳಿಸಿದರು.

ಈ ಬಗ್ಗೆ ಬಿಎಂಸಿಆರ್‌ಐ ಡೀನ್ ಡಾ.ಸಿ.ಆರ್. ಜಯಂತಿ ಪ್ರತಿಕ್ರಿಯಿಸಲು ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.