ADVERTISEMENT

ವಿಕ್ಟೋರಿಯಾ: ಗಡುವು ಮುಗಿದರೂ ಸೇವೆಯಿಲ್ಲ

ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಸಾವಿರ ಹಾಸಿಗೆಗಳ ಕಟ್ಟಡ ನಿರ್ಮಾಣ ಕಾಮಗಾರಿ

ವರುಣ ಹೆಗಡೆ
Published 20 ಜುಲೈ 2023, 20:39 IST
Last Updated 20 ಜುಲೈ 2023, 20:39 IST
ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಸಾವಿರ ಹಾಸಿಗೆಗಳ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ –ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್‌.ಜಿ.
ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಸಾವಿರ ಹಾಸಿಗೆಗಳ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ –ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್‌.ಜಿ.   

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ತಲೆಯೆತ್ತುತ್ತಿರುವ ಸಾವಿರ ಹಾಸಿಗೆಗಳ 11 ಮಹಡಿಗಳ ಕಟ್ಟಡ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ನಾಲ್ಕು ವರ್ಷಗಳಾದರೂ ಕಟ್ಟಡ ಸೇವೆಗೆ ಅಣಿಗೊಂಡಿಲ್ಲ.

ನಗರದ ಅತೀ ದೊಡ್ಡ ಆಸ್ಪತ್ರೆಗಳಲ್ಲಿ ಒಂದಾದ ವಿಕ್ಟೋರಿಯಾಕ್ಕೆ ಹೊರರಾಜ್ಯಗಳಿಂದಲೂ ರೋಗಿಗಳು ಬರುತ್ತಾರೆ. ಪ್ರತಿನಿತ್ಯ ಸಾವಿರಕ್ಕೂ ಅಧಿಕ ಮಂದಿ ಹೊರರೋಗಿಗಳಾಗಿ ಭೇಟಿ ನೀಡುತ್ತಾರೆ. 500ಕ್ಕೂ ಅಧಿಕ ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ. ಗುಣಮಟ್ಟದ ವೈದ್ಯಕೀಯ ಸೇವೆಗೆ ಹೆಸರಾಗಿರುವುದರಿಂದ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಹೀಗಾಗಿ, ಆಸ್ಪತ್ರೆಯ ಆವರಣದಲ್ಲಿ 2 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಸಾವಿರ ಹಾಸಿಗೆಗಳ ಕಟ್ಟಡ ನಿರ್ಮಿಸಲಾಗುತ್ತಿದೆ. ಇದನ್ನು 2021ರೊಳಗೆ ಪೂರ್ಣಗೊಳಿಸಿ, ಸೇವೆ ಪ್ರಾರಂಭಿಸಲು ಈ ಹಿಂದಿನ ಸರ್ಕಾರ ಗಡುವು ನೀಡಿತ್ತು. ಆದರೆ, ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಈವರೆಗೂ ಪೂರ್ಣಗೊಳಿಸಿಲ್ಲ. ಇದರಿಂದ ರೋಗಿಗಳ ಚಿಕಿತ್ಸೆಗೆ ಸಮಸ್ಯೆಯಾಗಿದೆ. 

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ಅಡಿ ಕಾರ್ಯನಿರ್ವಹಿಸುವ ಈ ಆಸ್ಪತ್ರೆಯು, ದೇಶದ ಅತ್ಯಂತ ಹಳೆಯ ಆಸ್ಪತ್ರೆಗಳಲ್ಲಿ ಒಂದಾಗಿದೆ. ₹ 68.53 ಕೋಟಿ ವೆಚ್ಚದಲ್ಲಿ ಕೈಗೊಂಡ 11 ಮಹಡಿಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ 2019ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. 2020ರಲ್ಲಿ ಕೋವಿಡ್ ಕಾಣಿಸಿಕೊಂಡಿದ್ದರಿಂದ ಕೆಲ ಅವಧಿ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಬಳಿಕ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದರಿಂದ ಕಾಮಗಾರಿ ಕುಂಟುತ್ತಾ ಸಾಗಿತ್ತು. ಇದರಿಂದಾಗಿ ಗಡುವು ಮುಗಿದರೂ ಕಟ್ಟಡ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬೇಕೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ADVERTISEMENT

ಚಿಕಿತ್ಸೆಗೆ ಕಾಯಬೇಕಾದ ಸ್ಥಿತಿ: ‘ಖಾಸಗಿ ಆಸ್ಪತ್ರೆಯಲ್ಲಿ ಸಾವಿರಾರು ರೂಪಾಯಿ ಪಾವತಿಸಬೇಕಾದ ಚಿಕಿತ್ಸೆ ಇಲ್ಲಿ ಉಚಿತವಾಗಿ ಸಿಗುತ್ತಿದೆ. ಆದರೆ, ದಾಖಲಾತಿ ಹಾಗೂ ವೈದ್ಯರ ಭೇಟಿಗೆ ದಿನವಿಡೀ ಕಾಯಬೇಕಾದ ಸ್ಥಿತಿಯಿದೆ. ದೂರದ ಊರುಗಳಿಂದ ಬಂದವರಿಗೆ ಸಮಸ್ಯೆ ಆಗುತ್ತಿದೆ. ಆದ್ದರಿಂದ ಆದಷ್ಟು ಬೇಗ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ, ಚಿಕಿತ್ಸೆ ಪ್ರಾರಂಭಿಸಬೇಕು’ ಎನ್ನುವುದು ರೋಗಿಗಳ ಆಗ್ರಹ.   

‘ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಆದರೆ, ದಾಖಲಾತಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಮುಂಜಾನೆಯೇ ಬಂದು ಚೀಟಿ ಪಡೆದರೂ ವೈದ್ಯರ ಭೇಟಿಗೆ ಸಂಜೆಯವರೆಗೆ ಕಾಯಬೇಕಾದ ಸ್ಥಿತಿಯಿದೆ. ವಿವಿಧ ಪರೀಕ್ಷೆಗಳು ವಿಳಂಬವಾಗುತ್ತಿವೆ. ಅನಾರೋಗ್ಯಕ್ಕೆ ಒಳಗಾಗಿದ್ದ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲು ಎರಡು ದಿನ ಅಲೆದಾಟ ನಡೆಸಬೇಕಾಯಿತು. ಆಸ್ಪತ್ರೆಯಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಆದಷ್ಟು ಬೇಗ ಹೆಚ್ಚಳ ಮಾಡಬೇಕು’ ಎಂದು ಅರಸೀಕರೆಯ ರಾಮಚಂದ್ರ ತಿಳಿಸಿದರು.

Highlights - ಅಂಕಿ–ಅಂಶಗಳು 530 ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಸಾಮಾನ್ಯ ಹಾಸಿಗೆಗಳು 27 ಐಸಿಯು ಹಾಸಿಗೆಗಳು 500–600 ಚಿಕಿತ್ಸೆ ಪಡೆಯುವ ಸರಾಸರಿ ಒಳರೋಗಿಗಳು 1,000–1,200 ದಿನವೊಂದರಲ್ಲಿ ಭೇಟಿ ನೀಡುವ ಹೊರರೋಗಿಗಳ ಸರಾಸರಿ ಸಂಖ್ಯೆ 500 ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು 134 ಟ್ರಾಮಾ ಕೇರ್ ಕೇಂದ್ರದಲ್ಲಿನ ಸಾಮಾನ್ಯ ಹಾಸಿಗೆಗಳು 36 ಟ್ರಾಮಾ ಕೇರ್ ಕೇಂದ್ರದಲ್ಲಿನ ಐಸಿಯು ಹಾಸಿಗೆಗಳು

Quote - ನೂತನ ಕಟ್ಟಡದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಲೋಕೋಪಯೋಗಿ ಇಲಾಖೆ ಇದರ ಹೊಣೆ ಹೊತ್ತಿದ್ದು ವರ್ಷಾಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ।ಡಾ. ದೀಪಕ್ ಎಸ್. ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ

Cut-off box - ವಿಳಂಬದಿಂದ ರೋಗಿಗಳಿಗೆ ಸಮಸ್ಯೆ ನಗರದಲ್ಲಿ 2020ರ ಮಾರ್ಚ್‌ ತಿಂಗಳಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ವಿಕ್ಟೋರಿಯಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿತ್ತು. ಇದರಿಂದಾಗಿ ಕೋವಿಡೇತರ ರೋಗಿಗಳು ಸಮಸ್ಯೆ ಎದುರಿಸಿದ್ದರು. ಕೋವಿಡ್ ನಿಯಂತ್ರಣಕ್ಕೆ ಬಂದ ಬಳಿಕ ಅನ್ಯ ಕಾಯಿಲೆಗಳ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ. ಹೀಗಾಗಿ ಪಶ್ಚಿಮ ಬಂಗಾಳ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಇಲ್ಲಿಗೆ ರೋಗಿಗಳು ಚಿಕಿತ್ಸೆಗೆ ಬರಲಾರಂಭಿಸಿದ್ದಾರೆ. ಆದರೆ ರೋಗಿಗಳಿಗೆ ಅನುಸಾರವಾಗಿ ಇಲ್ಲಿ ಹಾಸಿಗೆಗಳು ಇಲ್ಲದಿರುವುದರಿಂದ ದಾಖಲಾತಿಗೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.