ADVERTISEMENT

ಮಹಿಳೆಯರನ್ನು ಕಾಡುತ್ತಿದೆ ಮೂಳೆ ರಂಧ್ರತೆ: BMCRI ಡೀನ್ ಡಾ. ರಮೇಶ್ ಕೃಷ್ಣ ಕಳವಳ

ವಿಕ್ಟೋರಿಯಾ ಆಸ್ಪತ್ರೆಯಿಂದ ರಾಷ್ಟ್ರೀಯ ಮೂಳೆ–ಕೀಲು ಪಾಕ್ಷಿಕ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2023, 0:30 IST
Last Updated 5 ಆಗಸ್ಟ್ 2023, 0:30 IST
ರಾಷ್ಟ್ರೀಯ ಮೂಳೆ–ಕೀಲು ಪಾಕ್ಷಿಕ ದಿನಾಚರಣೆ ಪ್ರಯುಕ್ತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆಯ ಪರೀಕ್ಷೆ ನಡೆಸಲಾಯಿತು.
ರಾಷ್ಟ್ರೀಯ ಮೂಳೆ–ಕೀಲು ಪಾಕ್ಷಿಕ ದಿನಾಚರಣೆ ಪ್ರಯುಕ್ತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆಯ ಪರೀಕ್ಷೆ ನಡೆಸಲಾಯಿತು.   

ಬೆಂಗಳೂರು: ‘ಪ್ರತಿ ಐವರಲ್ಲಿ ಒಬ್ಬರನ್ನು ಕಾಡುತ್ತಿರುವ ಮೂಳೆ ರಂಧ್ರತೆ ಸಮಸ್ಯೆಯು, ಅಂಗವಿಕಲತೆಗೆ ಕಾರಣವಾಗುತ್ತಿದೆ. ಈ ಸಮಸ್ಯೆ ಋತುಚಕ್ರ ನಿಂತ ಮಹಿಳೆಯರನ್ನು ಹೆಚ್ಚಾಗಿ ಕಾಡಲಾರಂಭಿಸಿದೆ’ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಡೀನ್ ಡಾ. ರಮೇಶ್ ಕೃಷ್ಣ ಕೆ. ಕಳವಳ ವ್ಯಕ್ತಪಡಿಸಿದರು.

ವಿಕ್ಟೋರಿಯಾ ಆಸ್ಪತ್ರೆಯ ಅಸ್ಥಿಚಿಕಿತ್ಸಾ ಶಾಸ್ತ್ರ ವಿಭಾಗವು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ರಾಷ್ಟ್ರೀಯ ಮೂಳೆ ಮತ್ತು ಕೀಲು ಪಾಕ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.

‘ಮೂಳೆ ಸಾಂದ್ರತೆಯು ಕಡಿಮೆಯಾಗಿ, ಮೂಳೆಗಳು ದುರ್ಬಲವಾಗುವುದನ್ನೇ ಮೂಳೆ ರಂಧ್ರತೆ ಎನ್ನುತ್ತಾರೆ. ಈ ಸಮಸ್ಯೆಯು ವೃದ್ಧಾಪ್ಯದಲ್ಲಿ ಮಾಂಸ ಖಂಡದ ಶಕ್ತಿಯನ್ನು ಕುಂದಿಸಲಿದೆ. ಇದರಿಂದ ದೈನಂದಿನ ಚಟುವಟಿಕೆಗಳಿಗೆ ಸಮಸ್ಯೆಯಾಗುತ್ತದೆ. ಆದ್ದರಿಂದ ಮೂಳೆ ಸಾಂದ್ರತೆಯ ಬಗ್ಗೆ ನಿಯಮಿತವಾಗಿ ಪರೀಕ್ಷಿಸಿಕೊಂಡು, ಪ್ರಾರಂಭಿಕ ಹಂತದಲ್ಲಿಯೇ ಸಮಸ್ಯೆಯನ್ನು ಗುರುತಿಸಬೇಕು. ಇದರಿಂದ ಸಮಸ್ಯೆ ಉಲ್ಬಣಿಸುವುದನ್ನು ತಡೆಯಲು ಸಾಧ್ಯವಾಗುತ್ತದೆ. ಮೂಳೆ ಆರೋಗ್ಯ ಕಾಪಾಡಿಕೊಳ್ಳಲು ಪೋಷಕಾಂಶಯುಕ್ತ ಆಹಾರ ಸೇವನೆ ಜತೆಗೆ ನಿಯಮಿತ ವ್ಯಾಯಾಮ ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಮೊಣಕಾಲು ಹಾಗೂ ಕೀಲು ನೋವು, ನಿರಂತರ ಸೊಂಟ ನೋವು, ನಡೆಯಲು ಸಾಧ್ಯವಾಗದಿರುವುದು ಸೇರಿ ವಿವಿಧ ಸಮಸ್ಯೆಗಳು ಕಾಣಿಸಿಕೊಂಡಾಗ ವೈದ್ಯಕೀಯ ಸಹಾಯ ಪಡೆಯಬೇಕು. ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ವಿಭಾಗವು ಸುಮಾರು 60 ಸಾವಿರ ಹೊರರೋಗಿಗಳಿಗೆ ವೈದ್ಯಕೀಯ ಸೇವೆ ಒದಗಿಸಿದೆ. 2,500 ಮಂದಿಗೆ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. 250 ಪ್ರಕರಣಗಳಲ್ಲಿ ಕೀಲುಗಳ ಮರುಜೋಡಣೆ ಮಾಡಲಾಗಿದೆ. ಆಸ್ಪತ್ರೆಯಲ್ಲಿರುವ ಈ ವಿಭಾಗವು ಅತ್ಯಾಧುನಿಕ ವೈದ್ಯಕೀಯ ಸಾಧನಗಳನ್ನು ಹೊಂದಿದ್ದು, ಎಲ್ಲ ವಯೋಮಾನದವರಿಗೂ ಚಿಕಿತ್ಸೆ ಒದಗಿಸಲಾಗುತ್ತದೆ. ಜನರು ಇದರ ಲಾಭ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿಕೊಂಡರು.

ಬಿಎಂಸಿಆರ್‌ಐ ಆವರಣದಲ್ಲಿ ಮೂಳೆ ಸಾಂದ್ರತೆಯ ಪರೀಕ್ಷೆಯನ್ನು ಉಚಿತವಾಗಿ ಸಂಸ್ಥೆಯ ಸಿಬ್ಬಂದಿ ಹಾಗೂ ಜನರಿಗೆ ನಡೆಸಲಾಯಿತು. ವಿದ್ಯಾರ್ಥಿಗಳು, ಶುಶ್ರೂಷಕರು, ವೈದ್ಯಕೀಯ ಸಿಬ್ಬಂದಿ ಹಾಗೂ ಸ್ವಚ್ಛತಾ ಸಿಬ್ಬಂದಿಗೆ ಜೀವ ರಕ್ಷಕ ತರಬೇತಿ ನೀಡಲಾಯಿತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.