ಬೆಂಗಳೂರು:ಬಿಸಿಯೂಟ ಯೋಜನೆಗೆ ಸಂಬಂಧಿಸಿ ವಿದ್ವಾನ್ಉಮಾಕಾಂತ್ ಭಟ್ ಅವರುದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಉಮಾಕಾಂತ್ ಭಟ್ ಹೇಳಿದ್ದೇನು?
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲ ಹವ್ಯಕ ಮಹಾಸಭಾ ಮೂರು ದಿನಗಳ ಕಾಲ ಆಯೋಜಿಸಿದ್ದ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಎರಡನೇ ದಿನದ ಗೋಷ್ಠಿಯಲ್ಲಿಉಮಾಕಾಂತ್ ಭಟ್ ಮಾತನಾಡಿದ್ದರು. ಆ ಸಂದರ್ಭ ಅವರು, ‘ಉಪವಾಸ ಇದ್ದವನಿಗೆ ಮಾತ್ರ ಹಸಿವು ಗೊತ್ತಾಗುತ್ತದೆ. ಹಸಿವು ಗೊತ್ತಾದವನಿಗೆ ಮಾತ್ರ ಊಟದ ರುಚಿ ಗೊತ್ತಾಗುತ್ತದೆ. ಆದ್ದರಿಂದ ಹಸಿವು ಸಂಸ್ಕಾರಯುತವಾದ ವಿಷಯ. ಇವತ್ತು ಸರ್ಕಾರ ಬಹಳ ದೊಡ್ಡ ಮನಸ್ಸು ಮಾಡಿ, ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಸಾಯಂಕಾಲ ತಂಗಳದ ಊಟ, ಶಾಲೆಯ ಅವಧಿಯಲ್ಲಿ ಎಲ್ಲರಿಗೂ ನಿದ್ರೆ, ಇಂಥ ವ್ಯವಸ್ಥೆಗಳನ್ನೆಲ್ಲ ಮಾಡುತ್ತಿದೆ. ಆದರೆ, ಭಾರತ ದೇಶದ ಸಂಶೋಧನೆ ಇದಲ್ಲ’ಎಂದು ಸರ್ಕಾರದ ಯೋಜನೆಗಳನ್ನು ಉದ್ದೇಶಿಸಿ ಹೇಳಿದ್ದರು.
(ಬಿಸಿಯೂಟದ ಕುರಿತಾದ ಹೇಳಿಕೆ ಈ ವಿಡಿಯೊದ 0:08:25ರಿಂದ 0:09:04ರವರಗೆ ಇದೆ)
ಇದನ್ನೂ ಓದಿ:ಬಿಸಿಯೂಟ ನಮ್ಮ ಸಂಸ್ಕಾರ ಅಲ್ಲ: ಉಮಾಕಾಂತ್ ಭಟ್
‘ಮದ್ಯಾಹ್ನ ಊಟಕ್ಕೆ ಮೊಟ್ಟೆ ಕೊಡುವುದಕ್ಕೆ ವಿರೋಧಿಸಿದಿರಿ. ಈಗ ಮಧ್ಯಾಹ್ನಊಟಕ್ಕೂ ಖ್ಯಾತೆ ತೆಗಿತಾ ಇದ್ದೀರಿ. ಉಪವಾಸ ಇರುವ ವಯಸ್ಸು ಖಂಡಿತಾ ನಿಮ್ಮದು. ಆದರೆ ಮಕ್ಕಳ ಹೊಟ್ಟೆಮೇಲೆ ಏಕೆ ಪ್ರಹಾರ ಮಾಡುತ್ತಿದ್ದೀರಿ? ಬಿಸಿ ಊಟ ಲಕ್ಷಾಂತರ ಮಕ್ಕಳ ಹೊಟ್ಟೆಗೆ ತಂಪೆರೆದಿದೆ. ಪೋಷಕಾಂಶದ ಹೆಸರಿನಲ್ಲಿ ಬಿಸಿ ಊಟ ಬೇಡ ಅನ್ನುವವರು, ಬಿಸಿ ಊಟದಲ್ಲಿ ಮೊಟ್ಟೆ ಕೊಡಲು ಒತ್ತಾಯಿಸಲಿ. ಉಪವಾಸ ನಮ್ಮ ಸಂಸ್ಕಾರ ಅನ್ನುವವರು, ಉಂಡು ತಿಂದು ನಲಿಯಬೇಕಾದ ಮಕ್ಕಳ ಹೊಟ್ಟೆ ಮೇಲೆ ಕಲ್ಲು ಹಾಕದೆ ತಾವು ಬೇಕಾದರೆ ಉಪವಾಸವನ್ನೇ ಆಚರಿಸಲಿ’ ಎಂದು ಅಕ್ಷತಾ ಹುಂಚದಕಟ್ಟೆ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಉಮಾಕಾಂತ್ ಭಟ್ ಅವರು ನೀಡಿರುವ ಹೇಳಿಕೆಗೆ ಸಂಬಂಧಿಸಿದ ಪ್ರಜಾವಾಣಿ ವರದಿಯ ತುಣುಕನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಕವಯಿತ್ರಿ ಪ್ರತಿಭಾ ನಂದಕುಮಾರ್ ಊಟ ಮಾಡುತ್ತಿರುವ ಚಿತ್ರವೊಂದನ್ನು ಪ್ರಕಟಿಸಿ, ‘ಅತಿಯಾದ ಉಣ್ಣುವ ಶ್ರದ್ಧೆಯುಳ್ಳವರಿಂದ ಮಾತ್ರ ಇಂತಹ ಹೇಳಿಕೆ ಸಾಧ್ಯ’ ಎಂದು ಬರೆದಿದ್ದಾರೆ.
‘ಈ ವಿದ್ವಾನ್ ಉಮಾಕಾಂತ ಭಟ್ ಎಂದರೆ ಯಾರು. ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟ, ಸಂಜೆಯ ತಂಗಳೂಟ ಎಂದೆಲ್ಲ ಅಪಹಾಸ್ಯ ಮಾಡುತ್ತಾರೆ. ಸಾಲದ್ದಕ್ಕೆ ಬಿಸಿ ಊಟ ನಮ್ಮ ಸಂಸ್ಕೃತಿ ಅಲ್ಲ ಅಂತಾರೆ. ಉಪವಾಸವಿದ್ದು ನಿಯಂತ್ರಣ ಇಟ್ಟುಕೊಳ್ಳೊದೆ ನಮ್ಮ ಸಂಸ್ಕೃತಿ ಅಂತಾದರೆ ನಾಲಗೆಯನ್ನೇ ನಿಯಂತ್ರಣದಲ್ಲಿಟ್ಟುಕೊಳ್ಳಲಾಗದವರು! ಉಪನಿಷತ್ ಋಷಿಗಳು ಗುರುಕುಲದಲ್ಲಿ ಬಿಸಿ ಊಟ ಕೊಡ್ತಿದ್ರೊ ಇಲ್ವೊ ಎಂದು ಸ್ವಲ್ಪ ಓದಿಕೊಳ್ಳುವುದೊಳ್ಳೆಯದಿತ್ತು’ ಎಂದು ಅರವಿಂದ ಚೊಕ್ಕಾಡಿ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
‘ಇನ್ನು ಮೇಲೆ ಶಾಲೆಯಲ್ಲಿ ಮಕ್ಕಳನ್ನು ಉಪವಾಸ ಬೀಳಿಸಿ ಸಂಸ್ಕಾರ ಕಾಪಾಡೋಣ‘ ಎಂದು ಹರ್ಷಕುಮಾರ್ ಕುಗ್ವೆ ವ್ಯಂಗ್ಯವಾಡಿದ್ದಾರೆ.
ಫೇಸ್‌ಬುಕ್‌ನಲ್ಲಿ ಪ್ರಕಟವಾಗಿರುವ ಈ ಹೇಳಿಕೆಗಳಿಗೆ ಅನೇಕ ಮಂದಿ ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ಬಹುತೇಕರು ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು, ಈ ಹೇಳಿಕೆಯ ಅರ್ಥವೇನು? ಯಾಕಾಗಿ ಇಂತಹ ಹೇಳಿಕೆ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.